ಮಕ್ಕಳಿಗೆ ಸಂಸ್ಕಾರ ಕೊಡುವ ಶಕ್ತಿ ತಾಯಂದಿರಿಗೆ ಮಾತ್ರ ಇದೆ: ನಿರ್ಮಲಾನಂದನಾಥ ಶ್ರೀ

| Published : Jul 11 2025, 11:48 PM IST

ಮಕ್ಕಳಿಗೆ ಸಂಸ್ಕಾರ ಕೊಡುವ ಶಕ್ತಿ ತಾಯಂದಿರಿಗೆ ಮಾತ್ರ ಇದೆ: ನಿರ್ಮಲಾನಂದನಾಥ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಬಹುಮುಖ್ಯವಾಗಿ ಮಕ್ಕಳನ್ನು ಹೆತ್ತು, ಬೆಳೆಸಿ ಸಂಸ್ಕಾರ ಕೊಡುವ ಶಕ್ತಿ ಇರುವುದು ತಾಯಂದಿರಿಗೆ ಮಾತ್ರ. ಆಧುನಿಕತೆ ಕಾಲದಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿರುವ ಸಂದರ್ಭದಲ್ಲಿ ಸಂಸ್ಕಾರಯುತ ಕಾರ್ಯಕ್ರಮಗಳು ತಾಯಂದಿರಿಗೆ ಹೆಚ್ಚು ಹೆಚ್ಚು ಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಕ್ಕಳಿಗೆ ಸಂಸ್ಕಾರ ಕೊಡುವ ಶಕ್ತಿ ಇರುವುದು ಕೇವಲ ತಾಯಂದಿರಿಗೆ ಮಾತ್ರ. ತಾಯಂದಿರಿಗೆ ಸಂಸ್ಕಾರವಿಲ್ಲವೆಂದರೆ ಅಪ್ಪಂದಿರು ಏನೂ ಮಾಡಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಎಂ.ಸಿ.ರಸ್ತೆ ಪಕ್ಕದಲ್ಲಿರುವ ಶ್ರೀಬಾಲಗಂಗಾಧರನಾಥ ಸಮುದಾಯ ಭವನದಲ್ಲಿ ಚುಂಚಶ್ರೀ ಮಹಿಳಾ ಒಕ್ಕಲಿಗರ ವೇದಿಕೆಯಿಂದ ನಡೆದ ಸಾಮೂಹಿಕ ಮಹಾಲಕ್ಷ್ಮಿ ಆಷಾಢ ಮಾಸದ ಪೂಜಾ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಪ್ರಾಪಂಚಿಕತೆಯಲ್ಲಿ ಮುಳುಗಿರುವ ಮನಸ್ಸಿಗೆ ಆಧ್ಯಾತ್ಮಿಕತೆಯನ್ನು ಕೊಟ್ಟರೆ ತಾಯಂದಿರು ಮಕ್ಕಳನ್ನು ಸರಿಯಾದ ರೀತಿ ಸಂಸ್ಕಾರ ಕೊಟ್ಟು ಬೆಳೆಸಲು ಸಾಧ್ಯ ಎಂದರು.

ಬಹುಮುಖ್ಯವಾಗಿ ಮಕ್ಕಳನ್ನು ಹೆತ್ತು, ಬೆಳೆಸಿ ಸಂಸ್ಕಾರ ಕೊಡುವ ಶಕ್ತಿ ಇರುವುದು ತಾಯಂದಿರಿಗೆ ಮಾತ್ರ. ಆಧುನಿಕತೆ ಕಾಲದಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿರುವ ಸಂದರ್ಭದಲ್ಲಿ ಸಂಸ್ಕಾರಯುತ ಕಾರ್ಯಕ್ರಮಗಳು ತಾಯಂದಿರಿಗೆ ಹೆಚ್ಚು ಹೆಚ್ಚು ಬೇಕಿದೆ ಎಂದರು.

ಸಾಮೂಹಿಕ ಮಹಾಲಕ್ಷ್ಮಿ ಆಷಾಢಮಾಸದ ಪೂಜಾ ಮಹೋತ್ಸವದ ಅಂಗವಾಗಿ ಗಣಪತಿ ಪೂಜೆ, ಶ್ರೀಮಹಾಲಕ್ಷ್ಮಿ ಸಹಸ್ರ ನಾಮಾವಳಿ ಪೂರ್ವಕ ಕುಂಕುಮಾರ್ಚನೆ, ಅಷ್ಟೋತ್ತರ ಶತನಾಮ, ಲಕ್ಷಾರ್ಚನೆ, ಪುಷ್ಪಾರ್ಚನೆ, ಪ್ರಾರ್ಥನೆ ಸಂಕಲ್ಪವಾಹನದಿಂದ ಪ್ರಾರಂಭ ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ನೆಡೆಯಿತು.

ಈ ವೇಳೆ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ನಂದನಾಥ ಸ್ವಾಮೀಜಿ, ಚುಂಚಶ್ರೀ ಮಹಿಳಾ ಒಕ್ಕಲಿಗರ ವೇದಿಕೆಯ ಪಲ್ಲವಿ, ಶಕುಂತಲಾ, ಮಂಜುಳಾ, ಲತಾ, ಇತರರು ಹಾಜರಿದ್ದರು.

ಡಿ.ಕೆ.ಶಿವಕುಮಾರ್ ಸಿಎಂ ಆಗಲು ಅವಕಾಶ ಸಿಗಬೇಕು: ನಿಶ್ಚಲಾನಂದನಾಥ ಸ್ವಾಮೀಜಿ

ಮಂಡ್ಯ:

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಒಂದು ಅವಕಾಶ ಸಿಗಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಡಿಸಿಎಂ ಪರ ಬ್ಯಾಟಿಂಗ್ ಮಾಡಿದರು.

ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 135 ಸ್ಥಾನ ಬರುವುದಕ್ಕೆ ಡಿ.ಕೆ.ಶಿವಕುಮಾರ್ ಅವರ ಶ್ರಮವೂ ಇದೆ. ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂಬ ಹಂಬಲ ಬಹಳ ದಿನಗಳಿಂದ ಒಕ್ಕಲಿಗರ ಮುಖಂಡರು ಹಾಗೂ ಅಭಿಮಾನಿಗಳಲ್ಲಿದೆ ಎಂದರು.

ಕಾಂಗ್ರೆಸ್ ರಾಜ್ಯದಲ್ಲಿ ಬಲವಾಗಿ ಬೇರೂರುವುದಕ್ಕೆ ಡಿಕೆಶಿ ಕಾರಣಕರ್ತರಾಗಿದ್ದಾರೆ. ಪಕ್ಷವನ್ನು ತಾಯಿ ರೀತಿ ಪ್ರೀತಿಸಿದ್ದಾರೆ. ಹಾಗಾಗಿ ಅವರಿಗೂ ಮುಖ್ಯಮಂತ್ರಿಯಾಗಲು ಒಂದು ಅವಕಾಶ ಸಿಗಬೇಕು. ಈ ಬಗ್ಗೆ ಆ ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಹಲವು ದೇವರುಗಳಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ. ಚುಂಚಶ್ರೀ ಮಹಿಳಾ ವೇದಿಕೆಯವರೂ ವಿಶೇಷ ಪೂಜೆ ಮಾಡಿದ್ದಾರೆ. ಈ ಪೂಜಾ ಫಲದಿಂದ ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದರೂ ಆಶ್ಚರ್ಯವಿಲ್ಲ. ದೇವರ ಅನುಗ್ರಹ ಅವರ ಮೇಲಿರಲಿ ಎಂದು ಪ್ರಾರ್ಥಿಸಿದರು.