ವೃತ್ತಿಯನ್ನು ಪ್ರೀತಿಸುವವರು ಮಾತ್ರ ಶಿಕ್ಷಕರಾಗಬೇಕು: ಸಿರಿಗೇರಿ ಪನ್ನರಾಜ್

| Published : Mar 29 2025, 12:36 AM IST

ವೃತ್ತಿಯನ್ನು ಪ್ರೀತಿಸುವವರು ಮಾತ್ರ ಶಿಕ್ಷಕರಾಗಬೇಕು: ಸಿರಿಗೇರಿ ಪನ್ನರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ವೃತ್ತಿ ಜೀವನದಲ್ಲಿ ಶಿಕ್ಷಕರು ಸೃಜನಶೀಲನಾಗಿರಬೇಕು. ಯಾವುದೇ ಒಂದು ಸರ್ಕಾರಿ ಕಚೇರಿಯ ನೌಕರ ಎಡವಿದರೆ ಕೆಲಸಗಳು ಹಾಳಾಗಬಹುದು. ಆದರೆ, ಒಬ್ಬ ಶಿಕ್ಷಕ ಎಡವಿದರೆ ಒಂದೇ ತಲೆಮಾರಿನ ಜೀವನ ಹಾಳಾಗುತ್ತದೆ ಎಂದು ಅರಿವು ಸಂಸ್ಥೆಯ ಮುಖ್ಯಸ್ಥ ಸಿರಿಗೇರಿ ಪನ್ನರಾಜ್ ಹೇಳಿದರು.

ಬಳ್ಳಾರಿ: ಶಿಕ್ಷಣ ವೃತ್ತಿ ಪವಿತ್ರವಾದದ್ದು. ಈ ವೃತ್ತಿಯನ್ನು ಪ್ರೀತಿಸುವವರು ಮಾತ್ರ ಶಿಕ್ಷಕರಾಗಬೇಕು ಎಂದು ಹಿರಿಯ ಲೆಕ್ಕಪರಿಶೋಧಕ ಹಾಗೂ ಅರಿವು ಸಂಸ್ಥೆಯ ಮುಖ್ಯಸ್ಥ ಸಿರಿಗೇರಿ ಪನ್ನರಾಜ್ ಹೇಳಿದರು.

ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದಲ್ಲಿ (ಬಿಇಡಿ) ಶ್ರೀ ಮಹಾದೇವ ತಾತ ಕಲಾ ಸಂಘವು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಣದಲ್ಲಿ ಸಾಹಿತ್ಯ ಮತ್ತು ರಂಗಭೂಮಿಯ ಮಹತ್ವದ ವಿಚಾರ ಸಂಕಿರಣ ಹಾಗೂ ರಂಗಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೃತ್ತಿ ಜೀವನದಲ್ಲಿ ಶಿಕ್ಷಕರು ಸೃಜನಶೀಲನಾಗಿರಬೇಕು. ಯಾವುದೇ ಒಂದು ಸರ್ಕಾರಿ ಕಚೇರಿಯ ನೌಕರ ಎಡವಿದರೆ ಕೆಲಸಗಳು ಹಾಳಾಗಬಹುದು. ಆದರೆ, ಒಬ್ಬ ಶಿಕ್ಷಕ ಎಡವಿದರೆ ಒಂದೇ ತಲೆಮಾರಿನ ಜೀವನ ಹಾಳಾಗುತ್ತದೆ. ಹೀಗಾಗಿ ಶಿಕ್ಷಕರಾದವರು ತಮ್ಮ ವೃತ್ತಿಯನ್ನು ಪ್ರೀತಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಜ್ಞಾನ ಸಾಗರವಾಗಬೇಕು. ಬರೀ ಪಠ್ಯದ ವಿಷಯಗಳಿಗೆ ಜೋತು ಬೀಳದೆ ಬೇರೆ ಬೇರೆ ಪುಸ್ತಕಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಪುಸ್ತಕ ಅಧ್ಯಯನದಿಂದ ಸಿಗುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ವಿನಿಯೋಗಿಸಬೇಕು ಎಂದು ಕಿವಿಮಾತು ಹೇಳಿದರು.

ಹಿರಿಯ ಸಾಹಿತಿ ಕಾಳಪ್ಪ ಪತ್ತಾರ್ ಮಾತನಾಡಿ, ಸಾಹಿತ್ಯವಿಲ್ಲದ ಶಿಕ್ಷಣ ಪರಿಪೂರ್ಣವಾಗಲಾರದು. ಸಾಹಿತ್ಯವು ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ ಹಾಗೂ ಸಂಸ್ಕಾರವನ್ನು ಕಲಿಸುವ ಆಯಸ್ಕಾಂತೀಯ ಶಕ್ತಿಯಾಗಿದೆ. ಪಠ್ಯದಲ್ಲಿ ಬರುವ ಪದ್ಯ, ವಚನ, ಗದ್ಯ, ಜಾನಪದ, ನಾಟಕ ಕಥೆ ಹಾಗೂ ಕಾದಂಬರಿಗಳಲ್ಲಿ ಬರುವ ಪಾತ್ರಗಳನ್ನು ದೃಶ್ಯ ಕಾವ್ಯಯಾಗಿ ಹೇಳುವ ರಂಗ ಕಲೆಯನ್ನು ಶಿಕ್ಷಕರು ಕರಗತ ಮಾಡಿಕೊಂಡು ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ತಿಳಿಸಿದರು.

ಕಾಲೇಜು ಪ್ರಾಂಶುಪಾಲ ಡಾ. ಅಶ್ವರಾಮು ಮಾತನಾಡಿದರು. ಶ್ರೀ ಮಹಾದೇವ ತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು ಪ್ರಾಸ್ತಾವಿಕ ಮಾತನಾಡಿದರು.

ಬಳಿಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ, ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತೆ ರಂಗ ನಟಿ ರೇಣುಕಾ ಭಾವಿಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ಸಂಚಾರಿ ಠಾಣೆಯ ಸಿಪಿಐ ಅಯ್ಯನಗೌಡ ಪಾಟೀಲ್, ಭೀಮನೇನಿ ಪ್ರಸಾದ್, ಭೀಮನೇನಿ ಭಾಸ್ಕರ್, ಲಕ್ಷ್ಮಿ ಪವನಕುಮಾರ, ಹಂದ್ಯಾಳು ಗ್ರಾಪಂ ಸದಸ್ಯ ಜಿ. ಲಿಂಗಪ್ಪ, ಶಿಕ್ಷಣಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

ದೊಡ್ಡ ಬಸವಗವಾಯಿ ಡಿ. ಕಗ್ಗಲ್ ತಂಡ ಗೀತ ಗಾಯನ ಪ್ರಸ್ತುತಪಡಿಸಿತು. ಭಾವಿಹಳ್ಳಿ ರೇಣುಕಾ ಹಾಗೂ ಸಾಯಿಶ್ರುತಿ ಹಂದ್ಯಾಳು ರಂಗಗೀತೆಗಳನ್ನಾಡಿದರು. ರಾಜಶೇಖರ್ ತಂಡ ವೀರಗಾಸೆ ಕುಣಿತ ಪ್ರದರ್ಶನ ನೀಡಿತು. ಅಲಂಬಾಷ್ ಹಾಗೂ ಮಂಗಳಗೌರಿ ಕಾರ್ಯಕ್ರಮ ನಿರ್ವಹಿಸಿದರು.