ಸಾರಾಂಶ
ಗಳಿಸಿದ ಚಿನ್ನ, ಬೆಳ್ಳಿ, ಆಸ್ತಿ ನಿಜವಾದ ಸಂಪತ್ತಲ್ಲ. ಗಳಿಸಿದ ಜ್ಞಾನವೇ ನಿಜವಾದ ಸಂಪತ್ತು. ಆತ್ಮಜ್ಞಾನ ಗಳಿಸಿದ ಶಿವಯೋಗಿಗಳು, ತ್ಯಾಗಿಗಳು, ಜ್ಞಾನಿಗಳು ಮಾತ್ರ ಜಗತ್ತಿನ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಓಲೆಮಠದ ಆನಂದ ದೇವರು ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಗಳಿಸಿದ ಚಿನ್ನ, ಬೆಳ್ಳಿ, ಆಸ್ತಿ ನಿಜವಾದ ಸಂಪತ್ತಲ್ಲ. ಗಳಿಸಿದ ಜ್ಞಾನವೇ ನಿಜವಾದ ಸಂಪತ್ತು. ಆತ್ಮಜ್ಞಾನ ಗಳಿಸಿದ ಶಿವಯೋಗಿಗಳು, ತ್ಯಾಗಿಗಳು, ಜ್ಞಾನಿಗಳು ಮಾತ್ರ ಜಗತ್ತಿನ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಓಲೆಮಠದ ಆನಂದ ದೇವರು ಹೇಳಿದರು. ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಪ್ರತಿ ದಿನ ಓಣಿಗೊಂದು ವಚನ ಶ್ರಾವಣ ಅಂಗವಾಗಿ ಇಲ್ಲಿನ ಪ್ರಭಾತನಗರದಲ್ಲಿ ಗುರುವಾರ ಸಂಜೆ ನಡೆದ 7ನೇ ದಿನದ ಕಾರ್ಯಕ್ರಮದಲ್ಲಿ ಅವರು ಅಲ್ಲಮಪ್ರಭುವಿನ ನಿನ್ನ ಒಡವೆಯೆಂಬುದು ಜ್ಞಾನರತ್ನ ವಚನ ಕುರಿತು ಅವರು ಆಶೀರ್ವಚನ ನೀಡಿದರು. ಮರಣಾನಂತರ ಖಾಲಿ ಕೈಯಿಂದ ಹೊರಟಿದ್ದೇನೆ ಎಂಬ ಸಂದೇಶ ಸಾರಲು ತನ್ನ ಎರಡೂ ಕೈಗಳನ್ನು ಶವಪೆಟ್ಟಿಗೆಯಿಂದ ಹೊರಗೆ ಕಾಣುವಂತೆ ಇಡಬೇಕು ಎಂದು ತನ್ನ ಸೇವಕರಿಗೆ ಜಗತ್ತನ್ನೇ ಗೆಲ್ಲಲು ಹೊರಟಿದ್ದ ಅಲೆಕ್ಸಾಂಡರ್ ಹೇಳಿದ್ದರು. ಸತ್ತಾಗ ನಾವು ಏನನ್ನೂ ಒಯ್ಯುವುದಿಲ್ಲ. ಆದ್ದರಿಂದ ಸಂಪತ್ತು ಗಳಿಸಲು ಬಹಳ ಬಡಿದಾಡಬಾರದು ಎಂದರು.ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ದಾರಿ ತಪ್ಪುತ್ತಿರುವ ಯುವಕರನ್ನು ಸರಿದಾರಿಗೆ ತರಲು ವಚನ ಶ್ರಾವಣ ಕಾರ್ಯಕ್ರಮ ಬಹಳ ಸಹಕಾರಿಯಾಗಿದೆ. ಜಾತಿಭೇದ. ಲಿಂಗಭೇದ, ಅಸಮಾನತೆ ಹೋಗಲಾಡಿಸಲು 12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ಸಂದೇಶ ಪಾಲಿಸಿದರೆ ಮಾತ್ರ ನಿಜವಾದ ಸುಶಿಕ್ಷಿತರು ಎನಿಸಿಕೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟರು. ಸಾಹಿತಿ ಬಸವರಾಜ ಗಿರಗಾಂವಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕ್ಷಣಿಕ ಸುಖ ನೀಡುವ ಆಡಂಬರದ, ಅನಿಶ್ಚಿತ ವಸ್ತುಗಳು ಮತ್ತು ಇನ್ನೊಬ್ಬರ ಹೊಟ್ಟೆ ಉರಿಸುವ ಒಡವೆಗಳು ನಿಜವಾದ ಒಡವೆಗಳಲ್ಲ. ವ್ಯಕ್ತಿತ್ವ, ಗೌರವ ಹೆಚ್ಚಿಸುವ ಹಾಗೂ ಆಂತರಿಕವಾಗಿ ನೆಮ್ಮದಿ ನೀಡುವ ನಿಜವಾದ ಒಡವೆ ಎಂದರೆ ಜ್ಞಾನ ಎಂದರು.
ಪ್ರಭಾತನಗರ ನಿವಾಸಿಗಳ ಪರವಾಗಿ ರಶ್ಮಿ ದೇಸಾಯಿ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷ ಪರಮಾನಂದ ಗವರೋಜಿ, ನಗರಸಭೆ ಪೌರಾಯುಕ್ತ ಜ್ಯೋತಿ ಗಿರೀಶ ಎಸ್., ನಿವೃತ್ತ ಡಿವೈಎಸ್ಪಿ ಪಿ.ಎನ್. ಪಾಟೀಲ ಇತರರು ಇದ್ದರು. ಸರಸ್ವತಿ ಸಬರದ(ಹೆಗಡಿ) ಹಾಗೂ ಗೋಪಾಲ ತುಳಜಾಪೂರ ಸಂಗೀತ ಸೇವೆ ಸಲ್ಲಿಸಿದರು. ಉಪನ್ಯಾಸಕಿ ಪ್ರತಿಭಾ ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ರವಿ ತೇಲಿ ವಂದಿಸಿದರು.ಉದ್ಘಾಟನೆ: ಪ್ರಭಾತನಗರದ ನಗರಸಭೆ ಉದ್ಯಾನವನದಲ್ಲಿ ಪ್ರಭಾತನಗರ ಗೆಳೆಯರ ಬಳಗದ ವತಿಯಿಂದ ನಿರ್ಮಿಸಲಾದ ವೇದಿಕೆಯನ್ನು ಕಾರ್ಯಕ್ರಮಕ್ಕೆ ಮೊದಲು ಮಾಜಿ ಶಾಸಕ ಆನಂದ ನ್ಯಾಮಗೌಡ ಉದ್ಘಾಟಿಸಿದರು.