ಸಾರಾಂಶ
ಗ್ರಾಮಸ್ಥರ ಅಳಲು । ಸಂಸದ ಶ್ರೇಯಸ್‌ಗೆ ವಿದ್ಯಾರ್ಥಿನಿ ಮನವಿ ವಿಡಿಯೋ ವೈರಲ್
ಕನ್ನಡಪ್ರಭ ವಾರ್ತೆ ಹೊಳೆನರಸೀಪುರತಾಲೂಕಿನ ನಗರನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ೧೨೬ ವಿದ್ಯಾರ್ಥಿಗಳು, ಉತ್ತಮ ಭವಿಷ್ಯ ನಿರ್ಮಿಸುವ ಪ್ರೌಢ ಶಿಕ್ಷಣ ಹಂತದಲ್ಲಿ ೬ ವಿಷಯಗಳಿಗೆಗಿರುವ ಶಿಕ್ಷಕರು ಮಾತ್ರ ಇಬ್ಬರು!. ಈ ಪರಿಸ್ಥಿತಿಯಲ್ಲಿ ಶೇ ೧೦೦ ಫಲಿತಾಂಶದೊಂದಿಗೆ ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಜಾಹಿರಾತು ನೀಡುವ ಸರ್ಕಾರದ ಕಾರ್ಯವೈಖರಿ ಜತೆಗೆ ಆಡಳಿತದ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ನಗರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ೧೨೬ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ೧೦ನೇ ತರಗತಿಯಲ್ಲಿ ೫೨ ವಿದ್ಯಾರ್ಥಿಗಳು, ೯ನೇ ತರಗತಿಯಲ್ಲಿ ೪೯ ವಿದ್ಯಾರ್ಥಿಗಳು ಹಾಗೂ ೮ನೇ ತರಗತಿಯಲ್ಲಿ ೨೫ ವಿದ್ಯಾರ್ಥಿಗಳು ಇದ್ದಾರೆ. ಪೋಷಕರು ಖಾಸಗಿ ಶಾಲೆಗೆ ಸೇರಲಾಗದೆ ಬಡತನದಿಂದಾಗಿ ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕೈಗೆಟುಕುವ ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ. ಆದರೆ ಇಬ್ಬರು ಶಿಕ್ಷಕರ ಹೊರತಾಗಿ ಬೇರ್‍ಯಾವುದೇ ವಿಷಯಗಳ ಶಿಕ್ಷಕರಿಲ್ಲದ್ದರಿಂದ ನೊಂದ ವಿದ್ಯಾರ್ಥಿನಿಯೊಬ್ಬರು ಸಂಸದ ಶ್ರೇಯಸ್ ಎಂ.ಪಟೇಲ್ ಅವರಿಗೆ ವಾರ್ಷಿಕ ಪರೀಕ್ಷೆಗೆ ೮೬ ದಿನ ಮಾತ್ರ ಇದೆ ಎಂದು ವಿನಂತಿಸಿ, ನಮ್ಮ ಸಮಸ್ಯೆ ನಿವಾರಿಸಿ ಎಂದು ಬೇಡಿಕೊಳ್ಳುತ್ತಿರುವ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಕಲಿಯಬೇಕು ಎಂಬ ಗ್ರಾಮೀಣ ವಿದ್ಯಾರ್ಥಿಗಳ ತುಡಿತ ಮತ್ತು ಹತಾಶೆಯಿಂದ ನೊಂದ ವಿದ್ಯಾರ್ಥಿನಿಯ ಕೂಗಿಗೆ ಸ್ಪಂದಿಸುವ ವಿಸಾಲ ಮನೋಭಾವದ ಅಧಿಕಾರಿಯ ಅಗತ್ಯತೆ ಹೆಚ್ಚಿದೆ.ಗ್ರಾಮದ ನಿಂಗರಾಜು ಎಂಬುವರು ಮಾತನಾಡಿ, ಶಾಲೆಯಲ್ಲಿ ೪೦ ವಿದ್ಯಾರ್ಥಿನಿಯರು ಹಾಗೂ ೧೦ ವಿದ್ಯಾರ್ಥಿಗಳು ಇದ್ದಾರೆ. ಮಹಿಳಾ ಉನ್ನತೀಕರಣಕ್ಕೆ ಹೆಚ್ಚಿನ ಆಧ್ಯತೆ ಎನ್ನುವ ಸರ್ಕಾರದ ಘೋಷಣೆಗಳು ಪ್ರಕಟಣೆಗೆ ಮಾತ್ರ ಎಂದು ಬೇಸರ ವ್ಯಕ್ತಪಡಿಸಿ, ಗ್ರಾಮೀಣ ಪ್ರದೇಶದಲ್ಲಿ ೧೦ನೇ ತರಗತಿಯಲ್ಲಿ ಹೆಣ್ಣು ಮಕ್ಕಳು ನಾಪಾಸಾದರೇ ಪೋಷಕರು ಮದುವೆ ಮಾಡುವ ಚಿಂತನೆ ಮಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆತ್ಮವಿಶ್ವಾಸದಿಂದ ಕೂಡಿದ ವಿದ್ಯಾರ್ಥಿನಿಯರ ಭವಿಷ್ಯ ರೂಪಿಸಿಕೊಳ್ಳವ ಕನಸು ಮೊಟಕಾಗುತ್ತದೆ ಎಂದು ಬೇಸರದಿಂದ ನುಡಿದರು.
ಸಂಸದರ ಅಭಿಮಾನಿ ಪ್ರದೀಪ್, ಯಾವ ಎಂಪಿ ಸಾಹೇಬ್ರದು ನಡೆಯಲ್ಲ, ಯಾವ ಎಂಎಲ್‌ಎದು ನಡೆಯಲ್ಲ, ಅಧಿಕಾರಿಗಳೇ ಇಲ್ಲಿ ದೊಡ್ಡ ಲೀಡರ್‌ಗಳಾಗಿದ್ದಾರೆ ಅಧಿಕಾರಿಗಳು ಏನ್ ಹೇಳ್ತಾರೋ ಅದೇ ಆಗೋದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿಇಒ ಸೋಮಲಿಂಗೇಗೌಡ ಮಾತನಾಡಿ, ನಗರನಹಳ್ಳಿ ಶಾಲೆಯಲ್ಲಿ ೩ ಕಾಯಂ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಹಾಗೂ ಇಬ್ಬರು ನಿಯೋಜಿತ ಶಿಕ್ಷಕರು ಇದ್ದಾರೆ, ಸಮಸ್ಯೆ ಇಲ್ಲವೆಂದರು.