ಆಸ್ಪತ್ರೆಗಳಲ್ಲಿ ಒಪಿಡಿ, ಶಸ್ತ್ರಚಿಕಿತ್ಸೆ ಬಂದ್

| Published : Aug 18 2024, 01:56 AM IST

ಸಾರಾಂಶ

ರಾಯಚೂರು ನಗರದ ಪೇಟ್ಲಾ ಬುರ್ಜ್ ರಸ್ತೆಯ ಡಾಕ್ಟರ್ಸ್‌ ಲೈನ್ ಖಾಸಗಿ ಆಸ್ಪತ್ರೆ ವೈದ್ಯರು ಆಸ್ಪತ್ರೆಗಳನ್ನು ಬಂದ್ ಮಾಡಿ ಮುಷ್ಕರ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕೋಲ್ಕತಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯೆ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ರಾಯಚೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಶನಿವಾರ ಮುಷ್ಕರ ನಡೆಸಿದರು.

ಏಕಾಏಕಿ ಒಪಿಡಿ, ಶಸ್ತ್ರಚಿಕಿತ್ಸೆ (ತುರ್ತು ಸೇವೆ ಹೊರತು ಪಡೆಸಿ) ಇತರೆ ಆರೋಗ್ಯ ಸೇವೆಗಳು ಬಂದ್ ಮಾಡಿದ ಹಿನ್ನೆಲೆ ಮಾಹಿತಿ ಇಲ್ಲದೇ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರು ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಪರದಾಡಿದರು. ನಗರದ ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳನ್ನು ಸ್ಥಗಿತಗೊಳಿಸಿದ್ದರಿಂದ ಆಸ್ಪತ್ರೆ, ಕ್ಲಿನಿಕ್‌ ಹಾಗೂ ಕೇಂದ್ರಗಳು ಬಿಕೋ ಎನ್ನುತ್ತಿದ್ದವು.

ಔಷಧಿ ಅಂಗಡಿಗಳು, ವೈದ್ಯಕೀಯ ಸಲಕರಣೆಗಳ ಅಂಗಡಿಗಳು, ಕನ್ನಡಕಗಳ ಅಂಗಡಿಗಳು ತೆರೆದಿದ್ದು ಕಂಡು ಬಂತು.

ಸರ್ಕಾರದ ರಿಮ್ಸ್ ಆಸ್ಪತ್ರೆಯ ಎ ಮತ್ತು ಬಿ ಬ್ಲಾಕ್‌ನಲ್ಲಿ ಬೆಳಗ್ಗೆ ಕೆಲಕಾಲ ವೈದ್ಯರು ಹೊರ ರೋಗಿಗಳಿಗೆ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು. ಬಳಿಕ ಸ್ಥಗಿತಗೊಳಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಮಾತ್ರ ಕೆಲವೇ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದರು.