ಸಮಾಜ ತಿದ್ದುವ ಶಕ್ತಿ ಹೊಂದಿದವರು ಶಿಕ್ಷಕರು ಮಾತ್ರ: ಕೊತ್ತೂರು ಮಂಜುನಾಥ್

| Published : Sep 06 2024, 01:03 AM IST

ಸಮಾಜ ತಿದ್ದುವ ಶಕ್ತಿ ಹೊಂದಿದವರು ಶಿಕ್ಷಕರು ಮಾತ್ರ: ಕೊತ್ತೂರು ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾನ್ಯ ಶಿಕ್ಷಕರಾಗಿದ್ದ ರಾಧಾಕೃಷ್ಣನ್ ರಾಷ್ಟ್ರಪತಿಯಾದರು. ಇದಕ್ಕೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿಕೊಟ್ಟಿದೆ, ಅವರ ಆದರ್ಶದ ಪಾಲನೆ ಮಾಡಿ.

ಕನ್ನಡಪ್ರಭ ವಾರ್ತೆ ಕೋಲಾರ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಸಮಾಜವನ್ನೇ ತಿದ್ದುವ ಶಕ್ತಿ ನಿಮಗಿದೆ, ತಂದೆ- ತಾಯಿಯ ಮಾತೂ ಕೇಳದವನು ಶಿಕ್ಷಕರೊಬ್ಬರ ಮುಂದೆ ತಲೆ ತಗ್ಗಿಸುತ್ತಾನೆ ಎಂದರೆ ಈ ವೃತ್ತಿಗೆ ಇರುವ ಮಹಿಮೆ ಅರ್ಥಮಾಡಿಕೊಳ್ಳಿ, ದೇಶಕ್ಕೆ ಉತ್ತಮ ಸಾಧಕರ ಕೊಡುಗೆ ನೀಡಿ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಕರೆ ನೀಡಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಹಾಗೂ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.

ಜೀವನದಲ್ಲಿ ಏನೂ ಉಳಿಯುವುದಿಲ್ಲ. ಆದರೆ, ಶಿಕ್ಷಕ ಕಲಿಸಿದ ವಿದ್ಯೆ ಸಾಯುವವರೆಗೂ ನಮ್ಮೊಂದಿಗೆ ಇರುತ್ತದೆ, ವಿದ್ಯೆಗೆ ಸಾವಿಲ್ಲ, ಇಡೀ ದೇಶ ನೀವು ನೀಡುವ ಶಿಕ್ಷಣದ ಮೇಲೆ ಅವಲಂಬಿಸಿದೆ ಎಂಬ ಸತ್ಯ ಅರಿತು ಜವಾಬ್ದಾರಿಯಿಂದ ಕೆಲಸ ಮಾಡಿ, ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತನ್ನಿ ಎಂದು ಕಿವಿಮಾತು ಹೇಳಿದರು.

ಕಳೆದೊಂದು ವರ್ಷದಿಂದ ಎಲ್ಲಾ ಸರ್ಕಾರಿ ಶಾಲೆಗಳ ಆಸ್ತಿ ದಾಖಲೆ ಮಾಡಿಸಲು ಕ್ರಮವಹಿಸಿದ್ದು, ಸರಿಸುಮಾರು ಎಲ್ಲಾ ಶಾಲೆಗಳಿಗೂ ಖಾತೆ, ಇ- ಸ್ವತ್ತು ಆಗಿದೆ, ೭ನೇ ವೇತನ ಆಯೋಗ ಜಾರಿ ಮೂಲಕ ಸಿದ್ದರಾಮಯ್ಯ ಸರ್ಕಾರ ನಿಮ್ಮೊಂದಿಗೆ ನಿಂತಿದೆ ಎಂದರು.

ಎಂಎಲ್ಸಿ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಸಾಮಾನ್ಯ ಶಿಕ್ಷಕರಾಗಿದ್ದ ರಾಧಾಕೃಷ್ಣನ್ ರಾಷ್ಟ್ರಪತಿಯಾದರು. ಇದಕ್ಕೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿಕೊಟ್ಟಿದೆ, ಅವರ ಆದರ್ಶದ ಪಾಲನೆ ಮಾಡಿ ಎಂದರು.

ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ನಾನು ಶಿಕ್ಷಕನಾಗಿದ್ದೆ ಎಂದು ಸ್ಮರಿಸಿ,ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರ ವೃತ್ತಿಯಾಗಿದ್ದು, ಸಮಾಜ ಕಟ್ಟುವ ನಿಮ್ಮ ಕೆಲಸ ಮುಂದುವರೆಸಿ, ದೇಶಕ್ಕೆ ಆಸ್ತಿಯಾಗುವ ಉತ್ತಮ ವಿದ್ಯಾರ್ಥಿಗಳನ್ನು ತಯಾರಿಸಿ ಎಂದು ತಿಳಿಸಿ, ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನದ ಶುಭಾಶಯ ಕೋರಿದರು.

ಡಿಡಿಪಿಐ ಕೃಷ್ಣಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಲಾ ೬ ಶಿಕ್ಷಕರಂತೆ ೧೮ ಮಂದಿಯನ್ನು ೫ ಸಾವಿರ ರು. ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಈ ಸಾಲಿನಲ್ಲಿ ನಿವೃತ್ತರಾದ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಬೆಂಗಳೂರು ಉತ್ತರವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಕೆಯುಡಿಎ ಅಧ್ಯಕ್ಷ ಮಹಮದ್ ಹನೀಫ್, ಶಿಕ್ಷಣಾಧಿಕಾರಿಗಳಾದ ವೀಣಾ, ತಿಮ್ಮರಾಯಪ್ಪ, ಬಿಇಒ ಉಮಾದೇವಿ, ನೋಡಲ್ ಅಧಿಕಾರಿ ಶಂಕರೇಗೌಡ, ವಿಷಯ ಪರಿವೀಕ್ಷ ಸನಾವುಲ್ಲಾ, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಆರ್.ನಾಗರಾಜ್, ಎಸ್.ನಾರಾಯಣಸ್ವಾಮಿ, ಚಂದ್ರಪ್ಪ, ಆಂಜನೇಯ, ಕೆ.ಟಿ.ನಾಗರಾಜ್, ಮುನಿಯಪ್ಪ, ಜಿ.ಶ್ರೀನಿವಾಸ್, ಶಿವಕುಮಾರ್, ನಾರಾಯಣರೆಡ್ಡಿ, ಸತೀಶ್‌ಕುಮಾರ್, ಶ್ರೀರಾಮ್, ಇಸಿಒಗಳಾದ ಕೆ.ಶ್ರೀನಿವಾಸ್, ನಂಜುಂಡಗೌಡ ಇದ್ದರು.

ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಆರ್.ನಾಗರಾಜ್ ನಿರೂಪಿಸಿ, ಶಿಕ್ಷಕಿ ಕಸ್ತೂರಿ ತಂಡ ಪ್ರಾರ್ಥಿಸಿ, ಶಿಕ್ಷಕ ಕೆ.ಎಸ್.ಮುನಿರಾಜು ತಂಡ ನಾಡಗೀತೆ, ರೈತಗೀತೆ ಹಾಡುವ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು.

ಗುರುಭವನಕ್ಕಾಗಿ ಸಭೆಯ ಭರವಸೆ:

ಸಂಘಟನೆಗಳ ಪರವಾಗಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ, ನೆನೆಗುದಿಗೆ ಬಿದ್ದಿರುವ ಗುರುಭವನ ನಿರ್ಮಾಣಕ್ಕೆ ಕೈಜೋಡಿಸಿ, ಪದವೀಧರ ಶಿಕ್ಷಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ನಿವಾರಣೆಗೆ ಸಿಎಂ ಮೇಲೆ ಒತ್ತಡ ತರಲು ಸಹಕರಿಸಿ ಎಂದು ಶಾಸಕರಿಗೆ ಮನವಿ ಮಾಡಿದರು.

ಈ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಗುರುಭವನ ಇಲ್ಲವಾಗಿರುವುದು ವಿಪರ್ಯಾಸ, ಶಿಕ್ಷಕ ಸಂಘಟನೆಗಳಲ್ಲಿನ ಗೊಂದಲವೋ ಅಥವಾ ಇನ್ಯಾವ ಕಾರಣವೋ ಗೊತ್ತಿಲ್ಲ, ಒಟ್ಟಾರೆ ಭವನ ನಿರ್ಮಿಸಬೇಕು, ಈ ನಿಟ್ಟಿನಲ್ಲಿ ಮುಂದಿನ ವಾರವೇ ಡೀಸಿ ಕಚೇರಿಯಲ್ಲಿ ಸಭೆ ಕರೆದು ಕೂಡಲೇ ಭವನ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.