ಸಾರಾಂಶ
ಗೋಕರ್ಣ: ರೂಪ, ವಿದ್ಯೆ, ಬಲ, ಪರಾಕ್ರಮ ಯಾವುದೂ ಅಂತ್ಯದ ಕಾಲದಲ್ಲಿ ನಮ್ಮ ನೆರವಿಗೆ ಬರುವುದಿಲ್ಲ. ಪರಲೋಕ ಯಾತ್ರೆಯಲ್ಲಿ ನಮ್ಮ ನೆರವಿಗೆ ಬರುವುದು ಧರ್ಮ ಮಾತ್ರ. ಅದು ನಮ್ಮ ಪರಮಸ್ನೇಹಿತನಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 22ನೇ ದಿನವಾದ ಭಾನುವಾರ ಉತ್ತರ ಬೆಂಗಳೂರು ಮಂಡಲದ ಭಿಕ್ಷಾಸೇವೆ ಸ್ವೀಕರಿಸಿ, ಜೀವಯಾನ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು. ಬದುಕಿನಲ್ಲಿ ನಾವು ಎಷ್ಟು ಸರಿ ಇದ್ದೆವು ಎನ್ನುವುದಷ್ಟೇ ಪ್ರಮುಖವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಭಾರತೀಯರು ಎಂದೂ ಸಾವಿಗೆ ಅಂಜುವವರಲ್ಲ, ಅತಿಥಿಗಳನ್ನು ನಾವು ಪ್ರತೀಕ್ಷೆ ಮಾಡುವಂತೆ ಜೀವನದಲ್ಲಿ ತಮ್ಮ ಕರ್ತವ್ಯವನ್ನು ಪೂರೈಸಿ ಸಾವಿನ ಪ್ರತೀಕ್ಷೆಯಲ್ಲಿರುವ ಮಹಾತ್ಮರು ನಮ್ಮಲ್ಲಿದ್ದಾರೆ. ಇದಕ್ಕೆ ಧರ್ಮರಾಯನ ಮಹಾಪ್ರಸ್ಥಾನ ಅತ್ಯುತ್ತಮ ನಿದರ್ಶನ ಎಂದರು.ಶಾಪಗಳನ್ನು ಋಣಾತ್ಮಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಯಾವ ಶಾಪ ಕೂಡಾ ಕೆಟ್ಟದಲ್ಲ; ಅದು ಒಳ್ಳೆಯದಕ್ಕೆ ಮುನ್ಸೂಚನೆ. ಋಷಿಮುನಿಗಳು, ಮಹಾತ್ಮರು ಶಾಪ ನೀಡಿದರೂ ಅದರ ಪರಿಣಾಮ ಉತ್ತಮವಾಗಿರುತ್ತದೆ. ಅದು ನಾವು ಮಾಡಿದ ತಪ್ಪಿಗೆ ಚಿಕಿತ್ಸಕ ರೂಪದಲ್ಲಿರುತ್ತದೆ ಎಂದರು.ವಿದ್ಯಾನಂದ ಬಳಿ ಸುಮಾರು ₹13 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಿದ ಜಲಮಂಡಲವನ್ನು ಅರ್ಕೋಡ್ಲು ಗಣೇಶ ಅನಾವರಣಗೊಳಿಸಿದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಹೆಗಡೆ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷ ಜಿ.ಜಿ. ಹೆಗಡೆ ತಲೆಕೇರಿ, ಉತ್ತರ ಬೆಂಗಳೂರು ಮಂಡಲ ಕಾರ್ಯದರ್ಶಿ ಕೆ.ಬಿ. ರಾಮಮೂರ್ತಿ, ಯುವ ಪ್ರಧಾನ ಕೇಶವಪ್ರಕಾಶ್ ಮುಣ್ಚಿಕಾನ, ಮಾತೃ ಪ್ರಧಾನರಾದ ವೀಣಾ ಜಿ. ಪುಳು, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ, ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಮೋಹನ ಭಟ್ ಹರಿಹರ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ ಮತ್ತಿತರರು ಉಪಸ್ಥಿತರಿದ್ದರು. ಸುಧನ್ವ ಆರ್ಯ ನಿರೂಪಿಸಿದರು.