ಪಿಎಸ್ಸೈ ಅಮಾನತು ಮಾಡದಿದ್ದರೆ ಒಪಿಡಿ ಸ್ಥಗಿತ

| Published : Feb 21 2025, 11:45 PM IST

ಪಿಎಸ್ಸೈ ಅಮಾನತು ಮಾಡದಿದ್ದರೆ ಒಪಿಡಿ ಸ್ಥಗಿತ
Share this Article
  • FB
  • TW
  • Linkdin
  • Email

ಸಾರಾಂಶ

OPD shutdown if PSI is not suspended

- ಯಾದಗಿರಿ ಪಿಎಸ್ಸೈ ಮಂಜುನಾಥ್ ಪಾಟೀಲ್‌ ವಿರುದ್ಧ ಹಲ್ಲೆ ಆರೋಪ

- ಕ್ರಮ ಕೈಗೊಳ್ಳದಿದ್ದರೆ ವೈದ್ಯರ ಸೇವೆ ಸ್ಥಗಿತಗೊಳಿಸುವುದಾಗಿ ಐಎಂಎ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಯಾದಗಿರಿ:

ಕೆಲವು ದಿನಗಳ ಹಿಂದಷ್ಟೇ ಮಂಗಳಮುಖಿಯರ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಯಾದಗಿರಿ ನಗರ ಠಾಣೆಯ ಪಿಎಸ್ಸೈ ಮಂಜುನಾಥ್‌ ಪಾಟೀಲ್‌, ಇದೀಗ ಸರ್ಕಾರಿ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಕೆಲ ತಿಂಗಳ ಹಿಂದೆ, ರೈತ ಸಂಘದ ಮುಖಂಡ ಚೆನ್ನಪ್ಪ ಆನೆಗೊಂದಿ ಅವರನ್ನು ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆಯ ವೇಳೆ ಹಿಗ್ಗಾಮುಗ್ಗಾ ಎಳೆದಾಡಿದ ಆರೋಪಕ್ಕೂ ಇವರು ಗುರಿಯಾಗಿದ್ದರು.

ಈ ಪ್ರಕರಣ ಇದೀಗ ಸ್ಥಳೀಯ ವೈದ್ಯಲೋಕದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು, ಪಿಎಸ್ಸೈ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಭಾರತೀಯ ವೈದ್ಯಕೀಯ ಸಂಘದ (ಐ.ಎಂ.ಎ.) ಯಾದಗಿರಿ ಜಿಲ್ಲಾ ಘಟಕ, ನ್ಯಾಯ ಸಿಗದಿದ್ದರೆ ವೈದ್ಯ ಸೇವೆ (ಓ.ಪಿ.ಡಿ.) ಸ್ಥಗಿತಗೊಳಿಸಿ, ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಐ.ಎಂ.ಎ. ಪದಾಧಿಕಾರಿಗಳು, ಪಿಎಸ್ಸೈ ರಕ್ಷಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವೈದ್ಯರ ವಿರುದ್ಧ ಹಲ್ಲೆ ಪ್ರಕರಣದ ಕುತಂತ್ರ ಹೆಣೆಯುತ್ತಿದ್ದಾರೆಂದು ಆರೋಪಿಸಿದರು.

* ಏನಾಗಿತ್ತು ?

ಬುಡ್ಗ ಜಂಗಮ ಸಮುದಾಯದ ಯುವತಿ ಹಾಗೂ ಬಾಲಕಿಯೊಬ್ಬಳ ಅನುಮಾನಾಸ್ಪದ ಸಾವಿನ ಪ್ರಕರಣಗಳ ತನಿಖೆಗೆ ಆಗ್ರಹಿಸಿ,

ಸಮುದಾದಯ ಜನರು ಗುರುವಾರ ಯಾದಗಿರಿ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ನಗರದ ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತದಲ್ಲಿ ಪ್ರತಿಭಟನಾಕಾರರು ಸಮಾವೇಶಗೊಂಡಿದ್ದಾಗ, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಆಗ, ರೋಗಿಯೊಬ್ಬರಿಗೆ ತುರ್ತು ಚಿಕಿತ್ಸೆ ನೀಡಲೆಂದು ಇದೇ ರಸ್ತೆಯ ಮುಖಾಂತರ ತೆರಳುತ್ತಿದ್ದ ಶಹಾಪುರ ತಾಲೂಕು ದೋರನಹಳ್ಳಿ ಆರೋಗ್ಯ ಕೇಂದ್ರದ ತಜ್ಞವೈದ್ಯ ಡಾ. ಅರುಣಕುಮಾರ್ ಪಾಟೀಲ್‌ ಅವರು ಸಂಚಾರದಟ್ಟಣೆಯಲ್ಲಿ ಸಿಲುಕಿಕೊಂಡಾಗ, ಪ್ರತಿಭಟನೆಯ ವೇಳೆ ಕಾರು ಬಂದಿದ್ದರಿಂದ ರಸ್ತೆ ಸಂಚಾರಕ್ಕೆ ಅಡೆತಡೆಯುಂಟಾಗುತ್ತಿದೆ ಎಂದು ಪಿಎಸ್ಸೈ ಹಾಗೂ ಡಾ. ಅರುಣ ಪಾಟೀಲ್‌ ನಡುವೆ ವಾಗ್ವಾದ ನಡೆದಿದೆ. ಈ ವೇಳೆ, ಪಿಎಸ್ಸೈ ಮಂಜುನಾಥ್‌ ಪಾಟೀಲ್‌ ಅವರು ಕಾರಿನೊಳಗೆ ಕುಳಿತಿದ್ದ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಿ, ರಕ್ತಸಿಕ್ತ ಮುಖದಲ್ಲೇ ಡಾ. ಅರುಣ ಪಾಟೀಲ್‌, ಎಸ್‌ ಪಿ ಕಚೇರಿಗೆ ತೆರಳಿ ದೂರಿದ್ದರು.

ಜಿಲ್ಲಾಸ್ಪತ್ರೆಗೆ ತೆರಳಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದ ಡಾ. ಅರುಣ ಪಾಟೀಲ್‌ರ ಜೊತೆ, ಐಎಂಎ ತಂಡ ಸಂಜೆ ಎಸ್ಪಿಯವರ ಭೇಟಿಯಾಗಿ ಪಿಎಸ್ಸೈ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು. ವೈದ್ಯರ ಹಲ್ಲೆ ನಂತರ, ಇದು ಸರಿಯಲ್ಲ ಎಂದು ಆಕ್ಷೇಪಿಸಿದ ಮೆಡಿಕಲ್‌ ಶಾಪ್‌ ಮಾಲೀಕರೊಬ್ಬರ ಮೇಲೂ ಪಿಎಸ್ಸೈ ಆಕ್ರೋಶಗೊಂಡಿದ್ದರು ಎಂದು ವೈದ್ಯರು ದೂರಿದ್ದಾರೆ.

ಘಟನೆಯ ಕುರಿತು ತನಿಖೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಪ್ರಥ್ವಿಕ್‌ ಶಂಕರ್‌ ವೈದ್ಯರಿಗೆ ಭರವಸೆ ನೀಡಿದ್ದರು. ಇನ್ನು, ಇದರ ತೀವ್ರತೆ ಅರಿತ ಪೊಲೀಸ್‌ ಇಲಾಖೆಯೂ ಸಹ, ಇಬ್ಬರು ಪೊಲೀಸ್‌ ಸಿಬ್ಬಂದಿ ಮೇಲೆ ಡಾ. ಅರುಣ ಪಾಟೀಲ್‌ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಹಲ್ಲೆ ಯತ್ನ ನಡೆಸಿದ್ದರೆಂದು ದೂರಿ, ಪ್ರತಿದೂರು ದಾಖಲಿಸಲು ಸಜ್ಜಾದವರಂತೆ ಜಿಲ್ಲಾಸ್ಪತ್ರೆಗೆ ದಾಖಲಾದರು. ಇದು ವೈದ್ಯರಲ್ಲಿ ಅಚ್ಚರಿಗೂ ಕಾರಣವಾಗಿತ್ತು. ಒಂದು ವೇಳೆ, ವೈದ್ಯರ ದೂರು ಗಂಭೀರ ಸ್ವರೂಪ ಪಡೆದರೆ ಅದಕ್ಕೆ ಪರ್ಯಾಯವಾಗಿ ಪೊಲೀಸರಿಂದಲೂ ಪ್ರತಿದೂರು (ಕೌಂಟರ್‌ ಕೇಸ್) ಸಹಾಯಕವಾಗಬಹುದು ಎಂಬ ಮಾತುಗಳೂ ಖಾಕಿಪಡೆಯಲ್ಲಿ ಕೇಳಿಬಂದವು.

ವೈದ್ಯರಿಂದ ಓಪಿಡಿ ಬಂದ್‌ ಎಚ್ಚರಿಕೆ !

ವೈದ್ಯರು ನೀಡಿದ ದೂರು ದಾಖಲಿಸಿ, ಪಿಎಸ್ಸೈ ಮಂಜುನಾಥ್‌ ಪಾಟೀಲರನ್ನು ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ವೈದ್ಯರು (ಓಪಿಡಿ) ಹೊರರೋಗಿಗಳ ಚಿಕಿತ್ಸೆ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಐಎಂಎ ಜಿಲ್ಲಾಧ್ಯಕ್ಷ ಡಾ. ಚಂದ್ರಕಾಂತ್ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ. ಎಂ. ಎಸ್‌. ಪಾಟೀಲ್‌ ಮಾತನಾಡಿ, ಈ ಹಿಂದೆಯೂ ಇದೇ ಪಿಎಸ್ಸೈ ವಿರುದ್ಧ ಹಲ್ಲೆ ಪ್ರಕರಣಗಳ ದೂರುಗಳು ಕೇಳಿಬಂದಿದ್ದವು. ಪದೇ ಪದೇ ಸಾರ್ವಜನಿಕರ ಮೇಲೆ ಹಲ್ಲೆ ಪ್ರವೃತ್ತಿ ಇದ್ದವರು ಮಾನಸಿಕ ಚಿಕಿತ್ಸೆ ಪಡೆಯಲಿ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ, ಐಎಂಎ ಮಾಜಿ ಅಧ್ಯಕ್ಷ ಡಾ. ಭಗವಂತ ಅನ್ವಾರ್, ಸರ್ಕಾರಿ ವೈದ್ಯರ ಸಂಘದ ಕಾರ್ಯದರ್ಶಿ ಡಾ. ಯಶವಂತ ರಾಠೋಡ್‌, ಮಕ್ಕಳ ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ. ಸುರೇಶ ರೆಡ್ಡಿ ಮುಂತಾದವರಿದ್ದರು.

-----

ಕೋಟ್‌-1 : ತಮ್ಮ ಮುಖ, ಕುತ್ತಿಗೆ, ಎದೆಗೆ ಪರಚಿದ ಗಾಯಗಳಾಗಿವೆ. ಎಸ್ಪಿಯವರ ಗಮನಕ್ಕೆ ತಂದಾಗ ಸೋಮವಾರದವರೆಗೆ ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ಪಿಎಸ್ಸೈ ಯಿಂದ ಹಲ್ಲೆಗೊಳಗಾದ ನನ್ನ ವಿರುದ್ಧವೇ ಪ್ರತಿತಂತ್ರ ರೂಪಿಸಲಾಗುತ್ತಿದೆ, ಇದು ಸರಿಯಲ್ಲ. ತಿರುಚಿದ ವೀಡಿಯೋಗಳ ಬದಲು ಸರಿಯಾದ ವೀಡಿಯೋಗಳ ವೀಕ್ಷಿಸಲಿ. ಈ ವಿಚಾರವಾಗಿ ಎಸ್ಪಿ ಅವರು ನ್ಯಾಯಯುತ, ಸೂಕ್ತ ಕ್ರಮ ಕೈಗೊಳ್ಳಬೇಕು.

- ಹಲ್ಲೆಗೊಳಗಾದ ಡಾ. ಅರುಣಕುಮಾರ್ ಪಾಟೀಲ್‌.

------

ಕೋಟ್‌-2 : ಈ ಕುರಿತು ವೈದ್ಯರು ನೀಡಿರುವ ದೂರನ್ನು ತನಿಖೆ ಮಾಡಲಾಗುತ್ತಿದೆ. ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

- ಪ್ರಥ್ವಿಕ್ ಶಂಕರ್, ಎಸ್ಪಿ, ಯಾದಗಿರಿ.

-----

21ವೈಡಿಆರ್‌15 : ಡಾ. ಅರುಣ ಪಾಟೀಲ್‌ ಹಾಗೂ ಪಿಎಸ್ಸೈ ನಡುವಿನ ವಾಗ್ವಾದ ಸಂದರ್ಭ

21ವೈಡಿಆರ್‌16 : ವೈದ್ಯರ ಸುದ್ದಿಗೋಷ್ಠಿ.

21ವೈಡಿಆರ್‌17 : ಹಲ್ಲೆಗೊಳಗಾದ ಡಾ. ಅರುಣ ಪಾಟೀಲ್‌.