ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರಿಲ್ಲ. ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ಬರೋಬ್ಬರಿ 332ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕೇವಲ 4 ಜನ ಉಪನ್ಯಾಸಕರು ಪಾಠ ಬೋಧನೆಗೆ ದಿನವೂ ಹರಸಾಹಸ ಪಡುತ್ತಿದ್ದಾರೆ.

ಪ್ರಹ್ಲಾದ ಗುಡಿ

ಕನ್ನಡಪ್ರಭ ವಾರ್ತೆ ಸಿಂಧನೂರು

ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರಿಲ್ಲ. ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ಬರೋಬ್ಬರಿ 332ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕೇವಲ 4 ಜನ ಉಪನ್ಯಾಸಕರು ಪಾಠ ಬೋಧನೆಗೆ ದಿನವೂ ಹರಸಾಹಸ ಪಡುತ್ತಿದ್ದಾರೆ.

2025-26ನೇ ಸಾಲಿನಲ್ಲಿ ಈ ಕಾಲೇಜಿನ ವಿವಿಧ ವಿಭಾಗದ ದ್ವಿತೀಯ ಪಿಯಸಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಪಾಸಾದ ಹಿನ್ನೆಲೆಯಲ್ಲಿ, ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾವಕಾಶ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನ್ಯಾಸಕರನ್ನು ನೇಮಕ ಮಾಡದೇ ಇರುವುದರಿಂದ ಪಠ್ಯ ಹಾಗೂ ಲ್ಯಾಬ್ (ಪ್ರಯೋಗಾಲಯ) ಚಟುವಟಿಕೆಗಳನ್ನು ನಿಗದಿಯಂತೆ ಕೈಗೊಳ್ಳಲು ಉಪನ್ಯಾಸಕರಿಗೆ ಹೊರೆಯಾಗಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಆಧಾರಸ್ತಂಭ: ಖಾಸಗಿ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ಪಾವತಿಸಿ ಅಭ್ಯಾಸ ಮಾಡಲಾಗದ ಬಡ ಮತ್ತು ಮಧ್ಯಮ ವರ್ಗದ ಬಹಳಷ್ಟು ವಿದ್ಯಾರ್ಥಿಗಳಿಗೆ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಶೈಕ್ಷಣಿಕವಾಗಿ ಆಧಾರಸ್ತಂಭವಾಗಿದೆ. ಆದರೆ ಈ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕಾಗಿದೆ.

ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ 208, ದ್ವಿತೀಯ ಪಿಯುಸಿ 124 ಒಟ್ಟು 332, ಕಲಾ 120 ಹಾಗೂ ವಾಣಿಜ್ಯ ವಿಭಾಗದಲ್ಲಿ 85 ವಿದ್ಯಾರ್ಥಿಗಳು ಕಲಿಯುತ್ತಾರೆ. ವಿಜ್ಞಾನ ವಿಭಾಗ ಮತ್ತು ಕಲಾ ವಿಭಾಗದಲ್ಲಿ ಉಪನ್ಯಾಸಕರ ಕೊರತೆ ಉಂಟಾಗಿದೆ.

ವಿಜ್ಞಾನ ವಿಭಾಗದ ಉಪನ್ಯಾಸಕರ ನೇಮಕಾತಿ ಅವಶ್ಯಕ

“ವಿಜ್ಞಾನ ವಿಭಾಗಕ್ಕೆ ಪ್ರಸಕ್ತ ಸಾಲಿನಲ್ಲಿ 208 ವಿದ್ಯಾರ್ಥಿಗಳು ನೋಂದಣಿ ಪಡೆದುಕೊಂಡಿದ್ದಾರೆ. 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನವೂ ತರಗತಿಗಳಿಗೆ ಹಾಜರಾಗುತ್ತಾರೆ. ಇಷ್ಟು ವಿದ್ಯಾರ್ಥಿಗಳಿಗೆ ಒಂದೇ ಬಾರಿಗೆ ಕ್ಲಾಸ್ ಮಾಡಲಾಗುತ್ತಿದ್ದು, ಎರಡು ಸೆಕ್ಷನ್ ಆದರೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಾಧ್ಯ. ಈಗ ಸದ್ಯ ಕೇವಲ ಇಬ್ಬರು ಖಾಯಂ ಹಾಗೂ ಇಬ್ಬರು ಅತಿಥಿಗಳು ಸೇರಿ ಒಟ್ಟು ನಾಲ್ಕು ಜನ ಉಪನ್ಯಾಸಕರಿದ್ದು, ಆದಷ್ಟು ಬೇಗ ಹೆಚ್ಚುವರಿ ಉಪನ್ಯಾಸಕರನ್ನು ನೇಮಕ ಮಾಡಬೇಕು” ಎಂದು ವಿದ್ಯಾರ್ಥಿ ಪಾಲಕರೊಬ್ಬರು ಒತ್ತಾಯಿಸಿದ್ದಾರೆ.

ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆ

“ಕಲಾ ವಿಭಾಗಕ್ಕೆ ಒಬ್ಬರೇ ಸಮಾಜಶಾಸ್ತç ಉಪನ್ಯಾಸಕರಿದ್ದು, ಆದರೆ ಅವರನ್ನೂ ಸಹ 3 ದಿನ ಅಂಬಾಮಠದ ಕಾಲೇಜಿಗೆ ಎರವಲು ಸೇವೆಗೆ ನಿಯೋಜಿಸಲಾಗಿದೆ. ಇದರಿಂದ ಪಠ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಸಮಸ್ಯೆಯಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 120 ವಿದ್ಯಾರ್ಥಿಗಳಿದ್ದು, ಅವರಿಗೆ ಪಾಠ ಬೋಧನೆ ಜೊತೆಗೆ ಗ್ರಾಮೀಣ ಪ್ರದೇಶದ ಇನ್ನೊಂದು ಕಾಲೇಜಿಗೆ ಬೋಧಿಸಲು ಉಪನ್ಯಾಸಕರು ಅಲೆದಾಡುವಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಮಸ್ಯೆಯಾಗಿದೆ. ಹಾಗಾಗಿ ಸಮಾಜಶಾಸ್ತç ಉಪನ್ಯಾಸಕರನ್ನು ಪ್ರಸ್ತುತ ಕಾಲೇಜಿನಲ್ಲೇ ಉಳಿಸಿ, ಅಂಬಾಮಠ ಕಾಲೇಜಿಗೆ ಬೇರೊಬ್ಬ ಅತಿಥಿ ಉಪನ್ಯಾಸಕರನ್ನು ನೇಮಿಸಿ ಸಮಸ್ಯೆ ಪರಿಹರಿಸಬೇಕೆಂದು ವಿದ್ಯಾರ್ಥಿ ಪಾಲಕರು” ಮನವಿ ಮಾಡಿದ್ದಾರೆ.

ಜನಪ್ರತಿನಿಧಿಗಳು ಗಮನಹರಿಸಲಿ

ಕಳೆದ ಕೆಲವು ದಿನಗಳಿಂದ ಕಾಲೇಜು ತರಗತಿಗಳು ಆರಂಭವಾಗಿದ್ದು, ಆದಷ್ಟು ಶೀಘ್ರ ಸ್ಥಳೀಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನ ಸೆಳೆದು ವಿಜ್ಞಾನ ವಿಭಾಗಕ್ಕೆ ಇನ್ನೂ 4 ಜನ ಉಪನ್ಯಾಸಕರನ್ನು ನೇಮಿಸಬೇಕು ಹಾಗೂ ಕಲಾ ವಿಭಾಗದ ಸಮಾಜಶಾಸ್ತç ಉಪನ್ಯಾಸಕರನ್ನು ಬೇರೆ ಕಾಲೇಜಿಗೆ ಎರವಲು ಸೇವೆಗೆ ನಿಯೋಜಿಸಿರುವುದನ್ನು ರದ್ದುಪಡಿಸಬೇಕು ಹಾಗೂ ಕಾಲೇಜಿಗೆ ಅವಶ್ಯವಿರುವ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ವಿದ್ಯಾರ್ಥಿ ಪಾಲಕರಾದ ಸೋಮನಾಥ, ಬಸವರಾಜ ಹಾಗೂ ನಾಗರಾಜ ಅವರು ಆಗ್ರಹಿಸಿದ್ದಾರೆ.