ಸತ್ಯ, ಧರ್ಮದಿಂದ ಮಾತ್ರ ನಾವು ಮುಕ್ತಿ ಕಾಣಲು ಸಾಧ್ಯ: ಡಾ.ಶೆಲ್ವಪ್ಪಿಳ್ಳೈ ಅಯ್ಯಂಗಾರ್

| Published : May 20 2024, 01:31 AM IST

ಸತ್ಯ, ಧರ್ಮದಿಂದ ಮಾತ್ರ ನಾವು ಮುಕ್ತಿ ಕಾಣಲು ಸಾಧ್ಯ: ಡಾ.ಶೆಲ್ವಪ್ಪಿಳ್ಳೈ ಅಯ್ಯಂಗಾರ್
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀವೆಂಕಟೇಶ್ವರಸ್ವಾಮಿ ಧಾರ್ಮಿಕ ಸಮಿತಿ ಪದಾಧಿಕಾರಿಗಳ ಶ್ರಮದಿಂದ ಈ ಭಾಗದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ದೇವಸ್ಥಾನ ನಿರ್ಮಾಣಗೊಂಡಿದೆ. ಇದನ್ನು ಉಳಿಸಿ ಅಭಿವೃದ್ಧಿ ಪಡಿಸಲು ಸೇವಾ ಕಾರ್ಯ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಸೇವಾಸಮಿತಿ ರಚಿಸಿ ಹಣ ಸಂಗ್ರಹ ಮಾಡಿ ಕೃಢೀಕರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಸತ್ಯ ಧರ್ಮದಿಂದ ನಡೆದಾಗ ಮಾತ್ರ ನಾವು ಮುಕ್ತಿ ಕಾಣಲು ಸಾಧ್ಯ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಮೇಲುಕೋಟೆ ಸ್ಥಾನಚಾರ್ಯರಾದ ಡಾ.ಶೆಲ್ವಪ್ಪಿಳ್ಳೈ ಅಯ್ಯಂಗಾರ್ ತಿಳಿಸಿದರು.

ಶ್ರೀಸಪ್ತಗಿರಿ ಪಾರ್ಟಿಹಾಲ್‌ನಲ್ಲಿ ನಡೆದ ಶ್ರೀವೆಂಕಟೇಶ್ವರಸ್ವಾಮಿ ಧಾರ್ಮಿಕ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪರಮಾತ್ಮನ ಸೇವೆಗಾಗಿ ಪ್ರತೀದಿನ ಸ್ವಲ್ಪ ಸಮಯವನ್ನಾದರು ಮೀಸಲಿಡುವುದು ಒಳ್ಳೆಯ ಬೆಳವಣಿಗೆ ಎಂದರು.

ಸಮಿತಿ ಪದಾಧಿಕಾರಿಗಳ ಶ್ರಮದಿಂದ ಈ ಭಾಗದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ದೇವಸ್ಥಾನ ನಿರ್ಮಾಣಗೊಂಡಿದೆ. ಇದನ್ನು ಉಳಿಸಿ ಅಭಿವೃದ್ಧಿ ಪಡಿಸಲು ಸೇವಾ ಕಾರ್ಯ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಸೇವಾಸಮಿತಿ ರಚಿಸಿ ಹಣ ಸಂಗ್ರಹ ಮಾಡಿ ಕೃಢೀಕರಿಸಲಾಗುತ್ತಿದೆ. ಸದಸ್ಯರಿಂದ ಬಂದ ಹಣದಿಂದ ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಮಿತಿ ಮುಂದಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ದೇವಸ್ಥಾನ ರಾಜ್ಯದಲ್ಲಿಯೇ ಪ್ರಚಲಿತಗೊಳ್ಳಲಿದೆ ಎಂದರು.

ಸಾಹಿತಿ ತೈಲೂಕು ವೆಂಕಟಕೃಷ್ಣ ಮಾತನಾಡಿ, ಧಾರ್ಮಿಕ ಪರಂಪರೆ ಉಳಿಸುವ ನಿಟ್ಟಿನಲ್ಲಿ ಇಂದಿನ ಯುವಜನತೆ ಮುಂದಾಗಬೇಕು. ನಮ್ಮ ಕಾಲಕ್ಕೆ ಮುಗಿದು ಹೋಗಬಾರದು. ಈ ಹಿಂದೆ ಮಕ್ಕಳಿಗೆ ಹೆಸರು ಇಡುವಾಗ ದೇವರ ಹೆಸರನ್ನೇ ಹೆಚ್ಚು ಇಡುತ್ತಿದ್ದರು. ಆದರೆ, ಪ್ರಸ್ತುತ ದಿನದಲ್ಲಿ ಅವುಗಳೆಲ್ಲಾ ಮಾಯವಾಗುತ್ತಿವೆ. ದೈವಭಕ್ತಿ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ಅರ್ಚಕ ಹಾಗೂ ವಕೀಲ ಯು.ವಿ.ಗಿರೀಶ್ ಮಾತನಾಡಿ, ಈ ಭಾಗದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ದೇವಸ್ಥಾನವನ್ನು ನಿರ್ಮಿಸಿ ಪ್ರತೀ ವಿಶೇಷ ದಿನಗಳಲ್ಲೂ ವಿನೂತನ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ ಎಂದರು.

ಈ ವೇಳೆ ಪದಾಧಿಕಾರಿಗಳನ್ನು ಮತ್ತು ಸದಸ್ಯರನ್ನು ಸಮಿತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಇದಕ್ಕೂ ಮೊದಲು ಶ್ರೀವೆಂಕಟೇಶ್ವರ ಧಾರ್ಮಿಕ ಸಮಿತಿ ಮತ್ತು ಭಕ್ತಾದಿಗಳ ಸಮ್ಮುಖದಲ್ಲಿ ದೇವಾಲಯದ ಪ್ರದಾನ ಅರ್ಚಕರಾದ ಗೋಪಾಲಕೃಷ್ಣಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ನಂತರ ಶ್ರೀವೆಂಕಟೇಶ್ವರಸ್ವಾಮಿ ಧಾರ್ಮಿಕ ಸಮಿತಿ ಕಚೇರಿ ಉದ್ಘಾಟಿಸಲಾಯಿತು.

ಇದೇ ವೇಳೆ ಸಮಾಜ ಸೇವಕ ಕುಣಿಗಲ್ ಬಲರಾಮು, ಶ್ರೀವೆಂಕಟೇಶ್ವರಸ್ವಾಮಿ ದೇವಸ್ಥಾನದ ಅರ್ಚಕರಾದ ಅನಂತ ಕೃಷ್ಣಭಟ್ಟರ್, ಶ್ರೀವೆಂಕಟೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪೂಜೂರಿ ವೆಂಕಟೇಗೌಡ, ಸಮಿತಿಯ ಅಧ್ಯಕ್ಷ ವೆಂಕಟೇಶ್, ಪ್ರಧಾನ ಪೋಷಕರಾದ ನಾಗರಾಜು, ಗೌರವಾಧ್ಯಕ್ಷ ಗಿರೀಶ್, ಪದಾಧಿಕಾರಿಗಳಾದ ಬಸವರಾಜು, ಬಿ.ಆರ್.ರವಿ, ವೆಂಕಟೇಶ್, ಕೆಂಚೇಗೌಡರ ಶ್ರೀನಿವಾಸ್, ದೇವರಹಳ್ಳಿ ವೆಂಕಟೇಶ್, ಕೆ.ಟಿ.ವೆಂಕಟೇಶ್, ವೆಂಕಟರಾಮು, ಅಣ್ಣೂರು ಸತೀಶ್, ವೆಂಕಟೇಶ್‌ ತಿಮ್ಮಯ್ಯ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.