ಸಾರಾಂಶ
ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ವ್ಯಕ್ತಿಗಳು ನೋವನ್ನು ಅನುಭವಿಸಬೇಕಾಗುತ್ತದೆ. ಈ ಎಲ್ಲ ನೋವುಗಳನ್ನು ತಾಯ್ತನದಿಂದ ಅರಿತವರು ನಾಯಕ- ನಾಯಕಿಯರಾಗುತ್ತಾರೆ.
ದಾಂಡೇಲಿ: ಭಾರತೀಯ ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಲೈಂಗಿಕ ತಾರತಮ್ಯದ ಕಾರಣದಿಂದ ಅಂಚಿನ ಸಮುದಾಯಗಳು ನೋವನ್ನು ಅನುಭವಿಸುತ್ತಿವೆ ಎಂದು ಪತ್ರಕರ್ತ ಡಾ. ಸಿದ್ಧನಗೌಡ ಪಾಟೀಲ ಹೇಳಿದರು.
ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಎನ್ಎಸ್ಎಸ್ ನಾಯಕತ್ವ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ವ್ಯಕ್ತಿಗಳು ನೋವನ್ನು ಅನುಭವಿಸಬೇಕಾಗುತ್ತದೆ. ಈ ಎಲ್ಲ ನೋವುಗಳನ್ನು ತಾಯ್ತನದಿಂದ ಅರಿತವರು ನಾಯಕ- ನಾಯಕಿಯರಾಗುತ್ತಾರೆ ಎಂದು ಹೇಳಿದರು.ರಂಗಕರ್ಮಿ, ಚಿತ್ರಕಲಾವಿದ ಡಾ. ಡಿ.ಎಸ್. ಚೌಗಲೆ ಮಾತನಾಡಿ, ವಿವಿಧತೆ ಭಾರತದ ಸಂಸ್ಕೃತಿಯ ಜೀವಜೀವಾಳ. ಹಲವು ಬಣ್ಣಗಳಿದ್ದರೆ ಮಾತ್ರ ಚಿತ್ರ ಬಿಡಿಸಲು ಸಾಧ್ಯವಾಗುತ್ತದೆ. ಭಾರತ ಹಲವು ಬಣ್ಣಗಳ ಮಿಶ್ರವಾದ ಸುಂದರ ಚಿತ್ರವಾಗಿದೆ. ಇಲ್ಲಿ ಏಕ ಧರ್ಮ, ಏಕ ಭಾಷೆ, ಏಕ ಸಂಸ್ಕೃತಿಯ ಪರಿಕಲ್ಪನೆಗಳು ಚಲಾವಣೆಯಾದರೆ ಭಾರತದ ಚಿತ್ರವೇ ನಾಶವಾಗುತ್ತದೆ ಎಂದರು.
ಇತಿಹಾಸ ಪ್ರಾಧ್ಯಾಪಕ ಡಾ. ಬಸವರಾಜ ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಕಟ್ಟಡ ವಿನ್ಯಾಸ ಸಲಹೆಗಾರ ಅಬ್ದುಲ್ ಕರಿಂ ಬಾಬಾ ಮುಲ್ಲಾ, ಉಪನ್ಯಾಸಕಿ ಉತ್ತರಾ ಗಡಕರ, ಪ್ರಾಂಶುಪಾಲ ಡಾ. ಎಂ.ಡಿ. ಒಕ್ಕುಂದ, ಎನ್ಎಸ್ಎಸ್ ಸಂಚಾಲಕಿ ಡಾ. ವಿನಯಾ ನಾಯಕ, ಸಹಸಂಚಾಲಕ ಡಾ. ನಾಸೀರಅಹ್ಮದ ಜಂಗೂಭಾಯಿ ಉಪಸ್ಥಿತರಿದ್ದರು.ಕಾವ್ಯಾ ಭಟ್ ಪ್ರಾರ್ಥಿಸಿದರು. ಮಲಪ್ರಭಾ ಮತ್ತು ಗೋದಾವರಿ ತಂಡದ ಸ್ವಯಂ ಸೇವಕರು ಕಾರ್ಯಕ್ರಮ ನಿರೂಪಿಸಿದರು. ಆನಂತರ ಬೆಂಗಳೂರಿನ ನುಡಿರಂಗ ತಂಡದಿಂದ ಹಿಂದಿಯಲ್ಲಿ ನಾದಿರಾ ಬಬ್ಬರ್ ರಚಿಸಿದ, ಕನ್ನಡಕ್ಕೆ ಡಾ. ಡಿ.ಎಸ್. ಚೌಗಲೆ ಅನುವಾದಿಸಿದ ಹಾಗೂ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ಲಿಂಗ ಸಮಾನತೆಯ ಅರಿವಿನ ‘ಸಕುಬಾಯಿ’ ಎಂಬ ನಾಟಕ ಪ್ರದರ್ಶನಗೊಂಡಿತು.