ಪ್ರಕೃತಿಯಲ್ಲಿ ಧಾರಣ ಶಕ್ತಿ ಇರುವುದು ಮಹಿಳೆಯರಲ್ಲಿ ಮಾತ್ರ: ಶುಭಾ ಮರವಂತೆ

| Published : Mar 14 2025, 12:34 AM IST

ಪ್ರಕೃತಿಯಲ್ಲಿ ಧಾರಣ ಶಕ್ತಿ ಇರುವುದು ಮಹಿಳೆಯರಲ್ಲಿ ಮಾತ್ರ: ಶುಭಾ ಮರವಂತೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಪ್ರಕೃತಿಯ ಎಲ್ಲಾ ಜೀವಿಗಳ ಪೈಕಿ ಧಾರಣ ಶಕ್ತಿ ಇರುವುದು ಮಹಿಳೆಯರಲ್ಲಿ ಮಾತ್ರ ಎಂದು ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯಸಂಯೋಜನಾಧಿಕಾರಿ ಶುಭಾ ಮರವಂತೆ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟೀಯ ಮಹಿಳಾ ದಿನಾಚರಣೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರಕೃತಿಯ ಎಲ್ಲಾ ಜೀವಿಗಳ ಪೈಕಿ ಧಾರಣ ಶಕ್ತಿ ಇರುವುದು ಮಹಿಳೆಯರಲ್ಲಿ ಮಾತ್ರ ಎಂದು ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯಸಂಯೋಜನಾಧಿಕಾರಿ ಶುಭಾ ಮರವಂತೆ ಹೇಳಿದರು.ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ವೇದಿಕೆಗಳ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಹೆಣ್ಣು ಮತ್ತು ಗಂಡಿನಲ್ಲಿ ಜೈವಿಕ ಸಾಮರ್ಥ್ಯ ಬೇರೆ, ಬೇರೆ ಇದೆ. ಹೆಣ್ಣು, ಹೆಣ್ಣೆಂದು, ಗಂಡು ಗಂಡೆಂದು ತನ್ನನ್ನು ತಾನು ಗುರುತಿಸಿಕೊಳ್ಳುವುದು ವಿಶ್ವದ ಸ್ತ್ರೀವಾದದ ಹೊಸ ಪರಿಕಲ್ಪನೆಯಾಗಿದೆ. ಪ್ರತಿಯೊಬ್ಬರು ಸಾಮರಸ್ಯ, ಅನ್ಯೋನ್ಯತೆಯಿಂದ ಬದುಕಬೇಕು ಹಾಗೂ ಪರಸ್ಪರ ಅರಿತುಕೊಳ್ಳಬೇಕು. ಗಂಡಿನಿಂದ ಶೋಷಣೆಯಾಗುತ್ತದೆ ಎಂಬುದನ್ನು ಮಹಿಳೆ ಬಿಡಬೇಕು. ಮಹಿಳೆ ಪುರುಷರ ಸಮಾನತೆಗಿಂತಲೂ ಮೀಗಿಲಾದವಳು. ಹೆಣ್ಣಿನಲ್ಲಿ ಅದ್ಭುತವಾದ ಸಾಮರ್ಥ್ಯವಿದೆ. ಪ್ರತಿಯೊಂದು ಗಂಡಿನಲ್ಲೂ ಒಬ್ಬಳು ಹೆಣ್ಣಿದ್ದು ಪ್ರತಿಯೊಂದು ಹೆಣ್ಣಿನಲ್ಲೂ ಒಬ್ಬ ಗಂಡು ಇರುವುದರಿಂದ ಅರ್ಧನಾರೀಶ್ವರನ ಪರಿಕಲ್ಪನೆ ಆಧಾರದ ಮೇಲೆ ಬಸವಣ್ಣ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಸ್ತ್ರೀಯರ ಬಗ್ಗೆ ಮಾತನಾಡಿದರು.ಹೆಣ್ಣು ದುರ್ಬಲಳು ಎಂಬ ಪದವನ್ನು ಯಾವುದೇ ಹಂತದಲ್ಲೂ ಬಳಸಲೂ ಬಾರದು. ಕರೆಯಲು ಬಾರದು. ಹೆಣ್ಣು ಗಂಡಿಗೆ ಸ್ಪರ್ಧಾತ್ಮಕ ಪೈಪೋಟಿಯಲ್ಲ. ಸಂವೇದನೆಯಿಂದ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಂಡು ಬದುಕಬೇಕು ಎಂದು ಕರೆ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ಎಲ್ಲಾ ರಂಗಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸಬಲ ರಾಗಲು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಶಿಕ್ಷಣ ಪಡೆದಾಗ ಮಾತ್ರ ಮಹಿಳೆಯರು ಶೋಷಣೆ ವಿರುದ್ಧ ಹೋರಾಟ ಮಾಡಲು ಸಾಧ್ಯ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಮಾತನಾಡಿ, ಕುಟುಂಬದ ನಿರ್ವಹಣೆ, ಸಹನೆ, ತಾಳ್ಮೆ ಹೆಣ್ಣಿಗಿದೆ. ಹೆಣ್ಣಾಗಿ ಹುಟ್ಟಿದ್ದಕ್ಕೆ ಪ್ರತಿಯೊಬ್ಬ ಮಹಿಳೆಯೂ ಹೆಮ್ಮೆ ಪಡಬೇಕು ಎಂದರು.ಪ್ರಾಂಶುಪಾಲ ಧನಂಜಯ ಮಾತನಾಡಿ, ಮಹಿಳೆಗೆ ದ್ವಿತೀಯ ದರ್ಜೆ ಪ್ರಜೆಯಾಗಿ ಗುರುತಿಸುವ ಪರಿಪಾಠ ಬಹಳ ಹಿಂದಿ ನಿಂದಲೂ ಬಂದಿದೆ. ಈ ಒಂದು ತಾರತಮ್ಯವನ್ನು ಸಮಾಜದಿಂದ ಕಿತ್ತೊಗೆಯಬೇಕಾಗಿದೆ ಎಂದರು. ಸಮಾಜ ಶಾಸ್ತ್ರ ಉಪನ್ಯಾಸಕ ಚಂದ್ರಪ್ಪ ಮಾತನಾಡಿದರು.

ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭೆಯಲ್ಲಿ ಉಪನ್ಯಾಸಕರಾದ ಬಿ.ಟಿ.ರೂಪ, ಜಿ.ಸವಿತಾ, ಮೇರಿ, ಹೇಮಲತಾ, ಎಸ್. ಸವಿತಾ, ರತ್ನ, ಮಂಜುನಾಥ್ ನಾಯಕ್, ಪ್ರಕಾಶ್, ವಿಶ್ವನಾಥ್, ವಿದ್ಯಾರ್ಥಿ ಜೀವನ್ ಮತ್ತಿತರರಿದ್ದರು.