ರಾಮನಗರ: ರೈತರು ಸಮತೋಲನ ಗೊಬ್ಬರ ಬಳಕೆಗೆ ಆದ್ಯತೆ ನೀಡಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಅಂಬಿಕಾ ತಿಳಿಸಿದರು.
ನಗರದ ಉಪ ಕೃಷಿ ಕಚೇರಿಯಲ್ಲಿ ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಾಗೂ ಅಖಿಲ ಭಾರತ ಸುಸಂಘಟಿತ ಖುಷ್ಕಿ ಬೆಳೆ ಪ್ರಯೋಜನೆ ಮತ್ತು ಕೇಂದ್ರ ಪುರಸ್ಕೃತ ಆತ್ಮ ಯೋಜನೆಯ ಸಹಯೋಗದಲ್ಲಿ ಸಮತೋಲನ ಗೊಬ್ಬರಗಳ ಬಳಕೆಯ ಕುರಿತು ಜಾಗೃತಿ ಮೂಡಿಸಲು ಆಯೋಜಿಸಿದ್ದ ವಿಶೇಷ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಣ್ಣಿನ ಆರೋಗ್ಯ ಕಾಪಾಡಲು ಹಾಗೂ ಉತ್ತಮ ಉತ್ಪಾದನೆ ಪಡೆಯಲು ಸಮತೋಲನ ಗೊಬ್ಬರ ಬಳಕೆ ಅಗತ್ಯವೆಂದು ಹೇಳಿದರು.ಪ್ರಯೋಜನೆಯ ಮುಖ್ಯಸ್ಥ ಡಾ. ಮೂಡಲಗಿರಿಯಪ್ಪ ಮಾತನಾಡಿ, ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಗೊಬ್ಬರ ಬಳಕೆ ಮಾಡುವ ಮಹತ್ವವನ್ನು ತಿಳಿಸಿ, ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಡಾ. ವೆಂಕಟಗೌಡ ಅವರು, ಮಣ್ಣಿನ ಆರೋಗ್ಯ ಕಾಪಾಡಲು ಹಸಿರೆಲೆ ಗೊಬ್ಬರಗಳ (Green Manure) ಬಳಕೆ ಅತ್ಯಂತ ಉಪಯುಕ್ತ, ಹಸಿರೆಲೆ ಗೊಬ್ಬರಗಳು ಮಣ್ಣಿಗೆ ಅಗತ್ಯವಾದ ಸಾವಯವ ದ್ರವ್ಯವನ್ನು ಹೆಚ್ಚಿಸಿ, ಮಣ್ಣಿನ ರಚನೆ (soil structure) ಸುಧಾರಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು.
ಹಸಿರೆಲೆ ಗೊಬ್ಬರ ಬೆಳೆಗಳಾದ ಅಪ್ಸೆಣಬು (Sunhemp), ಚಂಬೆ (Dhaincha), ಹುರಳಿ ಹಾಗೂ ಇತರ ಎಲ್ಲಾ ದ್ವಿದಳ ಧಾನ್ಯ ಬೆಳೆಗಳು ಮಣ್ಣಿನಲ್ಲಿ ನೈಸರ್ಗಿಕವಾಗಿ ನೈಟ್ರೋಜನ್ ಸ್ಥಿರೀಕರಣ (Nitrogen fixation) ಮಾಡುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ, ಈ ಬೆಳೆಗಳನ್ನು 40-45 ದಿನಗಳಲ್ಲಿ ಬೆಳೆಸಿ, ನಂತರ ಮಣ್ಣಿನಲ್ಲಿ ಮಿಶ್ರಣ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ತಿಳಿಸಿದರು.ಹಸಿರೆಲೆ ಗೊಬ್ಬರಗಳಲ್ಲಿ ಮುಖ್ಯವಾಗಿ ನೈಟ್ರೋಜನ್ ಅಂಶ ಹೆಚ್ಚು ಇರುವುದರ ಜೊತೆಗೆ, ಕೆಲವು ಪ್ರಮಾಣದಲ್ಲಿ ಫಾಸ್ಫರಸ್ ಮತ್ತು ಪೊಟಾಶ್ ಅಂಶಗಳೂ ಲಭ್ಯವಿರುತ್ತವೆ. ಉದಾಹರಣೆಗೆ, ಅಪ್ಸೆಣಬು ಬೆಳೆ ಹೆಚ್ಚು ನೈಟ್ರೋಜನ್ ಒದಗಿಸುವುದರಿಂದ ಮುಂದಿನ ಬೆಳೆಗಳಿಗೆ ಪೋಷಕಾಂಶಗಳ ಕೊರತೆ ಆಗುವುದಿಲ್ಲ ಎಂದು ಹೇಳಿದರು.
ಹಸಿರೆಲೆ ಗೊಬ್ಬರಗಳ ಬಳಕೆಯಿಂದ ಮಣ್ಣಿನ ತೇವಾಂಶ ಕಾಯ್ದುಕೊಳ್ಳಲು ಸಹಾಯವಾಗುತ್ತದೆ, ಕೀಟ ಹಾಗೂ ರೋಗಗಳ ಪ್ರಭಾವ ಕಡಿಮೆಯಾಗುತ್ತದೆ ಹಾಗೂ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ, ಹಸಿರೆಲೆ ಗೊಬ್ಬರಗಳನ್ನು ರೈತರು ತಮ್ಮ ಬೆಳೆ ಚಕ್ರದಲ್ಲಿ ಅಳವಡಿಸಿಕೊಂಡರೆ, ದೀರ್ಘಕಾಲಿಕವಾಗಿ ಮಣ್ಣಿನ ಆರೋಗ್ಯವನ್ನು ಉಳಿಸಿಕೊಳ್ಳಬಹುದು ಮತ್ತು ಉತ್ತಮ ಉತ್ಪಾದನೆ ಪಡೆಯಬಹುದು ಎಂದು ಡಾ. ವೆಂಕಟಗೌಡ ಸಲಹೆ ನೀಡಿದರು.
ಡಾ. ವಾಸಂತಿ ಅವರು ಸಮತೋಲನ ಪೋಷಕಾಂಶಗಳ ಅಗತ್ಯತೆ ಕುರಿತು ವಿವರಿಸಿ, ನೈಟ್ರೋಜನ್, ಫಾಸ್ಫರಸ್ ಹಾಗೂ ಪೊಟಾಶ್ ಸೇರಿದಂತೆ ಎಲ್ಲಾ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕನಕಪುರ, ಮಾಗಡಿ ಹಾಗೂ ಚನ್ನಪಟ್ಟಣ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಮತ್ತು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ರೈತರು ಭಾಗವಹಿಸಿದ್ದರು.(ಫೋಟೋ ಕ್ಯಾಪ್ಞನ್)
30ಕೆಆರ್ ಎಂಎನ್ 2.ಜೆಪಿಜಿರಾಮನಗರದ ಉಪ ಕೃಷಿ ಕಚೇರಿಯಲ್ಲಿ ಸಮತೋಲನ ಗೊಬ್ಬರಗಳ ಬಳಕೆಯ ಕುರಿತು ಜಾಗೃತಿ ಮೂಡಿಸಲು ವಿಶೇಷ ಆಂದೋಲನ ಕಾರ್ಯಕ್ರಮ ನಡೆಯಿತು.