ಸಾರಾಂಶ
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಕಳೆದ ಒಂದು ತಿಂಗಳಿಂದ ಮಳಿ, ಹೊಳಿ ಬಂದು ಕೂಲಿನೂ ಸಿಗವಲ್ದು. ಖಾತ್ರಿ ಯೋಜನೆದಾಗ ಕೆಲಸ ಮಾಡಿ ಒಂದೂವರೆ ತಿಂಗ್ಳಾದ್ರು ಹಣ ಹಾಕವಲ್ರು. ಒಂದ್ ಹೊತ್ತು ರೊಟ್ಟಿಗೂ ಗತಿ ಇಲ್ಲದಂಗಾಗೈತ್ರಿ...
ಇದು ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ಅಳಲು.ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಬರೋಬ್ಬರಿ 16.85 ಕೋಟಿ ರು. ಬಾಕಿಯಿದೆ. ಕೂಲಿ ಹಣವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳ ಕಾರ್ಮಿಕರು ನಿತ್ಯವೂ ತಮ್ಮ ಕೂಲಿ ಹಣದ ಬರುವಿಕೆಗಾಗಿಯೇ ಕಾಯುತ್ತ ಕುಳಿತುಕೊಳ್ಳುವಂತಾಗಿದೆ.
₹ 16.85 ಕೋಟಿ ಬಾಕಿ:ಜಿಲ್ಲೆಯಲ್ಲಿ ಕಳೆದ ಜೂನ್ ಬಳಿಕ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಕೂಲಿ ಪಾಪತಿಯಾಗಿಲ್ಲ. ಕೇಂದ್ರ ಸರ್ಕಾರ ಕಳೆದ ಏಪ್ರಿಲ್‌ನಿಂದ ಯೋಜನೆಯಲ್ಲಿ ದುಡಿದವರಿಗೆ ದಿನಕ್ಕೆ ₹ 349 ಕೂಲಿ ಪಾವತಿಸುತ್ತಿದೆ. ಕಳೆದ ವರ್ಷ ಬರಗಾಲದಿಂದ ಕಂಗೆಟ್ಟಿದ್ದ ಬಡ ಕಾರ್ಮಿಕರು ಗುಳೆ ಹೋಗದೆ ಉದ್ಯೋಗ ಖಾತ್ರಿ ಯೋಜನೆಯನ್ನೇ ಸದ್ಬಳಕೆ ಮಾಡಿಕೊಂಡಿದ್ದರು. ಜೂನ್‌ವರೆಗೆ ಮಾಡಿದ ಕೆಲಸಕ್ಕೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದೆ. ಆದರೆ, ಆ ಬಳಿಕ ಮಾಡಿದ ಕೆಲಸಕ್ಕೆ ಇದುವರೆಗೆ ಹಣ ಬಂದಿಲ್ಲ. ಒಂದು ಲಕ್ಷ ಮಾನವ ದಿನಕ್ಕೂ ಹೆಚ್ಚಿನ ದಿನದ ಕೂಲಿ ಹಣ ಪಾವತಿಯಾಗಬೇಕಿದೆ. ಕೇಂದ್ರ ಸರ್ಕಾರದಿಂದ ನೇರವಾಗಿ ಫಲಾನುಭವಿ ಖಾತೆಗೆ ಹಣ ಬರಬೇಕಿದೆ. ಪ್ರತಿಯೊಬ್ಬ ಕೂಲಿ ಕಾರ್ಮಿಕರಿಗೂ ಹತ್ತಾರು ಸಾವಿರ ರು. ಬರುವುದು ಬಾಕಿಯಿದೆ. ಮಾಡಿದ ಕೆಲಸಕ್ಕೆ ಕೂಲಿ ಸಿಗದೇ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.ಮಳೆಯಲ್ಲಿ ಕೆಲಸವೂ ಇಲ್ಲ:ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದೀಚೆಗೆ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಉದ್ಯೋಗ ಖಾತ್ರಿ ಕಾಮಗಾರಿ ಬಹುತೇಕ ಸ್ಥಗಿತಗೊಂಡಿದೆ. ಜತೆಗೆ, ಅತಿಯಾದ ಮಳೆಯಿಂದ ಕೃಷಿ ಸೇರಿದಂತೆ ಬಹುತೇಕ ಎಲ್ಲ ಕಾಮಗಾರಿ ಬಂದ್ ಆಗಿದ್ದರಿಂದ ಸ್ಥಳೀಯವಾಗಿ ಕಾರ್ಮಿಕರ ಕೈಗೆ ಕೆಲಸವೇ ಇಲ್ಲದಂತಾಗಿದೆ. ಹೊಲಗದ್ದೆ ಇದ್ದವರು ಬಿತ್ತನೆ ಮಾಡಿ ಅವರದೇ ಕೆಲಸವನ್ನಾದರೂ ಮಾಡಿಕೊಳ್ಳುತ್ತಾರೆ, ಆದರೆ, ನಮ್ಮಂಥ ಬಡವರಿಗೆ ಹೊಲವೂ ಇಲ್ಲ. ಕೂಲಿಯನ್ನೇ ನಂಬಿ ಬಂದಿರುವ ನಮ್ಮಂಥವರಿಗೆ ಕೆಲಸವೇ ಸಿಗುತ್ತಿಲ್ಲ. ಇದರಿಂದ ಬಹಳ ತೊಂದರೆಯಾಗಿದೆ. ಖಾತ್ರಿ ಯೋಜನೆಯಲ್ಲಿ ನಾವು ಮಾಡಿದ ಕೆಲಸದ ಹಣವನ್ನಾದರೂ ನೀಡಿದರೆ ಸ್ವಲ್ಪ ದಿನ ಜೀವನ ನಿರ್ವಹಣೆಗೆ ಅನುಕೂಲವಾಗುತ್ತಿತ್ತು. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಬರುತ್ತೆ ಎಂದು ಹೇಳುತ್ತಲೇ ಇದ್ದಾರೆ ಎಂದು ಖಾತ್ರಿ ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಬಡ ಕೂಲಿ ಕಾರ್ಮಿಕರು ದುಡಿದ ಹಣ ಇಷ್ಟು ದಿನವಾದರೂ ಬಾರದ್ದರಿಂದ ಸಮಸ್ಯೆಯಾಗಿದೆ.ಮಳೆಯಿಂದ ಬೇರೆ ಕೆಲಸವೂ ಸಿಗುತ್ತಿಲ್ಲ. ಈಗ ಬೇರೆ ಹಬ್ಬಗಳು ಬರುತ್ತಿವೆ. ಏನು ಮಾಡಬೇಕು ಎಂಬುದು ಕಾರ್ಮಿಕರಿಗೆ ಗೊತ್ತಾಗದಂತಾಗಿದೆ. ಆದಷ್ಟು ಬೇಗ ಕೂಲಿ ಹಣ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ ಕಾರ್ಮಿಕ ಸಂಘಟನೆ ಮುಖಂಡ ಎಸ್.ಡಿ. ಬಳಿಗಾರ ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಕಳೆದ ಜೂನ್ ಅಂತ್ಯದವರೆಗಿನ ಹಣ ಪಾವತಿಯಾಗಿದೆ. ಆ ಬಳಿಕದ ಕೈಗೊಂಡ ಕಾಮಗಾರಿಗೆ ಸಂಬಂಧಿಸಿದಂತೆ 16.85 ಕೋಟಿ ರು. ಬಾಕಿಯಿದೆ. ಇದನ್ನುಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದಷ್ಟು ಬೇಗ ಕಾರ್ಮಿಕರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಅಕ್ಷಯ ಶ್ರೀಧರ್ ಹೇಳಿದ್ದಾರೆ.