ಡಂಬಳ ಹೋಬಳಿಯ ಅತ್ತಿಕಟ್ಟಿ ತಾಂಡಾ ಗ್ರಾಮದಲ್ಲಿ ಮೇಗಲಮನಿ ಕುಟುಂಬದವರಿಂದ ಹಿರಿಯರಾದ ಸೋಮಪ್ಪ ಮತ್ತು ಫಕೀರಮ್ಮ ಸವಿ ನೆನಪಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ ನಡೆಯಿತು.

ಡಂಬಳ: ಶಿಕ್ಷಣವೇ ಬದುಕಿನ ದೊಡ್ಡ ಶಕ್ತಿ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಶಿಕ್ಷಣದಿಂದಲೇ ಸಮಾಜದಲ್ಲಿ ಸಮಾನತೆ ಸಾಧ್ಯವೆಂದು ಹೇಳಿದ್ದರು. ಅದೇ ಮಾರ್ಗದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರನ್ನು ದೊಡ್ಡ ಸ್ಥಾನಗಳಿಗೆ ತಲುಪಿಸುವ ಕೆಲಸ ಮಾಡಿದ ರಾಮಣ್ಣ ಮೇಗಲಮನಿ ಅವರ ಕುಟುಂಬದ ಕಾರ್ಯ ನಿಜವಾಗಿಯೂ ಪ್ರಶಂಸನೀಯ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಡಂಬಳ ಹೋಬಳಿಯ ಅತ್ತಿಕಟ್ಟಿ ತಾಂಡಾ ಗ್ರಾಮದಲ್ಲಿ ಮೇಗಲಮನಿ ಕುಟುಂಬದವರಿಂದ ಹಿರಿಯರಾದ ಸೋಮಪ್ಪ ಮತ್ತು ಫಕೀರಮ್ಮ ಸವಿ ನೆನಪಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ರಾಮಣ್ಣ ಮೇಗಲಮನಿ ಅವರು ತಮ್ಮ ಮಕ್ಕಳಿಗೆ ಸಂಸ್ಕಾರ ಹಾಗೂ ಉನ್ನತ ಶಿಕ್ಷಣ ನೀಡಿದ್ದು, ಅವರು ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಹೊಂದುವಂತೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

ಇಂದಿನ ಯುವಕರು ತಮ್ಮ ತಂದೆ-ತಾಯಿ ಕಷ್ಟಪಟ್ಟು ಗಳಿಸಿದ ಹಣದ ಮೌಲ್ಯವನ್ನು ಅರಿತು ಶ್ರಮಿಸಿದಾಗ ಮಾತ್ರ ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋಗ ಪಡೆಯಲು ಸಾಧ್ಯ. ಮೇಗಲಮನಿ ಕುಟುಂಬವು ಈ ಮೂಲಕ ಸಮಾಜಕ್ಕೆ ಆದರ್ಶ ಕುಟುಂಬವಾಗಿ ಮೂಡಿಬಂದಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಕುಟುಂಬ ಪ್ರೇರಣೆಯಾಗಬೇಕು ಎಂದು ಹೇಳಿದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಹಾಗೂ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಶಿಕ್ಷಣದ ಮಹತ್ವ ವಿವರಿಸಿದರು. ಸಮಾಜದಲ್ಲಿ ಪ್ರಗತಿ ಸಾಧಿಸಲು ಶಿಕ್ಷಣವೇ ಪ್ರಮುಖ ಸಾಧನವಾಗಿದ್ದು, ಯುವಕರು ಶಿಕ್ಷಣದ ಮೂಲಕ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಗದಗ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಮುಂಡರಗಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ರಾಮಣ್ಣ ಮೇಗಲಮನಿ ಅವರು ಈ ಭಾಗದ ಜನತೆಗೆ ಬಸ್‌ ಸೌಲಭ್ಯ ಒದಗಿಸಿಕೊಡಲು, ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವುದು... ಹೀಗೆ ಹಲವು ಸಾಮಾಜಿಕ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ತಹಸೀಲ್ದಾರ್‌ ಯರಿಸ್ವಾಮಿ ಪಿ.ಎಸ್. ಮಾತನಾಡಿ, ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದವರನ್ನು, ಕಲಾವಿದರನ್ನು, ಕುಸ್ತಿಪಟುಗಳನ್ನು, ಅಂತಾರಾಷ್ಟ್ರೀಯ ಯೋಗಪಟು, ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಿದರು. ಶಾಸಕರು,ಗ್ರಾಮದ ಹಿರಿಯರು, ಗ್ಯಾರಂಟಿ ಸಮಿತಿ ಸದಸ್ಯರು, ಕುಟುಂಬದ ಸಂಬಂಧಿಕರು ರಾಮಣ್ಣ ಮೇಗಲಮನಿ ಮತ್ತು ಸಂಗವ್ವ ಮೇಗಲಮನಿ ಅವರಿಗೆ ಗೌರವ ಸನ್ಮಾನ ಮಾಡಿದರು.

ತಾಪಂ ಇಒ ವಿಶ್ವನಾಥ ಹೊಸಮನಿ,‌ ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಯಲಿವಾಳ, ಬಿ.ಒ. ಗಂಗಾಧರ ಅಣ್ಣಿಗೇರಿ, ವಿ.ಬಿ. ಸೋಮನಕಟ್ಟಿಮಠ, ಯುವ ಮುಖಂಡ ಬಸವರಡ್ಡಿ ಬಂಡಿಹಾಳ, ನಾಗರಾಜ ಸಜ್ಜನ, ವಿಶ್ವನಾಥ ಪಾಟೀಲ, ಭುವನೇಶ್ವರಿ ಕಲ್ಲಕುಟಿಗರ, ಎಚ್.ಡಿ. ಪೂಜಾರ, ಚೆನ್ನಪ್ಪ ಹಿತ್ತಲಮನಿ, ನಾಗಪ್ಪ ಮೇಗಲಮನಿ, ಪ್ರಾಚಾರ್ಯ ಮಹಾಲಿಂಗೇಶ್ವರ ಮೇಗಲಮನಿ, ಆರ್.ಎಫ್. ಮಂಜುನಾಥ ಮೇಗಲಮನಿ, ಖ್ಯಾತ ವೈದ್ಯ ಡಾ. ಶರಣಪ್ಪ ಮೇಗಲಮನಿ ಇದ್ದರು.