ದೇಶ ನಡೆಸುವ ಶಕ್ತಿ ಇರುವುದು ಎನ್‌ಡಿಎಗೆ ಮಾತ್ರ: ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ

| Published : Apr 13 2024, 01:00 AM IST

ದೇಶ ನಡೆಸುವ ಶಕ್ತಿ ಇರುವುದು ಎನ್‌ಡಿಎಗೆ ಮಾತ್ರ: ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ದೇಶವನ್ನು ಮುನ್ನಡೆಸುವ ಏಕೈಕ ಶಕ್ತಿ ಇರುವುದು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮಾತ್ರ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಸಕಲೇಶಪುರದ ಹೆತ್ತೂರು ಗ್ರಾಮದಲ್ಲಿ ನಡೆದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಹೆತ್ತೂರಲ್ಲಿ ಲೋಕಸಭೆ ಪ್ರಚಾರ ಸಭೆ । ಕಾಂಗ್ರೆಸ್ಸಲ್ಲಿ ಇನ್ನೂ ಪ್ರಧಾನಿ ಅಭ್ಯರ್ಥಿ ಇಲ್ಲ

ಕನ್ನಡಪ್ರಭ ವಾರ್ತೆ ಸಕಲೇಶಪುರ

ದೇಶವನ್ನು ಮುನ್ನಡೆಸುವ ಏಕೈಕ ಶಕ್ತಿ ಇರುವುದು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮಾತ್ರ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಶುಕ್ರವಾರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ ನಡೆದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ನೇತೃತ್ವದಲ್ಲಿ ಹತ್ತಾರು ಪಕ್ಷಗಳು ಒಗ್ಗೂಡಿ ಕಟ್ಟಿರುವ ಒಕ್ಕೂಟಕ್ಕೆ ಇದುವರಗೆ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇನ್ನೂ ೧೫೦ ಕೋಟಿ ಜನರಿರುವ ದೇಶವನ್ನು ಮುನ್ನಡೆಸುವುದು ಹೇಗೆ ಎಂಬುದನ್ನು ಜನರು ಚಿಂತನೆ ನಡೆಸಬೇಕಿದೆ ಎಂದು ವ್ಯಂಗ್ಯವಾಡಿದರು.

‘ದೇಶದ ಅಭಿವೃದ್ದಿ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಎನ್‌ಡಿಎ ಅಧಿಕಾರದಲ್ಲಿರುವುದು ಅತ್ಯಗತ್ಯ. ದೇಶ ಶರವೇಗದಲ್ಲಿ ಅಭಿವೃದ್ದಿ ಹೊಂದುತ್ತಿದ್ದು ಈ ವೇಗ ಹೀಗೆ ಮುಂದುವರಿಯಲು ಸರ್ಕಾರ ಬದಲಾಗಬಾರದು. ಪ್ರಜ್ಞಾವಂತ ನಾಗರಿಕರು ಕೇಂದ್ರ ಸರ್ಕಾರದ ಯೋಜನೆಗಳನ್ನು ಗಮನಿಸುವುದು ಅಗತ್ಯ. ಪ್ರಧಾನಿ ನರೇಂದ್ರ ಮೋದಿ ಹಾಗೂ ನನ್ನ ಸಂಬಂದ ಉತ್ತಮವಾಗಿದ್ದು ನಾನು ಪ್ರಧಾನಿಯಾಗಿದ್ದ ವೇಳೆ ಅತ್ಯಂತ ಉತ್ತಮ ಆಡಳಿತ ನೀಡಿದ ನನ್ನನ್ನು ಗುರುತಿಸಿ ನೀವು ನಮ್ಮ ಕೂಟದ ಒಂದ ಅಂಗವಾಗಬೇಕು ಎಂದು ಕರೆದು ಗೌರವಿಸಿದ್ದಾರೆ’ ಎಂದು ಹೇಳಿದರು.

‘ಅರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಕೂರುವ ಜಾಯಮಾನ ನನ್ನದಲ್ಲ. ನನ್ನ ಕೊನೇ ಉಸಿರು ಇರುವವರೆಗೂ ಜನರ ಕಷ್ಟದಲ್ಲಿ ಭಾಗಿಯಾಗುತ್ತೆನೆ. ನಾನು ಪ್ರಧಾನಿಯಾದ ಅವಧಿಯಲ್ಲಿ. ನನ್ನ ರೈತಪರ ಹಾಗೂ ಬಡವರ ಪರ ಚಿಂತನೆಗಳನ್ನು ಸಹಿಸದ ಕಾಂಗ್ರೆಸ್ ನನ್ನನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಿತ್ತು.ಈ ಬಾರಿ ಪ್ರಜ್ವಲ್ ರೇವಣ್ಣ ಅವರ ಕೈ ಬಲಪಡಿಸಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದು ಮನವಿ ಮಾಡಿದರು.

ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ದೇಶವನ್ನು ಅಸ್ಥಿರಗೊಳಿಸಲು ದುಷ್ಟಶಕ್ತಿಗಳಿಗೆ ಮೋದಿಯಂತಹ ಪ್ರಧಾನಿ ದೇಶವನ್ನಾಳುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಈ ಬಾರಿ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟವನ್ನು ಅಧಿಕಾರದಿಂದ ಕೇಳಗಿಳಿಸಲು ನೆರೆಯ ರಾಷ್ಟ್ರಗಳು ಸಾಕಷ್ಟು ಕಸರತ್ತು ನಡೆಸುತ್ತಿವೆ. ಮುಂದಿನ ೧೧ ದಿನ ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಿಳಿಸುವ ಮೂಲಕ ಎಲ್ಲರೂ ಮತ ಹಾಕುವಂತೆ ಪ್ರೇರಣೆ ನೀಡಿ ಮೋದಿಗೆ ಬಲ ತುಂಬಬೇಕು ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಮಾತನಾಡಿ, ‘ಕಳೆದ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ದಿಗೆ ೧೧.೫ ಸಾವಿರ ಕೋಟಿ ರು. ಅನುದಾನ ನೀಡಿದ್ದಾರೆ. ಇದಕ್ಕೆಲ್ಲ ನರೇಂದ್ರ ಮೋದಿಯ ಸಹಕಾರ ಕಾರಣ. ಮುಂದಿನ ದಿನಗಳಲ್ಲಿ ನನ್ನ ಮೇಲೆ ನೀವು ಆಶೀರ್ವಾದ ನೀಡಿದಲ್ಲಿ ಮತ್ತಷ್ಟು ಹೆಚ್ಚಿನ ಅನುದಾನ ತರುವ ಮೂಲಕ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಿದ್ದೇನೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರದಾನಿಯಾಗಲು ಹಾಸನ ಜಿಲ್ಲೆಯಿಂದ ಎನ್‌ಡಿಎ ಕೂಟದ ಅಭ್ಯರ್ಥಿಯಾಗಿರುವ ನನಗೆ ಬೆಂಬಲ ನೀಡಬೇಕು’ ಎಂದು ಹೇಳಿದರು.

ಬಿಜೆಪಿ ಪ್ರಧಾನಿ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್,ಬಿ,ಆರ್ ಗುರುದೇವ್, ಎಚ್.ಕೆ ಕುಮಾರಸ್ವಾಮಿ, ಮುಖಂಡರಾದ ಬಿ.ಎ.ಜಗನ್ನಾಥ್, ಕಾಫಿ ಮಂಡಳಿ ಅಧ್ಯಕ್ಷ ದೇವವೃಂದ ದಿನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ತಾಲೂಕಿನ ಚಂಗಡಿಹಳ್ಳಿ ಹಾಗೂ ವನಗೂರು ರಸ್ತೆಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಲಾಯಿತು.

ತಾಲೂಕಿನ ವನಗೂರು ಕೂಡರಸ್ತೆಯಲ್ಲಿ ಎನ್‌ಡಿಎ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ರೋಡ್‌ಶೋ ಮೂಲಕ ಮತಯಾಚಿಸಿದರು.