ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಗಡಿಜಿಲ್ಲೆ ಬೆಳಗಾವಿಗೆ ಈ ಬಾರಿ ಒಂದೇ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅಥಣಿಯ ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡಿದೆ. ಬೆಂಗಳೂರು ನಗರ ಜಿಲ್ಲೆಗೆ 8, ಕೋಲಾರ, ಮೈಸೂರು, ಬಾಗಲಕೋಟೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ತಲಾ 2 ಪ್ರಶಸ್ತಿ ನೀಡಲಾಗಿದೆ. ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ 18 ವಿಧಾನಸಭೆ ಕ್ಷೇತ್ರ, 15 ತಾಲೂಕು ಹೊಂದಿದೆ. ಕನಿಷ್ಠ 2 ಜಿಲ್ಲೆಯಾಗುವಷ್ಟು ಭೌಗೋಳಿಕ, ಜನಸಾಂದ್ರತೆ ಹೊಂದಿದ್ದು, ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇಂತಹ ದೊಡ್ಡ ಜಿಲ್ಲೆಗೆ ಒಂದೇ ಪ್ರಶಸ್ತಿ ನೀಡುವ ಮೂಲಕ ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.ಸಾಹಿತ್ಯ ಕ್ಷೇತ್ರ ಹೊರತುಪಡಿಸಿದರೆ ಬೇರೆ ಯಾವುದೇ ಕ್ಷೇತ್ರಕ್ಕೆ ಈ ಬಾರಿ ಜಿಲ್ಲೆಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯದಿರುವುದು ಜಿಲ್ಲೆಯ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ವಿಚಾರದಲ್ಲಿ ಬೆಳಗಾವಿ ಜಿಲ್ಲೆಯನ್ನು ಕಡೆಗಣಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಲೋಕಾಪುರಗೆ ರಾಜ್ಯೋತ್ಸವ ಪ್ರಶಸ್ತಿ:ಅಥಣಿಯ ಹಿರಿಯ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಬಾಗಲಕೋಟೆಯ ಎಸ್.ಸಕ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಹುತ್ತ ಕಾದಂಬರಿ ಮೇಲೆ, ಎರೆಡು ಕೃಷ್ಣೆ ಹರಿದಳು ಕಾದಂಬರಿ ಮೇಲೆ ಒಂದು ಎಂಫಿಲ್ ಹಾಗೂ ಸಮಗ್ರ ಸಾಹಿತ್ಯದ ಮೇಲೆ ಪಿಎಚ್‌ಡಿ (ಮೈಸೂರು ವಿಶ್ವ ವಿದ್ಯಾಲಯದಿಂದ) ಮಾಡಿದ್ದಾರೆ.
ಕವಣೆಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಕಂಗಳು ತುಂಬಿದ ಬಳಿಕ, ಕೃಷ್ಣೆಯ ಒಡಲತುಂಬ, ಜಂಬು ನೇರಳೆ , ಕಥಾಲೋಕ , ಸಮಗ್ರ ಕತೆಗಳು ಕಥಾ ಸಂಕಲನಗಳು, ಬಿಸಿಲುಪುರ, ಹುತ್ತ, ಉಧೋ ಉಧೋ, ನೀಲಗಂಗಾ, ಕೃಷ್ಣೆ ಹರಿದಳು. ಅಮಟೂರ ಬಾಳಪ್ಪ, ಪುರುಷಾವತಾರ, ಅತ್ತಿಮಬ್ಬೆ, ಹೋಟೆಲ್ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಪ್ರತಿಫಲನ, ಸಮುಚಿತ, ರಸಾಧಿಕ, ಹರಿವಾಣ, ಸುಮಿರಣ, ಫಸಲು ಕೃತಿಗಳ ವಿಮರ್ಶೆ ಬರೆದಿದ್ದಾರೆ. ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ, ಜೈನ ಮಹಿಳೆ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ದತ್ತಿ ನಿಧಿ ಬಹುಮಾನ, ಚಿಕ್ಕೋಡಿ ತಮ್ಮಣ್ಣಪ್ಪ ಸಾಹಿತ್ಯ ಪುರಸ್ಕಾರ, ಹಾವನೂರ ಪ್ರತಿಷ್ಠಾನ ಹಾವೇರಿ ಸಾಹಿತ್ಯ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ ದತ್ತಿ ನಿಧಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಹೀಗೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ.ಅಭಿಮಾನಿಗಳ ಹರ್ಷ:
ಅಥಣಿಯ ಖ್ಯಾತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅಪಾರ ಸಾಧನೆ ಪರಿಗಣಿಸಿ ರಾಜ್ಯಮಟ್ಟದ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿರುವುದಕ್ಕೆ ಅಥಣಿಯ ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.ಗಡಿ ಜಿಲ್ಲೆ ಬೆಳಗಾವಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ವಿಚಾರದಲ್ಲಿ ತೀರಾ ಅನ್ಯಾಯವಾಗಿದೆ. ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ಕೇವಲ ಒಂದೇ ಪ್ರಶಸ್ತಿ ನೀಡಲಾಗಿದೆ. ಬೇರೆ ಜಿಲ್ಲೆಗಳಿಗೆ ತಲಾ 3, ಬೆಂಗಳೂರು ನಗರಕ್ಕೆ 8 ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಬೆಳಗಾವಿಗೆ ಅನ್ಯಾಯ ಮಾಡಲಾಗಿದೆ.- ಯ.ರು. ಪಾಟೀಲ ಹಿರಿಯ ಸಾಹಿತಿ