ಬಸವರಾಜ ಮಠದ
ಕನ್ನಡಪ್ರಭ ವಾರ್ತೆ ಇಳಕಲ್ಲಪ್ರತಿನಿತ್ಯ 30 ಸಾವಿರ ಪ್ರಯಾಣಿಕರು ಸಂಚರಿಸುವ ಇಳಕಲ್ಲ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಇಷ್ಟೊಂದು ಪ್ರಯಾಣಿಕರ ದಟ್ಟಣೆ ಹೊಂದಿರುವ ಬಸ್ ನಿಲ್ದಾಣದಲ್ಲಿ ಕೇವಲ ನಾಲ್ಕು ಶೌಚಾಲಯಗಳಿದ್ದು, ಅದರಲ್ಲಿ ಒಂದು ಕೆಟ್ಟು ಬಾಗಿಲು ಮುಚ್ಚಿದೆ. ಮೂತ್ರ, ಮಲವಿಸರ್ಜನೆಗೆ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಇಳಕಲ್ಲ ನಗರ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದು, ಅನೇಕ ಜಿಲ್ಲೆಗಳ ಪ್ರಮುಖ ನಗರಗಳಿಗೆ ಕೇಂದ್ರ ಸ್ಥಳವಾಗಿದೆ. ಹಿಂದೆ ಹಿರಿಯರು ಹೋರಾಟ ಮಾಡಿ ಇಳಕಲ್ಲ ನಗರಕ್ಕೆ ಸುಸಜ್ಜಿತ ಬಸ್ ನಿಲ್ದಾಣ ಮತ್ತು ಬಸ್ ಡಿಪೋ ತಂದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಇಂದು ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.ಈ ಬಸ್ ನಿಲ್ದಾಣದಿಂದ ಪ್ರತಿದಿನ 300 ಬಸ್ ಗಳು ಕಾರ್ಯಾಚರಿಸುತ್ತಿದ್ದು, 20 ಸಾವಿರಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ಬಸ್ ನಿಲ್ದಾಣ ಕೇವಲ ಬಸ್ ಪ್ರಯಾಣಿಕರ ಲೆಕ್ಕಕ್ಕೆ ಮಾತ್ರ ಸೀಮಿತವಾದಂತಿದೆ. ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.ಮೂತ್ರ, ಮಲವಿಸರ್ಜನೆಗೆ ಪ್ರಯಾಣಿಕರ ಪರದಾಟ: ದೂರದ ಬೆಂಗಳೂರು, ಮಂಗಳೂರು, ಮುಂಬೈ, ಪುಣೆ, ಹೂದ್ರಾಬಾದ್, ಪಣಜಿ, ಕೊಲ್ಲಾಪುರ ಮತ್ತಿತರ ದೊಡ್ಡ ನಗರಗಳಿಂದ ಪ್ರಯಾಣಿಕರು ರಾತ್ರಿ ಪ್ರಯಾಣ ಮಾಡಿ ಬೆಳಗ್ಗೆ ಇಳಕಲ್ಲ ನಗರಕ್ಕೆ ಬಂದಿಳಿದು, ಇಲ್ಲಿಂದ ತಮ್ಮ ತಮ್ಮ ನಗರಗಳು ಅಥವಾ ಗ್ರಾಮಗಳಿಗೆ ತೆರಳುತ್ತಾರೆ. ಆದರೆ ಬೆಳಗ್ಗೆ ಬಂದ ತಕ್ಷಣ ಅವರಿಗೆ ಮಲ, ಮೂತ್ರ ವಿಸರ್ಜನೆ ಅವಶ್ಯಕತೆ ಇದೆ. ನಿತ್ಯ 30 ಸಾವಿರ ಪ್ರಯಾಣಿಕರು ಸಂಚರಿಸುವ ಬಸ್ ನಿಲ್ದಾಣದಲ್ಲಿ ಕೇವಲ ನಾಲ್ಕು ಶೌಚಾಲಯಗಳಿವೆ. ಅದರಲ್ಲಿ ಒಂದು ಕೆಟ್ಟು ಹೋಗಿದೆ. ಉಳಿದ ಮೂರು ಶೌಚಾಯಲದಲ್ಲಿ ಶೌಚಕ್ಕೆ ಹೋಗಲು ಪ್ರಯಾಣಿಕರು ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ಮಹಿಳೆಯರ ಮೂತ್ರಾಲಯ ಮತ್ತು ಶೌಚಾಯಗಳು ನಿರ್ವಹಣೆ ಇಲ್ಲದೆ ಗಲೀಜುಗೊಂಡಿದ್ದು, ಅನೇಕ ಮಹಿಳೆಯರು ಈ ಅವ್ಯವಸ್ಥೆ ನೋಡಿ ಒಳ ಹೋಗಲು ಮನಸ್ಸು ಆಗದೇ ಬಸ್ ಹಿಂದೆ ಮರೆಯಲ್ಲಿ ಮೂತ್ರ ಮಾಡುತ್ತಾರೆ. ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದು ಇಲ್ಲವೇ ಇಲ್ಲ, ಸಾರಿಗೆ ಇಲಾಖೆ ಈ ಎಲ್ಲ ಸೌಲಭ್ಯ ಒದಗಿಸಲು ಟೆಂಡರ್ ಕರೆದು ನೇಮಕ ಮಾಡಿದೆ. ಅವರು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಇವರಿಂದ ಪ್ರಯಾಣಿಕರಿಗೆ ಸರಿಯಾಗಿ ಸೇವೆ ಕೊಡಿಸಬೇಕಿದ್ದ ಅಧಿಕಾರಿಗಳು ಈ ಕಡೆಗೆ ಕಣ್ಣೆತ್ತಿ ನೋಡುತ್ತಿಲ್ಲ. ಅಧಿಕಾರಿಗಳೇ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವೂ ಇದೆ. ಹಿರಿಯ ಅಧಿಕಾರಿಗಳು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಪ್ರಯಾಣಿಕರ ಆಗ್ರಹವಾಗಿದೆ.
ಊರು ದೊಡ್ಡದಿರುವ ಕಾರಣ ಬಸ್ ನಿಲ್ದಾಣದಲ್ಲಿ ಬಸ್ ಗಳ ಓಡಾಟ ಹೆಚ್ಚಾಗಿದೆ. ಆದರೆ ದೂರದಿಂದ ಬಂದ ನನಗೆ ಬೆಳಗ್ಗೆ ಶೌಚಾಲಯಕ್ಕೆ ಹೋಗಲು ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಇದೇ ಇಲ್ಲಿಯ ದೊಡ್ಡ ತೊಂದರೆ. ಅಧಿಕಾರಿಗಳು ಸುಸಜ್ಜಿತವಾದ ಇನ್ನೂ 10 ಶೌಚಾಲಯ ಕಟ್ಟಿಸಬೇಕಿದೆ.
- ಶರಣಪ್ಪ ಪ್ರಯಾಣಿಕ
ಇಳಕಲ್ಲ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಗೆ ಮೂತ್ರಿ ಮತ್ತು ಶೌಚಕ್ಕೆ ಹೋಗಲು ತುಂಬಾ ತೊಂದರೆಯಾಗಿದೆ. ಸರಕಾರ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸಿದೆ. ಆದರೆದೀ ಬಸ್ ನಿಲ್ದಾಣದಲ್ಲಿ ಸ್ವಚ್ಛವಾದ ಮೂತ್ರಾಲಯ ಇಲ್ಲ, ಮಹಿಳಾ ಮೂತ್ರಾಲಯಗಳನ್ನು ಪ್ರತಿದಿನ ಸ್ವಚ್ಛ ಮಾಡಬೇಕು.-ಮಹಾದೇವಿ ಕುಂಬಾರ ಪ್ರಯಾಣಿಕ
ಇಳಕಲ್ಲ ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಬಸ್ ನಿಲ್ದಾಣದಲ್ಲಿ ಇನ್ನಷ್ಟು ಸುಸಜ್ಜಿತ ಶೌಚಾಲಯ ನಿರ್ಮಿಸಲು ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅಲ್ಲಿಂದ ಆದೇಶ ಬಂದ ತಕ್ಷಣ ಹೊಸ ಶೌಚಾಲಯ ಕಟ್ಟಿಸಲಾಗುವುದು.-ಬಿರಾದಾರ, ಇಳಕಲ್ಲ ಡೀಪೋ ಮ್ಯಾನೇಜರ್