ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮೇಷ್ಟ್ರರಾಗಲು ಪುಣ್ಯ ಮಾಡಿರಬೇಕು. ಅದರಲ್ಲೂ ಕನ್ನಡ ಮೇಷ್ಟ್ರಾಗಲು ಅದೃಷ್ಟ ಮಾಡಿರಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಮುಖ್ಯಸ್ಥ ಡಾ.ಎಂ.ನಾಗರಾಜ ಹೇಳಿದರು.ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಭಾಭವನದಲ್ಲಿ ಕಾಲೇಜು ಕನ್ನಡ ಅಧ್ಯಾಪಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಕನ್ನಡ ಮೇಷ್ಟ್ರುಗಳು ಧ್ವನಿಯೆತ್ತಿದ್ದಾರೆ. ಕನ್ನಡಕ್ಕೆ ಕೈಯೆತ್ತಿ ತಮ್ಮ ಕೈಯನ್ನು ಕಲ್ಪವೃಕ್ಷವನ್ನಾಗಿ ಮಾಡಿಕೊಂಡಿದ್ದಾರೆ. ಕನ್ನಡದ ಕೆಲಸಕ್ಕೆ ಎಂದೂ ಹಿಂದೇಟು ಹಾಕಬಾರದು. ಅನ್ನ ಕೊಟ್ಟ ಕನ್ನಡಕ್ಕೆ ಋಣಿಯಾಗಿರಬೇಕು ಎಂದರು.
ಕನ್ನಡ ಅಧ್ಯಾಪಕರ ಸಂಘದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಾ.ಯಶವಂತ ಕೊಕ್ಕನವರ ಮಾತನಾಡಿ, ಕನ್ನಡವೆಂದರೇ ಬರಿ ನುಡಿಯಲ್ಲ ಅದರರ್ಥ ಹಿರಿದಿದೆ. ಕನ್ನಡ- ಕನ್ನಡಿಗ- ಕರ್ನಾಟಕಕ್ಕೆ ಕರುಳ ಸಂಬಂಧ ಮತ್ತು ಕೊರಳ ಸಂಬಂಧವಿದೆ. ಕನ್ನಡಿಗನ ಹಿಂದೆ ಭಾಷೆಯಿದೆ. ಮುಂದೆ ಕರ್ನಾಟಕ ರಾಜ್ಯವಿದೆ. ಭಾಷೆಯನ್ನು ಬಳಸಿಕೊಂಡು, ಬೆಳೆಸಿಕೊಂಡು ರಾಜ್ಯವನ್ನು ಸಂವರ್ಧನೆಗೊಳಿಸಲು ಪ್ರತಿಯೊಬ್ಬ ಕನ್ನಡಿಗನು ಸದಾ ಸಿದ್ಧರಾಗಬೇಕು. ಪ್ರತಿ ಕ್ಷಣದಲ್ಲೂ ಕನ್ನಡಿಗನು ಭಾಷಾಪ್ರೇಮ, ದೇಶಪ್ರೇಮ ಮತ್ತು ವಿಶ್ವಪ್ರೇಮಗಳಿಂದ ಬದುಕು ಸಾಗಿಸಬೇಕು ಎಂದರು.ಹಿರಿಯ ಪ್ರಾಧ್ಯಾಪಕ ಡಾ.ಮಹೇಶ ಚಿಂತಾಮಣಿ ಮಾತನಾಡಿ, ಕನ್ನಡ ಅಧ್ಯಾಪಕನು ಕೌಶಲ್ಯಗಳನ್ನು ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಾಠ ಮಾಡಬೇಕು. ಕಾಲಕ್ಕೆ ತಕ್ಕ ಅಗತ್ಯ ಬದಲಾವಣೆಗಳನ್ನು ಪ್ರಾಧ್ಯಾಪಕರು ಮಾಡಿಕೊಳ್ಳದೇ ಹೋದರೆ ಶಿಕ್ಷಣ ಕ್ರಮ ದಾರಿ ತಪ್ಪುತ್ತದೆ ಎಂದರು. ಡಾ.ನಾರಾಯಣ ಪವಾರ ಮಾತನಾಡಿದರು. ಕನ್ನಡ ಮೌಲ್ಯಮಾಪನದ ಚೇರಮನ್ ಡಾ.ಸಿ.ಕೊಟ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ನಾಗೇಂದ್ರ ಮಸೂತಿ, ಡಾ.ಜಿ.ಐ.ನಂದಿಕೋಲಮಠ, ಡಾ.ಬಸಮ್ಮ ಶಿಗ್ಗಾವಿ, ಡಾ.ಶ್ರೀಕಾಂತ ಬ್ಯಾಳಿ, ಶ್ರೀಕಾಂತ ಪಾಟೀಲ, ಡಾ. ಬಸಮ್ಮ ಗಂಗನಳ್ಳಿ ಉಪಸ್ಥಿತರಿದ್ದರು. ಪ್ರೊ.ಸಿದ್ದಣ್ಣ ಹೂಗಾರ ಪ್ರಾರ್ಥಿಸಿದರು. ಪ್ರೊ.ಎಸ್.ಬಿ.ಗಾಜೀಪುರ ಸ್ವಾಗತಿಸಿದರು. ಡಾ.ಮಲ್ಲಿಕಾರ್ಜುನ ಮೇತ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಸುಭಾಷ ಕನ್ನೂರ ನಿರೂಪಿಸಿದರು. ಡಾ. ಶರಣಮ್ಮ ಪಾಟೀಲ ವಂದಿಸಿದರು.