ಕನ್ನಡಪ್ರಭ ವಾರ್ತೆ ಕಡೂರು
ಶಿಕ್ಷಣದಿಂದ ಸುಶಿಕ್ಷಿತರಾದಲ್ಲಿ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಹೇಳಿದರು.ತಾಲೂಕಿನ ಸಖರಾಯಪಟ್ಟಣ ಸಮೀಪದ ಹಸ್ತಿನಾಪುರ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಚ್ಚುವರಿ ನೂತನ ಕೊಠಡಿ ಮತ್ತು ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಲ್ಲ ತಾಯಂದಿರಿಗೂ ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳಾಗ ಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕೆ ಈ ಗ್ರಾಮವೂ ಹೊರತಾಗಿಲ್ಲ. ಶಿಕ್ಷಣ ಮತ್ತು ಆರೋಗ್ಯದಿಂದ ಯಾರೂ ವಂಚಿತರಾಗಬಾರದು. ನಮ್ಮ ಹಿರಿಯರು ಕಲಿಸಿದ ಸಂಸ್ಕೃತಿಯೊಂದಿಗೆ ಶಿಕ್ಷಣ ಕೊಡಬೇಕು.
ಪಠ್ಯ ಪುಸ್ತಕಗಳು ಪ್ರಜ್ಞಾವಂತ ಶಿಕ್ಷಣ ತಜ್ಞರು ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ರೂಪಿತವಾಗಬೇಕು. ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೂ ಸಿಗುತ್ತಿದೆ. ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಮಕ್ಕಳಿಗೆ ತಂದೆ ತಾಯಿ, ಅಕ್ಕ ತಮ್ಮ,ಗುರುಶಿಷ್ಯರು, ಹೀಗೆ ಸಂಬಂದ ಹೇಳಿಕೊಳ್ಳುವ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣ ಮಾಡಬಹುದು. ಹಸ್ತಿನಾಪುರ ಶಾಲೆ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆಯಿಲ್ಲದಂತೆ ಉತ್ತಮ ಶಿಕ್ಷಣ ನೀಡುತ್ತಾ ಮಾದರಿಯಾಗಿದೆ ಎಂದರು.ಬಿಇಒ ಬಹ್ರುದ್ದೀನ್ ಚೋಪ್ದಾರ್ ಮಾತನಾಡಿ ಹಸ್ತಿನಾಪುರ ಶಾಲೆಯಲ್ಲಿ 22 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಗ್ರಾಮಸ್ಥರ ಮತ್ತು ಜನಪ್ರತಿನಿಧಿಗಳ ಸಹಕಾರದಲ್ಲಿ ಶಾಲಾ ಕೊಠಡಿಗಳು ನಿರ್ಮಾಣ ವಾಗಿದೆ. ಉತ್ತಮ ವಾತಾವರಣದಲ್ಲಿ ಇಲ್ಲಿನ ಸಾವಿರಾರು ಮಕ್ಕಳು ಅನೇಕ ಸ್ಥಾನಮಾನಗಳೊಂದಿಗೆ ಉತ್ತುಂಗ ಸ್ಥಾನಕ್ಕೇರಿದ್ದಾರೆ ಎಂದರು. ಶಾಸಕ ತಮ್ಮಯ್ಯ ಮಾತನಾಡಿ ಶಾಲೆಗಳು ಯಾವಾಗಲೂ ಸಾರ್ವಜನಿಕರ ಸಹಕಾರದಲ್ಲಿ ನಡೆಯ ಬೇಕು. ಶಿಕ್ಷಣ ಎಲ್ಲರಿಗೂ ಮುಖ್ಯ. ಸರಕಾರಿ ನೌಕರಿಗೆ ಮಾತ್ರವಲ್ಲ. ಬದುಕನ್ನು ಬದಲಾಯಿಸುವ ಶಿಕ್ಷಣ ಬೇಕು. ಧಾರ್ಮಿಕ, ಸಾಂಸ್ಕೃತಿಕವಾಗಿ ಪ್ರಪಂಚದಲ್ಲೇ ಭಾರತದ ಸ್ಥಾನ ಉತ್ತುಂಗದಲ್ಲಿದ್ದು ಸಖರಾಯಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಕೆಪಿಎಸ್ ಸಿ ಶಾಲೆ ಆರಂಭವಾಗಲಿದೆ ಎಂದರು.ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಮಾತನಾಡಿ, ಸರ್ಕಾರಿ ಶಾಲೆಗಳು ಊರಿನ ಹೆಮ್ಮೆ.ಮನುಷ್ಯನಿಗೆ ಹಣ ಬೇಕು. ಆದರೆ ಹಣವೇ ಎಲ್ಲವೂ ಅಲ್ಲ, ವಿದ್ಯೆ ಒಂದಿದ್ದರೆ ಅದನ್ನು ಕಸಿಯಲು ಯಾರಿಂದಲೂ ಸಾಧ್ಯ ವಿಲ್ಲ. ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಎಲ್ಲಾದರೂ ಬದುಕನ್ನು ಕಟ್ಟಿಕೊಳ್ಳುವ ಸಾಮರ್ಥ್ಯ ಹೊಂದಿ ರುತ್ತಾರೆ. ಹಸ್ತಿನಾಪುರ ಗ್ರಾಮ ಎಲ್ಲ ತಾಂಡಗಳಿಗಿಂತ ಮಾದರಿ ಎಂದರು.ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ತಾಪಂ ಮಾಜಿ ಸದಸ್ಯ ಹಾಗೂ ಪಿಎಲ್ ಡಿ ಬ್ಯಾಂಕ್ ನಿರ್ಧೇಶಕ ಆನಂದನಾಯ್ಕ ಮಾತನಾಡಿದರು. ಸಮಾರಂಭದಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಹೇಮಾಜಿನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷೆ ಶಕುಂತಲಾ, ರಾಜಮ್ಮ, ಮುಖ್ಯ ಶಿಕ್ಷಕ ಜಗದೀಶ್, ಶಿಕ್ಷಕಿ ಲತಾ ಜಗದೀಶ್ ವಂದಿಸಿದರು. ಎಸ್.ಡಿಸಿಎಂಸಿ ಅಧ್ಯಕ್ಷ, ಸದಸ್ಯರು, ಗ್ರಾ.ಪಂ.ನ ಮಾಜಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. 14ಕೆಕೆಡಿಯು1.
ಕಡೂರು ತಾಲೂಕಿನ ಸಖರಾಯಪಟ್ಟಣದ ದ ಹಸ್ತಿನಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಚ್ಚುವರಿ ಕೊಠಡಿ ಮತ್ತು ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಬೋಜೇಗೌಡ ಉದ್ಘಾಟಿಸಿದರು. ಜೊತೆಯಲ್ಲಿ ಶಾಸಕರಾದ ತಮ್ಮಯ್ಯ, ಸಿ ಟಿ ರವಿ ಹಾಗೂ ಇತರರು ಇದ್ದಾರೆ.