ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮತದಾನ ಒಂದು ಸಾರ್ವಭೌಮ ಅಧಿಕಾರ. ಹಕ್ಕನ್ನು ಚಲಾಯಿಸಿದಾಗ ಮಾತ್ರ ಸಮಾಜದಲ್ಲಿ ಆಗುವ ತಪ್ಪನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶ ಆನಂದ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, 18 ವರ್ಷ ತುಂಬಿದ ಯುವ ಸಮೂಹವನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಹಾಗೂ ಅವರಿಗೆ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತದಾನ ದಿನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ವೃದ್ಧರೂ ಮತದಾನದಲ್ಲಿ ತೋರಿಸುತ್ತಿರುವ ಉತ್ಸಾಹ ಯುವ ಜನತೆಯಲ್ಲಿ ಕಾಣುತ್ತಿಲ್ಲ. ಶೇ.65-70 ರಷ್ಟು ಮಾತ್ರ ಮತ ಚಲಾವಣೆ ಆಗುತ್ತಿದೆ. ದೇಶದಲ್ಲಿ ಶೇ.100ಕ್ಕೆ ನೂರರಷ್ಟು ಮತ ಚಲಾವಣೆ ಆಗದಿರುವುದು ವಿಪರ್ಯಾಸ. ದೇಶದ ಯುವ ಜನತೆ ಇಚ್ಛಾಶಕ್ತಿ ಇದ್ದರೆ ಮಾತ್ರ ಮತದಾನದ ಪ್ರಮಾಣವನ್ನು ಶೇ.100ರಷ್ಟು ಹೆಚ್ಚಿಸಬಹುದು ಎಂದರು.ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಕಾನೂನು ವ್ಯವಸ್ಥೆ ಇಲ್ಲದಿದ್ದರೆ ಅಲ್ಲಿ ಬಲ ಇರುವವರು ಬಲಹೀನರ ಮೇಲೆ ಅಧಿಪತ್ಯ ಸ್ಥಾಪಿಸುತ್ತಾರೆ. ಆದರೆ, ಭಾರತೀಯ ಸಂವಿಧಾನ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕೊಟ್ಟು ಎಲ್ಲರಿಗೂ ಬಲ ನೀಡಿದೆ. ಮತದಾನ ಮಾಡಿ ಉತ್ತಮ ಸಮಾಜ ನಿರ್ಮಾಣ ಮಾಡಿ ಎಂದರು.
ವ್ಯವಸ್ಥಿತ ಕಾನೂನು ರೂಪಿಸುವ ಅಧಿಕಾರ ಜನಪ್ರತಿನಿಧಿಗಳಲ್ಲಿದೆ. ಅದರೆ, ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಂವಿಧಾನ ನಮಗೆ ನೀಡಿದೆ. ಮತದಾನದ ಮಹತ್ವದ ಬಗ್ಗೆ ತಿಳಿದುಕೊಳ್ಳಿ ಮತ್ತು ನಿಮ್ಮ ಸುತ್ತ ಮುತ್ತ ಇರುವವರಿಗೂ ತಿಳಿಸಿ ಎಂದರು.ಅಪಾರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ದೇಶದಲ್ಲಿ 9 ಲಕ್ಷಕ್ಕೂ ಮತಗಟ್ಟೆಗಳಿವೆ. ಎಲ್ಲಾ ಮತಗಟ್ಟೆಗಳಲ್ಲೂ ಮತದಾನ ದಿನ ಆಚರಿಸಲಾಗುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ವ್ಯವಸ್ಥಿತ ಚುನಾವಣೆ ನಡೆಯುವುದು ಭಾರತದಲ್ಲೇ ಎಂದರು.
ಉತ್ತಮ ನಾಯಕರನ್ನು ಆಯ್ಕೆಯಾಗಲು ನಾಗರೀಕರು ಯಶಸ್ವಿಯಾದರೆ, ಉತ್ತಮ ದೇಶ ನಿರ್ಮಾಣಕ್ಕೆ ಬೂನಾದಿ ಹಾಕಿದಂತೆ. ಯುವ ಜನತೆ ಎಚ್ಚೆತ್ತುಕೊಂಡು ಮತದಾನ ಮಹತ್ವ ತಿಳಿಸುವ ಕುರಿತು ಯುವ ಜನತೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮತದಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.ವಿವಿಧ ಶೈಲಿಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ ಇರುವ ಭಾರತದಲ್ಲಿ ಎಲ್ಲಾರನ್ನು ಪರಿಗಣಿಸಿ ಒಟ್ಟಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣ ಮಾಡಲು ಮತದಾನದಿಂದ ಮಾತ್ರ ಸಾಧ್ಯ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮತದಾನಕ್ಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುತ್ತೇನೆ ಎಂಬ ಧ್ಯೇಯ ವಾಕ್ಯವನ್ನು ಈ ಬಾರಿಯ ಮತದಾನ ದಿನಾಚರಣೆಯಲ್ಲಿ ಬೋಧಿಸಲಾಯಿತು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್, ನಗರಸಭೆ ಆಯುಕ್ತೆ ಪಂಪಶ್ರೀ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.