ಹಾವೇರಿ: ಸರ್ಕಾರವು ಸದುದ್ದೇಶದಿಂದ ಜಯಂತಿಗಳನ್ನು ಆಚರಿಸುತ್ತಿದೆ. ಆದರೆ ಇವು ಕೇವಲ ಒಂದು ಜಾತಿಗೆ ಸೀಮಿತವಾಗದೆ ಎಲ್ಲರೂ ಒಗ್ಗೂಡಿ ಆಚರಿಸಿದಾಗ ಮಾತ್ರ ಬುದ್ಧನ ಅಹಿಂಸೆ ಮತ್ತು ಶಾಂತಿ ತತ್ವಗಳು ಸಮಾಜಕ್ಕೆ ತಲುಪಲು ಸಾಧ್ಯ ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಹೇಳಿದರು. ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂದಿನ ಕಾಲಘಟ್ಟದಲ್ಲಿ ಜಯಂತಿಗಳು ಕೇವಲ ಸಾಂಕೇತಿಕವಾಗುತ್ತಿರುವುದು ವಿಷಾದನೀಯ. ಬುದ್ಧ ಯಾರೋ ಒಬ್ಬರಿಗೆ ಸೇರಿದವರಲ್ಲ ಅವರು ಇಡೀ ಜಗತ್ತಿಗೆ ದಾರಿದೀಪ. ಜಾತಿ-ಮತಗಳ ಬೇಲಿ ಹಾಕಿ ಮಹಾಪುರುಷರನ್ನು ಹಂಚಿಕೊಳ್ಳುವ ಬದಲು ಅವರ ವಿಚಾರಧಾರೆಗಳನ್ನು ಅರಿಯುವತ್ತ ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್., ಮಾತನಾಡಿ, ಅಜಂತಾ-ಎಲ್ಲೋರಾದಂತಹ ಗುಹೆಗಳು ಬುದ್ಧನ ಇತಿಹಾಸಕ್ಕೆ ಜೀವಂತ ಸಾಕ್ಷಿಯಾಗಿವೆ. ಅಂದಿನ ಕಾಲದ ಯಾಗ-ಯಜ್ಞಗಳ ಹೆಸರಿನಲ್ಲಿ ನಡೆಯುತ್ತಿದ್ದ ಹಿಂಸೆಯನ್ನು ತಡೆಯಲು ಬುದ್ಧ ಅಹಿಂಸೆಯ ಮಾರ್ಗ ತೋರಿದರು. ರೋಹಿಣಿ ನದಿಯ ನೀರಿಗಾಗಿ ನಡೆದ ಸಂಘರ್ಷದ ವೇಳೆ ಸಿದ್ಧಾರ್ಥನು ತೋರಿದ ಶಾಂತಿ ಮತ್ತು ಸೋದರತೆಯ ಗುಣಗಳೇ ಇಂದು ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಜಲ ನೀತಿ ರೂಪಿಸಲು ಪ್ರೇರಣೆಯಾದವು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಈ ಮೂವರು ಮಹಾನ್ ಮಾನವತಾವಾದಿಗಳು ಸಮಾಜದ ಕಂದಾಚಾರಗಳನ್ನು ತೊಡೆದುಹಾಕಿದ ಆಶಾಕಿರಣಗಳು ಎಂದು ಬಣ್ಣಿಸಿದರು. ಹಾಗೆಯೇ ಬೌದ್ಧ ಧರ್ಮದ ಅಹಿಂಸಾ ತತ್ವ, ಸಹೋದರತೆ ಹಾಗೂ ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹನೀಯರ ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕು, ಬುದ್ಧನ ತತ್ವಗಳು ಸಮಾಜದಲ್ಲಿ ಶಾಂತಿ ಮತ್ತು ಸಮಾನತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದರು.ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಾ. ಟಿ.ಎಂ. ಭಾಸ್ಕರ, ಬುದ್ಧನ ತತ್ವಗಳಲ್ಲಿ ಒಂದು ಅಕ್ಷರವೂ ಸುಳ್ಳಿಲ್ಲ ಕೇವಲ ಖಡ್ಗದಿಂದ ಜಗತ್ತನ್ನು ಆಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತಿದ್ದರಿಂದಲೇ ಸಾಮ್ರಾಟ ಅಶೋಕ ಬೌದ್ಧ ಧರ್ಮ ಸ್ವೀಕರಿಸಿದನು. ಬುದ್ಧನ ಜೀವನವು ಸಂಪೂರ್ಣವಾಗಿ ನೈತಿಕತೆಯ ಮೇಲೆ ನಿಂತಿದೆ. ಅಲ್ಲಿ ಮೋಸ, ಹಿಂಸೆಗೆ ಅವಕಾಶವಿಲ್ಲ. ಬುದ್ಧನ ಜೀವನ ಹಾಗೂ ತತ್ವಗಳು ಮಾನವಕುಲಕ್ಕೆ ದಾರಿದೀಪವಾಗಿವೆ ಎಂದು ತಿಳಿಸಿದರು. ಬುದ್ಧನು ಅಹಿಂಸೆ, ನೈತಿಕತೆ ಮತ್ತು ಸತ್ಯದ ಮಾರ್ಗವನ್ನು ಸಾರಿದ ಮಹಾನ್ ತತ್ವಜ್ಞಾನಿಯಾಗಿದ್ದಾರೆ. ಬೌದ್ಧ ಧರ್ಮದಲ್ಲಿ ಹಿಂಸೆ, ಮೋಸಕ್ಕೆ ಅವಕಾಶವಿಲ್ಲದೆ ನೈತಿಕ ಜೀವನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶರಣಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ ಸಮುದಾಯದ ಮುಖಂಡರು ಹಲವು ಗಣ್ಯರು ಉಪಸ್ಥಿತರಿದ್ದರು.
ಸರ್ವರೂ ಒಗ್ಗೂಡಿ ಜಯಂತಿ ಆಚರಣೆಯಿಂದ ಮಾತ್ರ ಬುದ್ಧ ಶಾಂತಿ ತತ್ವಗಳು ಸಮಾಜಕ್ಕೆ ತಲುಪಲು ಸಾಧ್ಯ
ಹಾವೇರಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಶ್ರೀ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.