ನೆಲಮಂಗಲಕ್ಕೆ ಸಂಸ್ಕರಿಸಿದ ವೃಷಭಾವತಿ ನೀರು ಮಾತ್ರ ಪೂರೈಕೆ

| Published : Apr 09 2025, 12:33 AM IST

ನೆಲಮಂಗಲಕ್ಕೆ ಸಂಸ್ಕರಿಸಿದ ವೃಷಭಾವತಿ ನೀರು ಮಾತ್ರ ಪೂರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ವೃಷಭಾವತಿಯಿಂದ ಸಂಸ್ಕರಿಸಿದ ಶುದ್ಧೀಕರಣದ ನೀರು ಮಾತ್ರ ನೆಲಮಂಗಲಕ್ಕೆ ಬರುವುದು, ಈ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ರಾಜಕೀಯಕ್ಕಾಗಿ ಹಣ ಪಡೆದು ವಿರೋಧ ಮಾಡುವವರಿಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ದಾಬಸ್‍ಪೇಟೆ: ವೃಷಭಾವತಿಯಿಂದ ಸಂಸ್ಕರಿಸಿದ ಶುದ್ಧೀಕರಣದ ನೀರು ಮಾತ್ರ ನೆಲಮಂಗಲಕ್ಕೆ ಬರುವುದು, ಈ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ರಾಜಕೀಯಕ್ಕಾಗಿ ಹಣ ಪಡೆದು ವಿರೋಧ ಮಾಡುವವರಿಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಯಂಟಗಾನಹಳ್ಳಿಯಲ್ಲಿ ಆಯೋಜಿಸಿದ್ದ ರೈತರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವಕರು ಕ್ರೀಡೆ ಜೊತೆ ಸಮಾಜ, ಗ್ರಾಮದ ಅಭಿವೃದ್ದಿ, ಮನೆ ನಿರ್ವಹಣೆ ಬಗ್ಗೆಯೂ ಹೆಚ್ಚು ಆಸಕ್ತಿ ವಹಿಸಬೇಕು. ತಾಲೂಕಿನಲ್ಲಿ ರೈತರ ಹೆಸರಿನಲ್ಲಿ ನಡೆದಿರುವ ಏಕೈಕ ಕ್ರಿಕೆಟ್ ಪಂದ್ಯಾವಳಿಯದಾಗಿದ್ದು ರೈತರನ್ನು ಕರೆಸಿ ಸನ್ಮಾನಿಸಿ ಅವರ ಹೆಸರಿನಲ್ಲಿ ಪಂದ್ಯಾವಳಿ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.

ರೈತ ಪರ ಯೋಜನೆ ಜಾರಿಗೆ: ನೆಲಮಂಗಲ ಕ್ಷೇತ್ರದ ಜನರು ಮತ ನೀಡಿ ನನಗೆ ಸೇವೆ ಮಾಡುವ ಅಧಿಕಾರ ನೀಡಿದ್ದಾರೆ. ಹೆಚ್ಚಿನದಾಗಿ ರೈತರು ನಮಗೆ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಅನುಕೂಲವಾಗುವ ದೃಷ್ಟಿಯಿಂದಲೇ ನೆಲಮಂಗಲಕ್ಕೆ ರೈತ ಪರ ಯೋಜನೆಗಳನ್ನು ತರಲಾಗಿದೆ. ವೃಷಭಾವತಿ ಸಂಸ್ಕರಿಸಿದ ಶುದ್ಧೀಕರಣವಾದ ನೀರು ಯಶವಂತಪುರ, ಯಲಹಂಕ ನಂತರ ನೆಲಮಂಗಲ, ದೊಡ್ಡಬಳ್ಳಾಪುರ, ತುಮಕೂರಿಗೂ ಹೋಗಲಿದೆ ಎಂದರು.

ಸಂಸ್ಕರಿಸಿದ ನೀರು ಕೆರೆಗೆ:

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‍ ಅವರ ಭಾಗಕ್ಕೆ ಹೆಚ್ಚಿನ ಕೆರೆಗಳಿಗೆ ನೀರು ಬೇಕು ಎಂದು ಒತ್ತಾಯಿಸಿದ್ದಾರೆ. ನೀರು ಉತ್ತಮವಾಗಿ ಕ್ಷೇತ್ರಕ್ಕೆ ಬರುವ ನಂಬಿಕೆ ಬಂದ ಮೇಲೆಯೇ ಯೋಜನೆ ಜಾರಿ ಮಾಡಿರುವುದು. ಕೆಸಿ ವ್ಯಾಲಿ, ಎಚ್‌ಎಂ ವ್ಯಾಲಿಗಳಿಗಿಂತಲೂ ಹೊಸ ತಂತ್ರಜ್ಞಾನ, ನೂರಾರು ವಿಜ್ಞಾನಿಗಳ ಸಲಹೆ ಸೂಚನೆ ಮೇರೆಗೆ ಸಂಸ್ಕರಿಸಿ ನೀರು ಕೆರೆಗೆ ಹರಿಸಲಾಗುತ್ತಿದೆ ಎಂದು ಹೇಳಿದರು.

ನನಗೂ ಬದ್ಧತೆ ಇದೆ:

ಶುದ್ದೀಕರಿಸಿದ ನೀರು ಒಂದೂವರೆ ಸಾವಿರ ಅಡಿ ಹೋಗಿರುವ ಅಂತರ್ಜಲ ಮಟ್ಟ ಸುಧಾರಿಸಿ ರೈತರ ವ್ಯವಸಾಯಕ್ಕೆ ಕೊಳವೆ ಬಾವಿಯಲ್ಲಿ ಹೆಚ್ಚು ನೀರು ಬರುವಂತಾಗುತ್ತದೆ. ಈ ಯೋಜನೆಯ ಬಗ್ಗೆ ಕೆಲವರು ಇಲ್ಲಸಲ್ಲದ ಪ್ರಚಾರ ಮಾಡಿಕೊಂಡು ಓಡಾಡುತ್ತಿದ್ದಾರೆ. ರೈತರಿಗೆ ಅನುಕೂಲವಾಗಲು ಯೋಜನೆ ತರಲಾಗಿದೆ, ಅನುಕೂಲ ಮಾಡುವುದನ್ನು ಯಾರಿಂದಲು ತಡೆಯಲು ಸಾಧ್ಯವಿಲ್ಲ. ರೈತ ಪರ ಕೆಲಸ ನನ್ನ ಹೊಣೆ ಇದರ ಬಗ್ಗೆ ನನಗೆ ಬದ್ದತೆಯಿದೆ ಎಂದರು.

ರಾಗಿ ಖರೀದಿ ಕೇಂದ್ರದಲ್ಲಿ ಸಮಸ್ಯೆಗಳಾಗುತ್ತಿರುವ ಬಗ್ಗೆ ಚುನಾವಣೆಗೂ ಮೊದಲು ರೈತರು ಮಾಹಿತಿ ನೀಡಿದಾಗ ಊಟ, ನೀರು, ನೆರಳು ವ್ಯವಸ್ಥೆ ಮಾಡಿದ್ದೇನು, ಆಗ ವಿರೋಧ ಪಕ್ಷದ ಕೆಲವರು ರಾಜಕೀಯಕ್ಕಾಗಿ, ಚುನಾವಣೆಗಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ ರೈತರು ನಮ್ಮ ಸೇವೆಯನ್ನು ನೆನೆದು ಆಶೀರ್ವಾದ ಮಾಡಿದರು. ಆದರೆ ಸೇವೆಯನ್ನು ಮಾತ್ರ ನಿಲ್ಲಿಸಿಲ್ಲ, ಇಂದಿಗೂ ಮಾಗಡಿ ಹಾಗೂ ನೆಲಮಂಗಲ ತಾಲೂಕಿನ ರೈತರಿಗೆ ಊಟ, ನೀರು, ನೆರಳು, ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದ್ದು ಮುಂದೆಯೂ ಮಾಡುತ್ತೇನೆ ಎಂದರು.

200 ರೈತರಿಗೆ ಸನ್ಮಾನ:

ಶ್ರೀನಿವಾಸಪುರ, ಯಂಟಗಾನಹಳ್ಳಿ, ಸೋಲದೇವನಹಳ್ಳಿ ಗ್ರಾಪಂ 200ಕ್ಕೂ ಹೆಚ್ಚು ರೈತರಿಗೆ 3 ದಿನದ ರೈತ ಕಪ್ ಪಂದ್ಯಾವಳಿಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎನ್‍ಪಿಎ ಅಧ್ಯಕ್ಷ ನಾರಾಯಣಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ನಾಗರಾಜು, ವಿಎಸ್ಸೆನ್ನೆಲ್‌ ಅಧ್ಯಕ್ಷ ವೀರಮಾರೇಗೌಡ, ಕಾಂಗ್ರೆಸ್ ಮುಖಂಡ ಚಿಕ್ಕಹನುಮೇಗೌಡ ಇತರರಿದ್ದರು.

ಪೋಟೋ 1 :

ಭೂಸಂದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರೈತ ಕಪ್ ಕ್ರಿಕೆಟ್ ಕ್ರೀಡಾಕೂಟದಲ್ಲಿ ಶಾಸಕ ಶ್ರೀನಿವಾಸ್ ರೈತರನ್ನು ಸನ್ಮಾನಿಸಿದರು.