ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಅಂತರ್ಜಾಲ ಬಳಕೆಯ ಸಮಯದಲ್ಲಿ ಜನರು ಜವಾಬ್ದಾರಿಯಿಂದ ಮತ್ತು ಎಚ್ಚರಿಕೆಯಿಂದ ವ್ಯವಹರಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ತಿಳಿಸಿದರುಅವರು ಮಂಗಳವಾರ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನರು ತ್ವರಿತ ವ್ಯವಹಾರಕ್ಕಾಗಿ ಆಧುನಿಕ ಡಿಜಿಟಲ್ ತಂತ್ರಜ್ಞಾನಗಳ ಮೊರೆ ಹೋಗುತಿದ್ದಾರೆ. ಅಲ್ಪಕಾಲದಲ್ಲಿ ಹೆಚ್ಚಿನ ಹಣ ಸಂಪಾದಿಸುವ, ಹಣ ದ್ವಿಗುಣಗೊಳಿಸುವ ಆಮಿಷಕ್ಕೆ ಬಲಿಯಾಗುತ್ತಿದ್ದಾರೆ. ಇವುಗಳ ಬಗ್ಗೆ ಜಾಗೃತಿ ವಹಿಸಿದಾಗ ಮಾತ್ರ ಆರ್ಥಿಕ ನಷ್ಟದಿಂದ ಪಾರಾಗಲು ಸಾಧ್ಯ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸೈಬರ್ ಕ್ರೈಂ ಪ್ರಕರಣಗಳ ತನಿಖೆ ಮಾಡುವುದು ಕಷ್ಟಸಾಧ್ಯ. ಆದ್ದರಿಂದ ಡಿಜಿಟಲ್, ಆನ್ಲೈನ್ ಹಣಕಾಸಿನ ವ್ಯವಹಾರಗಳನ್ನು ಜವಾಬ್ದಾರಿಯುತವಾಗಿ ಮಾಡಬೇಕು ಎಂದರು.
ವಿಧಾನಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಮಾತನಾಡಿ, ತಮ್ಮ ಸ್ವಂತ ಅನುಭವಗಳ ನಿದರ್ಶನಗಳನ್ನು ಹಂಚಿಕೊಂಡರು. ಲೀಡ್ ಬ್ಯಾಂಕ್ ಪ್ರಬಂಧಕ ಹರೀಶ್, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ ಹಾಗೂ ಬೆಂಗಳೂರು ಎನ್.ಐ.ಸಿ ಯ ಬಾಲಚಂದ್ರ ಸೈಬರ್ ಪ್ರಕರಣಗಳಾಗದಂತೆ ಎಚ್ಚರ ವಹಿಸುವ ಕುರಿತು ಮಾಹಿತಿ ನೀಡಿದರು.ಎನ್.ಐ.ಸಿ. ಅಧಿಕಾರಿ ಉಮಾಮಹೇಶ್ವರಿ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತಿತರರು ಇದ್ದರು.
ಡಯಟ್ ಉಪನ್ಯಾಸಕ ಡಾ. ಅಶೋಕ್ ಕಾಮತ್ ಸ್ವಾಗತಿಸಿ, ನಿರೂಪಿಸಿದರು...............................
ಜಿಲ್ಲೆಯಲ್ಲಿ 44 ಕೋಟಿ ರು. ಸೈಬರ್ ವಂಚನೆಜಿಲ್ಲಾ ಪೊಲೀಸ್ ಅಧಿಕ್ಷಕ ಡಾ. ಅರುಣ್ ಕೆ ಮಾತನಾಡಿ, ಪ್ರಸ್ತುತ ಸೈಬರ್ ಅಪರಾಧದಲ್ಲಿ ಶೇ. 80 ರಷ್ಟು ಹಣಕಾಸಿನ ವಂಚನೆ ಇವೆ. ಜಿಲ್ಲೆಯಲ್ಲಿ ಜನರು ಸಾಂಪ್ರದಾಯಿಕ ಅಪರಾಧದಿಂದ 4 ಕೋಟಿ ರು. ಹಣ ಕಳೆದುಕೊಂಡರೆ, ಸೈಬರ್ ಅಪರಾಧದಲ್ಲಿ 44 ಕೋಟಿ ರು. ಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಜನರು ಆರ್ಥಿಕ ವಹಿವಾಟು ಮಾಡುವಾಗ ಮೂಲಭೂತ ಅಂಶಗಳ ಬಗ್ಗೆ ಎಚ್ಚರವನ್ನು ವಹಿಸುವುದು ಅತ್ಯಂತ ಅವಶ್ಯ ಎಂದರು.