ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಸೋಯಾಬಿನ್ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಹಾವೇರಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಸೋಯಾಬಿನ್ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಟಾಸ್ಕ್‌ ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಿಷ್ಠ ಬೆಂಬಲ ಬೆಲೆಯಡಿ ಸರ್ಕಾರದ ಮಾರ್ಗಸೂಚಿಯಂತೆ ಸೋಯಾಬಿನ್ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಬಲ ಬೆಲೆ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎ.ಕ್ಯೂ ಗುಣಮಟ್ಟದ ಸೋಯಾಬಿನ್ ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ 5,708 ರು. ಸರ್ಕಾರ ದರ ನಿಗದಿಪಡಿಸಿದೆ. ಅ.1ರ ಅನುಸಾರ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಈ ಆದೇಶದ ದಿನಾಂಕದಿಂದ ರೈತರ ನೋಂದಣಿ 80 ದಿನಗಳವರೆಗೆ ಹಾಗೂ ನೊಂದಣಿ ಜೊತೆಯಲ್ಲಿ ಖರೀದಿ ಕಾಲಾವಕಾಶವನ್ನು 90 ದಿನಗಳವರೆಗೆ ನಿಗದಿಪಡಿಸಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ಸಂಸ್ಥೆಯ ಮೂಲಕ ಖರೀದಿಸಲು ಆದೇಶಿಸಲಾಗಿದೆ ಎಂದರು.

ಖರೀದಿ ಕೇಂದ್ರ: ಬೆಂಬಲ ಬೆಲೆ ಯೋಜನೆಯಡಿ ಸೋಯಾಬಿನ್ ಉತ್ಪನ್ನ ಖರೀದಿ ಕೇಂದ್ರಗಳನ್ನು ಹಾವೇರಿ, ಶಿಗ್ಗಾಂವಿ, ಹಾನಗಲ್ಲ, ರಾಣಿಬೆನ್ನೂರು, ಸವಣೂರ, ಹಿರೇಕೆರೂರು, ರಟ್ಟಿಹಳ್ಳಿ ಟಿಎಪಿಸಿಎಂಎಸ್‌ಗಳಲ್ಲಿ (ಹಾವೇರಿ ಟಿಎಪಿಸಿಎಂ ಎಸ್ ಹಾಗೂ ಹಾವೇರಿ ಜಿಲ್ಲಾ ರೈತ ಉತ್ಪಾದಕರ ಕಂಪನಿ, ಶಿಗ್ಗಾಂವಿ ಟಿಎಪಿಸಿಎಂಎಸ್ ಹಾಗೂ ಹುಲಗೂರ ಪಿಎಸಿಎಸ್) ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಡಿಬಿಟಿ ಮೂಲಕ ಹಣ ಜಮೆ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಸೋಯಾಬಿನ್ ಉತ್ಪನದ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡಬೇಕು ಎಂದು ಸೂಚಿಸಿದರು.

ಬಿತ್ತನೆ ಪ್ರದೇಶ: ಪ್ರಸಕ್ತ 2026-27 ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 26,749 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆಯಾಗಿದೆ. ಹಾವೇರಿ ತಾಲೂಕಿನಲ್ಲಿ 8460 ಹೆ., ಶಿಗ್ಗಾಂವಿ ತಾಲೂಕಿನಲ್ಲಿ 6770 ಹೆ., ಹಾನಗಲ್ಲ ತಾಲೂಕಿನಲ್ಲಿ 3832 ಹೆ., ರಾಣಿಬೆನ್ನೂರ ತಾಲೂಕಿನಲ್ಲಿ 4789 ಹೆ., ಸವಣೂರ ತಾಲೂಕಿನಲ್ಲಿ 1230 ಹೆ., ಬ್ಯಾಡಗಿ ತಾಲೂಕಿನಲ್ಲಿ 558 ಹಾಗೂ ಹಿರೇಕೆರೂರು-ರಟ್ಟಿಹಳ್ಳಿ ತಾಲೂಕಿನಲ್ಲಿ 1110 ಹೆಕ್ಟೇರ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರತಿ ರೈತರಿಂದ ಪ್ರತಿ ಎಕರೆಗೆ 5 ಕ್ವಿಂಟಲ್‌ನಂತೆ ಗರಿಷ್ಠ 25 ಕ್ವಿಂಟಲ್ ಸೋಯಾಬಿನ್ ಉತ್ಪನ್ನ ಖರೀದಿಸಲು ಅವಕಾಶವಿದೆ. ಕನಿಷ್ಠ ಬೆಂಬಲ ಬೆಲೆಯಡಿ ಸೋಯಾಬಿನ್ ಉತ್ಪನ್ನ ಖರೀದಿ ಕೇಂದ್ರ ಆರಂಭಿಸಿರುವ ಕುರಿತಂತೆ ವ್ಯಾಪಕ ಪ್ರಚಾರ ನಡೆಸಿ, ಕರಪತ್ರ, ಬ್ಯಾನರ್ ಅಳಡಿಸುವ ಮೂಲಕ ರೈತರಿಗೆ ಮಾಹಿತಿ ತಲುಪಿಸಬೇಕು. ರೈತರಿಂದ ಖರೀದಿಸಿದ ಉತ್ಪನ್ನ ದಾಸ್ತಾನುಮಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಉಗ್ರಾಣಗಳನ್ನು ಕಾಯ್ದಿರಿಸಬೇಕು ಎಂದು ಸಂಬಂಧಪಟ್ಟ ಆಧಿಕಾರಿಗಳಿಗೆ ಸೂಚನೆ ನೀಡಿದರು.

ಗುಣಮಟ್ಟ ಗುರುತಿಸಿ: ರೈತರಿಂದ ಖರೀದಿಸುವ ಸೋಯಾಬಿನ್ ಎಫ್‌ಎಕ್ಯೂ ಗುಣಮಟ್ಟ ಗುರುತಿಸಲು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳನ್ನು ಖರೀದಿ ಕೇಂದ್ರಗಳಿಗೆ ನಿಯೋಜಿಸಲು ಸೂಚನೆ ನೀಡಲಾಯಿತು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಡಿ.ಜೆ.ಮಂಜುನಾಥ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಇತರರು ಉಪಸ್ಥಿತರಿದ್ದರು.