ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಪರಿಶ್ರಮ ಇದ್ದಾಗ ಮಾತ್ರ ಹೈನುಗಾರಿಕೆ ಆರ್ಥಿಕ ಲಾಭಗಳಿಸಲು ಸಾಧ್ಯ. ಆದ್ದರಿಂದ ಹೈನುಗಾರರು ತುಮಕೂರು ಹಾಲು ಒಕ್ಕೂಟ ನೀಡುವ ಮೇವಿನ ಬಿತ್ತನೆ ಬೀಜಗಳನ್ನು ಬಳಸಿಕೊಂಡು ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ನೀಡಿ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು. ಅವರು ನಗರದ ನಂದಿನಿ ಕ್ಷೀರ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರೈತರಿಗೆ ಮೇವು ಬಿತ್ತನೆ ಬೀಜ ಮತ್ತು ನೇಪಿಯರ್ ಕಡ್ಡಿಗಳನ್ನು ವಿತರಣೆ ಮಾಡಿ ಮಾತನಾಡಿದರು. ಹಾಲಿನ ಉತ್ಪಾದನೆ ಕಡಿಮೆ ಇರುವ ಸಂಘಗಳಿಗೆ, ಉತ್ಪಾದನೆ ಹೆಚ್ಚಳ ಮಾಡಿಕೊಂಡು, ಗುಣಮಟ್ಟದ ಹಾಲು ಒಕ್ಕೂಟಕ್ಕೆ ನೀಡಲಿ ಎಂಬ ಸದುದ್ದೇಶದಿಂದ ರಾಷ್ಟ್ರೀಯ ಜೀವನೋಪಾಯ ಮಿಷನ್ ಯೋಜನೆಯಡಿ ಹೈನುಗಾರಿಕೆ ಮಾಡುವಂತಹ ರೈತರಿಗೆ ೪೦ ಕ್ವಿಂಟಲ್ ಬಿತ್ತನೆ ಮೇವು ಬೀಜ ವಿತರಣೆ ಮಾಡಿದ್ದೇವೆ. ಹೈನುಗಾರರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲಾ ಹಾಲು ಉತ್ಪಾದಕರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಗುರಿ ಹೊಂದಲಾಗಿದ್ದು, ಸಂಘದ ಕಾರ್ಯದರ್ಶಿಗಳ ಮೂಲಕ ಬೇಡಿಕೆ ಸಲ್ಲಿಸಬಹುದಾಗಿದೆ. ಇದಲ್ಲದೆ ತುಮಕೂರು ಹಾಲು ಒಕ್ಕೂಟ ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂಬ ದೃಢ ಸಂಕಲ್ಪದೊಂದಿಗೆ ಲಸಿಕೆಯನ್ನು ಸೀಮೆ ಹಸುಗಳಿಗೆ ನೀಡುತ್ತಿದೆ, ಈ ಲಸಿಕಿಯಿಂದ ಹಸು ಗರ್ಭ ಧರಿಸಿ ಹೆಣ್ಣು ಕರುವಿಗೆ ಜನ್ಮ ನೀಡಲಿದ್ದು, ಈ ಹೆಣ್ಣು ಕರು ವನ್ನು ಉತ್ತಮವಾಗಿ ಪೋಷಣೆ ಮಾಡಿ ಬೆಳೆಸಿದರೆ ಕರು ಬೆಳೆದು ಹಸುವಾಗಿ ಉತ್ತಮ ಹಾಲು ನೀಡಲಿದ್ದು ಉತ್ಪಾದಕರು ಆರ್ಥಿಕವಾಗಿ ಸದೃಢರಾಗಬಹುದು. ಈಗಾಗಲೇ ತುಮಕೂರು ಹಾಲು ಒಕ್ಕೂಟ ೨೧ ಎಕರೆ ಪ್ರದೇಶದಲ್ಲಿ ಪ್ರೋಟೀನ್ ಹೆಚ್ಚಾಗಿರುವ ಗುಣಮಟ್ಟದ ನೇಪಿಯರ್ ಕಡ್ಡಿಗಳನ್ನು ಬೆಳೆಸಿದ್ದು ಇದನ್ನು ರೈತರ ಅಗತ್ಯಕ್ಕೆ ಅನುಗುಣವಾಗಿ ವಿತರಣೆ ಮಾಡುತ್ತಿದ್ದೇವೆ. ಹಸಿರಿನಿಂದ ಕೂಡಿದ ನೇಪಿಯರ್ ಕಡ್ಡಿ ಮೇವು ಸೀಮೆ ಹಸುಗಳಿಗೆ ನೀಡಿದರೆ ಹಾಲಿನ ಉತ್ಪಾದನೆ ಹೆಚ್ಚಳವಾಗಲಿದ್ದು ಆರ್ಥಿಕ ಲಾಭ ಕೂಡ ಹೆಚ್ಚಳವಾಗಲಿದೆ ಎಂದರು. ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಚಂದ್ರಶೇಖರ ಕೇದನೂರ, ಉಪ ವ್ಯವಸ್ಥಾಪಕ ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಡಾ. ಶೃತಿ, ಡಾ. ಶ್ರೀಕಾಂತ್, ಕೆಮಿಸ್ಟರ್ ಪಿ.ಎಂ.ಬಾಬಾ ಫಕ್ರುದ್ದೀನ್, ಸಮಾಲೋಚಕ ಹನುಮಂತರಾಯ ಸೇರಿ ತಾಲೂಕಿನ ಹಲವಾರು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಹಾಜರಿದ್ದರು.
ಕೋಟ್ಹೈನುಗಾರಿಕೆ ಬೆಳವಣಿಗೆಗೆ ತುಮುಲ್ ಸಾಕಷ್ಟು ಬೆಂಬಲ ನೀಡುತ್ತಿದೆ. ಅಲ್ಲದೇ ನಿಯಮಿತವಾಗಿ ಹಣ ಪಾವತಿಸುವ ಮೂಲಕ ಹೈನುಗಾರರಿಗೆ ಸಂಕಷ್ಟವಾಗದಂತೆ ನೋಡಿಕೊಳ್ಳಲಾಗುತ್ತಿದೆ. ರೈತರು ಸಹ ಹೊಸ ತಂತ್ರಜ್ಞಾನ ಹಾಗೂ ಇತರೇ ಅಂಶಗಳನ್ನು ಪಡೆದುಕೊಂಡು ಹೈನುಗಾರಿಕೆ ಮಾಡಿದಲ್ಲಿ. ತಾವು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಜೊತೆಗೆ ಸೊಸೈಟಿಗಳನ್ನು ಸಹ ಬೆಳಸಬಹುದಾಗಿದೆ. - ಎಸ್. ಆರ್. ಗೌಡ, ನಿರ್ದೇಶಕರು, ತುಮಕೂರು ಹಾಲು ಒಕ್ಕೂಟ.