ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಸಮಾಜದಲ್ಲಿ ಎಲ್ಲಾ ವೃತ್ತಿಗಳಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಶಿಕ್ಷಕ ವೃತ್ತಿಗೆ ನೀಡಲಾಗಿದೆ. ಶೈಕ್ಷಣಿಕ ಚಟುವಟಿಕೆಗಳು ನಿರಂತರ ನಡೆಯಬೇಕಾದರೆ ಅದರ ಅಳಿವು ಉಳಿವು ಶಿಕ್ಷಕರ ಮೇಲೆ ನಿಂತಿದೆ ಎಂದು ಸಮಾಜ ಸೇವಕ ಹಾಗೂ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.ಪಟ್ಟಣದ ಎಚ್.ಪಿ.ಆರ್. ನರ್ಸಿಂಗ್ ಕಾಲೇಜಿನಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ.ಸತ್ಯನಾರಾಯಣರಿಗೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತನಾಡಿ ಸತ್ಯನಾರಾಯಣ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿದ ಕೇವಲ ೯ ತಿಂಗಳಿನಲ್ಲಿ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಸೌಹಾರ್ದಯುತೆಯಿಂದ ಬೆರೆತು ಉತ್ತಮ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಸೇವೆ ಅವಿಸ್ಮರಣೀಯ. ಸಾಮಾನ್ಯನ ದೇಶದ ಸತ್ಪ್ರಜೆಯಾಗಿ ಮಾಡುವ ಶಕ್ತಿ ಕೇವಲ ಗುರುವಿನಲ್ಲಿ ಮಾತ್ರ ಕಾಣಲು ಸಾಧ್ಯ. ಸೇವೆ ಸಲ್ಲಿಸಿದ ಇಂತಹ ಅಧಿಕಾರಿಗಳಿಗೆ ಗೌರವ ಸಮರ್ಪಿಸುವುದರಿಂದ ಧನ್ಯತಾಭಾವ ಲಭಿಸುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯನಾರಾಯಣ ಮಾತನಾಡಿ, ಶಿಕ್ಷಕರು ಸಮಾಜದ ನಿರ್ಮಾತೃ. ಸುಸಂಸ್ಕೃತ ಸಮಾಜ ಕಟ್ಟುವಲ್ಲಿ ಇವರ ಪಾತ್ರ ಗುರುತರವಾದ್ದು. ರಾಜ್ಯದ ಹಲವು ಜಿಲ್ಲೆಗಳಲ್ಲಿ, ತಾಲೂಕಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಆತ್ಮ ತೃಪ್ತಿ ತಮಗಿದೆ. ತಾಲೂಕಿನಲ್ಲಿ ೯ ತಿಂಗಳು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ನನ್ನ ಇಲಾಖೆಯ ಎಲ್ಲಾ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಉತ್ತಮ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಮಹೇಶ್ ಖಾರ್ವಿ, ಎಚ್.ಪಿ.ಆರ್. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್, ನಾಗರಾಜ್, ನಿವೃತ್ತ ಶಿಕ್ಷಕರಾದ ಸದಾನಂದ, ಸಂಪತ್ ಕುಮಾರ್, ಅಕ್ಕನ ಬಳಗದ ರೇಣುಕಮ್ಮ ಗೌಳಿ, ಶ್ರೀಧರ್ ನೆಮ್ಮದಿ, ಶಿಕ್ಷಕ ರಾಘವೇಂದ್ರ, ಮಂಜುನಾಥ್, ಶಕ್ತಿಪ್ರಸಾದ್ ಸೇರಿ ಮೊದಲಾದವರಿದ್ದರು.