ಕಷ್ಟವನ್ನು ಇಷ್ಟದಿಂದ ನಿರ್ವಹಿಸಿದರಷ್ಟೇ ಇಷ್ಟಾರ್ಥ ಸಿದ್ಧಿ

| Published : Jul 18 2025, 12:56 AM IST

ಕಷ್ಟವನ್ನು ಇಷ್ಟದಿಂದ ನಿರ್ವಹಿಸಿದರಷ್ಟೇ ಇಷ್ಟಾರ್ಥ ಸಿದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಧನಾ ಪಯಣದಲ್ಲಿ ಮಾರ್ಗ ಮಧ್ಯದಲ್ಲಿ ಸೋಲು-ಗೆಲುವುಗಳು ಪರಸ್ಪರ ಪೂರಕವೇ ಹೊರತು ವೈರುಧ್ಧಗಳಲ್ಲ! ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀ ಅಭಿಪ್ರಾಯಪಟ್ಟರು. ಅವರು ಆಶ್ರಮದಲ್ಲಿ ನೆರವೇರಿದ ವಿದ್ಯಾರ್ಥಿ ಜೀವನದ ಸವಾಲುಗಳು; ಸರಿಯುತ್ತರ ಎಂಬ ವಿಶೇಷ ಯುವಸಮ್ಮೇಳನದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುಪೆಟ್ಟುತಿಂದ ಶಿಲೆಯಷ್ಟೇ ವಿಗ್ರಹವಾಗುತ್ತದೆ, ಪೂಜನೀಯವೂ ಆಗುತ್ತದೆ. ಇಷ್ಟ ಮತ್ತು ಸೋಲುಗಳಿಂದ ಧೃತಿಗೆಡದೆ ಪ್ರಯತ್ನವನ್ನು ಮುಂದುವರಿಸಬೇಕು. ಉದ್ಧಾರವೇ ನಮ್ಮಗುರಿಯೆಂದಾದರೂ ಅದನ್ನು ಮುಟ್ಟಲು ಹೆದ್ದಾರಿಯನ್ನೇ ಗುರ್ತಿಸಿ ಆ ಪಥದಲ್ಲೇ ಸಾಗಬೇಕು. ಸಾಧನಾ ಪಯಣದಲ್ಲಿ ಮಾರ್ಗ ಮಧ್ಯದಲ್ಲಿ ಸೋಲು-ಗೆಲುವುಗಳು ಪರಸ್ಪರ ಪೂರಕವೇ ಹೊರತು ವೈರುಧ್ಧಗಳಲ್ಲ! ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀ ಅಭಿಪ್ರಾಯಪಟ್ಟರು. ಅವರು ಆಶ್ರಮದಲ್ಲಿ ನೆರವೇರಿದ ವಿದ್ಯಾರ್ಥಿ ಜೀವನದ ಸವಾಲುಗಳು; ಸರಿಯುತ್ತರ ಎಂಬ ವಿಶೇಷ ಯುವಸಮ್ಮೇಳನದಲ್ಲಿ ಮಾತನಾಡಿದರು. ಮಾನವನ ದುಃಖಗಳಿಗೆ ಬಡತನವೇ ಕಾರಣ ಎಂಬುದು ಹೊರನೋಟಕ್ಕೆ ಗೋಚರಿಸಿದರೂ ಬಡತನಕ್ಕೆದುಶ್ಚಟ ಮತ್ತು ಮೈಗಳ್ಳತನಗಳೇ ಪ್ರಧಾನ ಕಾರಣಗಳು. ರಾಷ್ಟ್ರದ ಭವಿಷ್ಯವು ಅಲ್ಲಿನ ಪ್ರಜೆಗಳ ವ್ಯಕ್ತಿತ್ವವನ್ನು ಅವಲಂಬಿಸಿರುತ್ತವೆ. ಅಂತೆಯೇ ಇಂದಿನ ಮಕ್ಕಳೇ ಭವಿಷ್ಯದ ರಾಷ್ಟ್ರಸಂಪನ್ಮೂಲ. ಆದ್ದರಿಂದ ಆಸೆಗಳನಷ್ಟೇ ಪೋಷಿಸಿದರೆ ಆಸೆಬುರುಕರಾಗುತ್ತೇವೆ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಇಷ್ಟದಲ್ಲಿ ನಿರ್ವಹಿಸುತ್ತಾ ಸಾಗಿದಾಗ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದರು. ಆಶ್ರಮದ ಮತ್ತೋರ್ವ ಯತಿಗಳಾದ ಸ್ವಾಮಿ ಧೀರಾನಂದಜೀ ಮಹಾರಾಜರು ಮಾತನಾಡಿ, ತಂದೆ, ತಾಯಿಗಳು ಮಕ್ಕಳ ಮಾಂಸದ ಶರೀರಕ್ಕೆ ಜನ್ಮವಿತ್ತರೆ ಶಿಕ್ಷಕರು ಈ ಮಾಂಸದ ಮುದ್ದೆಗೆ ಆತ್ಮಶ್ರದ್ಧೆಯನ್ನು ತುಂಬುತ್ತಾರೆ ಎಂದರು. ಪ್ರತಿಯೊಬ್ಬರ ಜೀವನದಲ್ಲಿ ಸ್ವಪ್ರಯತ್ನ ಹಾಗೂ ಸತತ ಪ್ರಯತ್ನಕ್ಕೆ ಹೆಚ್ಚಿನ ಮಹತ್ವವಿದೆ. ಉತ್ತಮ ಚಿಂತನೆಗಳಿಂದ ವ್ಯಕ್ತಿಯು ‘ಹುಲಿ’ ಆದರೆ ಕಳಪೆ ವಿಚಾರಗಳಿಂದ ‘ನರಿ’ ಆಗುತ್ತಾನೆ. ನಿಜವಾದ ವಿದ್ಯಾವಂತರು ಮಾತಾ-ಪಿತೃ ಹಾಗೂ ಗುರುವನ್ನು ಗೌರವಿಸುತ್ತಾನೆ, ಸ್ವತಂತ್ರರಾಗಿ ಆಲೋಚಿಸುತ್ತಾನೆ, ಸ್ವಾವಲಂಬಿಯಾಗಿ ಬದುಕುತ್ತಾನೆ. ಸೇವಾದೃಷ್ಟಿ ಮತ್ತು ರಾಷ್ಟ್ರಭಕ್ತಿಯನ್ನು ಬೆಳೆಸಿಕೊಳ್ಳುತ್ತಾನೆ ಎಂದರು.ಶಿಕ್ಷಣ ತಜ್ಞ ಪ್ರೊ. ಚಂದ್ರಣ್ಣ, ಶಿಕ್ಷಕರಾದ ಪೂರ್ಣಿಮಾ ಮತ್ತು ನರಸಿಂಹಮೂರ್ತಿ ವೇದಿಕೆಯಲ್ಲಿದ್ದರು. ತುಮಕೂರಿನ ಕಾಳಿದಾಸ ಪ್ರೌಢಶಾಲೆ ಮತ್ತು ಬ್ರಹ್ಮಸಂದ್ರದ ಕೆ.ಮಲ್ಲಣ್ಣ ಸ್ಮಾರಕ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಈ ಯುವಸಮ್ಮೇಳನವು ಆಯೋಜನೆಗೊಂಡಿತ್ತು.