ಕನ್ನಡಪ್ರಭ ವಾರ್ತೆ ಅರಸೀಕೆರೆ
ಮೌಢ್ಯಾಚರಣೆಯನ್ನು ಬೇರು ಸಮೇತ ಕಿತ್ತೊಗೆಯಲು ಶಿಕ್ಷಣದಿಂದ ಮಾತ್ರ ಸಾಧ್ಯ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದೆ ಹೆಣ್ಣು ಮಕ್ಕಳ ಒಳಿತಿಗಾಗಿ, ಸಮಾನತೆಗಾಗಿ, ಹಕ್ಕುಗಳಿಗಾಗಿ ಶಿಕ್ಷಣದ ಮೂಲಕ ಅವರನ್ನು ಗಟ್ಟಿಗೊಳಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮತ್ತು ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಜಿ.ಕೆ ತಿಳಿಸಿದ್ದಾರೆ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಸೀಕೆರೆ ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯಚೀಲನಹಳ್ಳಿ ಗೊಲ್ಲರಹಟ್ಟಿಯಲ್ಲಿ ಏರ್ಪಡಿಸಲಾಗಿದ್ದ ಮುಟ್ಟಿನ ಸಮಯದಲ್ಲಿ ಮತ್ತು ಹೆರಿಗೆಯ ನಂತರ ಹೆಣ್ಣು ಮಕ್ಕಳನ್ನು ಊರಿನಿಂದ ಹೊರಗಿಡುವ ಅನಿಷ್ಟಾಚಾರಣೆಯ ನಿಷೇಧದ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹಿಂದಿನ ಕಾಲದಿಂದಲೂ ಜಾರಿಯಲ್ಲಿದ್ದ ಮೂಢನಂಬಿಕೆಗಳಿಗೆ ಬೇಸತ್ತು ಪತ್ರವನ್ನು ಮಹಿಳೆಯರು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಬರೆದು ಮೌಢ್ಯಾಚರಣೆಯನ್ನು ನಿಷೇಧಿಸುವಂತೆ ಮತ್ತು ಈ ಬಗ್ಗೆ ಜಾಗೃತಿ ಮೂಡಿಸಿ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿದ್ದು ಗ್ರಾಮದ ಹೆಣ್ಣು ಮಕ್ಕಳ ಆರೋಗ್ಯ, ರಕ್ಷಣೆ ಹಾಗೂ ಭವಿಷ್ಯದ ದೃಷ್ಟಿಯಿಂದ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ಶ್ಲಾಘಿಸಿದರು. ಹೆಣ್ಣು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿದ್ದಲ್ಲಿ ಸಮಾಜದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ, ಇದರಿಂದ ಪುರಾತನ ಕಂದಾಚಾರಗಳು ಮೂಢನಂಬಿಕೆಗಳನ್ನು ತೊಡೆದು ಹಾಕಬಹುದಾಗಿದೆ ಎಂದು ತಿಳಿಸಿದರು. ಪ್ರಕೃತಿ ಸಹಜವಾಗಿ ದೈವದತ್ತವಾಗಿ ಹೆಣ್ಣುಮಕ್ಕಳು ತಾಯಿಯಾಗುವ ಅವಕಾಶವನ್ನು ಹೊಂದಿದ್ದಾರೆ, ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಅಸಮಾನತೆಯಿಂದ ಕಾಣಲಾಗುತ್ತಿದೆ, ದೇವರ ಹೆಸರಿನಲ್ಲಿ ಆಚರಣೆಗಳ ನೆಪದಲ್ಲಿ ಶೋಷಣೆ ಮಾಡಲಾಗುತ್ತಿದೆ, ಇದು ಸಂಪೂರ್ಣವಾಗಿ ನಿಂತು ಹೋಗಬೇಕು ಬದಲಾಗುತ್ತಿರುವ ಜಗತ್ತಿನ ಸನ್ನಿವೇಶಗಳಿಗೆ ಅನುಗುಣವಾಗಿ ಹೆಣ್ಣುಮಕ್ಕಳು ಶಿಕ್ಷಣವನ್ನು ಪಡೆದುಕೊಳ್ಳಬೇಕು, ಹೆಣ್ಣು ಮಕ್ಕಳ ಒಳಿತಿಗಾಗಿ ಮೌಡ್ಯಾಚರಣೆಯನ್ನು ಕೈಬಿಟ್ಟು ಸಂಪೂರ್ಣವಾಗಿ ಬದಲಾಗಬೇಕು ಈ ನಿಟ್ಟಿನಲ್ಲಿ ಸಮುದಾಯದ ಎಲ್ಲಾ ಜನರು ದೃಢಸಂಕಲ್ಪ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಯಾದ ಮಂಜುಳಾ ರವರು ಮಾತನಾಡಿ ಅತಿ ಹೆಚ್ಚು ಗರ್ಭಕೊರಳಿನ ಕ್ಯಾನ್ಸರ್ ಕಂಡುಬರುತ್ತಿರುವುದು ಗೊಲ್ಲ ಸಮುದಾಯದ ಹೆಣ್ಣುಮಕ್ಕಳು ಮತ್ತು ಮಹಿಳೆಯರಲ್ಲಿ. ಆದುದರಿಂದ ಹೆಣ್ಣು ಮಕ್ಕಳಿಗೆ ಮುಟ್ಟಾದ ಸಮಯದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ತಿಳಿಸಬೇಕು, ಇದಕ್ಕಾಗಿ ದೇವರ ಹೆಸರಿನಲ್ಲಿ ಮೂಢನಂಬಿಕೆಯನ್ನು ಪಾಲಿಸುತ್ತಿದ್ದು ಹೆಣ್ಣುಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು ಇದನ್ನು ತಡೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗಂಡಸಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಆರತಿ ಟಿ ಅವರು ಮಾತನಾಡಿ, ಹಳೆಯ ಕಂದಾಚಾರಗಳು ಮೂಢನಂಬಿಕೆಗಳನ್ನು ಪಾಲಿಸದೆ ಉತ್ತಮವಾದ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು ಈ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲ ಶ್ರಮಿಸಬೇಕು, ಮೂಢನಂಬಿಕೆಗಳನ್ನು ಬೇರುಸಮೇತ ಕಿತ್ತೊಗೆಯಬೇಕು ಎಂದು ತಿಳಿಸಿದರು. ವಕೀಲರಾದ ಸಿದ್ದಮಲ್ಲಪ್ಪ ಅವರು ಮಾತನಾಡಿ ನಾನು ಗೊಲ್ಲ ಸಮುದಾಯಕ್ಕೆ ಸೇರಿದವನಾಗಿದ್ದು ಇಂತಹ ಅನಿಷ್ಟಾಚಾರಣೆಯ ಕುರಿತು ೨೦೦೯ನೇ ಇಸವಿಯಿಂದ ಈ ಬಗ್ಗೆ ಹೋರಾಟವನ್ನು ಮಾಡುತ್ತಿದ್ದು ಹಲವು ಗ್ರಾಮಗಳಲ್ಲಿ ಇಂತಹ ಅನಿಷ್ಟ ಆಚರಣೆಯನ್ನು ತೊಡೆದು ಹಾಕಿದ್ದೇವೆ. ಆದರೆ ಚೀಲನಹಳ್ಳಿ ಗ್ರಾಮದಲ್ಲಿ ಈ ಸಮಸ್ಯೆಯು ಇನ್ನು ಜೀವಂತವಾಗಿರುವುದು ಬೇಸರದ ಸಂಗತಿಯಾಗಿದೆ. ಆದ್ದರಿಂದ ಊರಿನ ಮುಖಂಡರು, ಪೂಜಾರಿಗಳು ಈ ಸಮಸ್ಯೆಯ ಕುರಿತು ಚರ್ಚೆಯನ್ನು ಮಾಡಿ ಒಮ್ಮತ ತೀರ್ಮಾನದಿಂದ ದೇವರ ಮುಂದೆ ಪ್ರಮಾಣವನ್ನು ಮಾಡುವ ಮೂಲಕ ಮೌಢ್ಯಾಚರಣೆಯ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಕಂಕಣಬದ್ಧರಾಗಬೇಕು ಎಂದು ಹೇಳುವ ಮೂಲಕ ಗ್ರಾಮದ ಮುಖಂಡರಿಗೂ ಸರ್ವರಿಗೂ ನ್ಯಾಯಾಧೀಶರ ಸಮ್ಮುಖದಲ್ಲಿ ಮುಂದೆ ಇಂತಹ ಅನಿಷ್ಟ ಪದ್ಧತಿಯನ್ನು ಆಚರಿಸುವುದಿಲ್ಲ ಎಂದು ದೇವರ ಹೆಸರಿನಲ್ಲಿ ಪ್ರಮಾಣ ಬೋಧನೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಅರಸೀಕೆರೆ ಸಿಡಿಪಿಒ ಯೋಗೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಯಶೋಧಮ್ಮ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪರಶಿವಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಸಂಯೋಜಕರಾದ ರೂಪವತಿ, ಚೀಲನಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಬಸವರಾಜು, ಬೆಲ್ಲವತ್ತಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಕುಮಾರ್, ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಮಾಜಿ ಸದಸ್ಯರು ಉಪಸ್ಥಿತರಿದ್ದರು.ಶಿಕ್ಷಣದಿಂದ ಮಾತ್ರ ಮೌಢ್ಯಾಚರಣೆ ಕಿತ್ತೊಗೆಯಲು ಸಾಧ್ಯ
ಮೌಢ್ಯಾಚರಣೆಯನ್ನು ಬೇರು ಸಮೇತ ಕಿತ್ತೊಗೆಯಲು ಶಿಕ್ಷಣದಿಂದ ಮಾತ್ರ ಸಾಧ್ಯ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದೆ ಹೆಣ್ಣು ಮಕ್ಕಳ ಒಳಿತಿಗಾಗಿ, ಸಮಾನತೆಗಾಗಿ, ಹಕ್ಕುಗಳಿಗಾಗಿ ಶಿಕ್ಷಣದ ಮೂಲಕ ಅವರನ್ನು ಗಟ್ಟಿಗೊಳಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮತ್ತು ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಜಿ.ಕೆ ತಿಳಿಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.