ಸ್ಲಂಗಳಲ್ಲಿ ಬಯಲು ಶೌಚ ಇನ್ನೂ ಜೀವಂತ

| Published : Dec 05 2024, 12:32 AM IST

ಸಾರಾಂಶ

ಗಿರಣಿಚಾಳದಲ್ಲಿ 500ಕ್ಕೂ ಹೆಚ್ಚಿನ ಮನೆಗಳಿದ್ದು, ಶೇ. 95 ಮನೆಗೆ ಶೌಚಾಲಯಗಳಿವೆ. ಬಡವರು, ಕೂಲಿ ಕಾರ್ಮಿಕರ ಕುಟುಂಬಗಳೇ ಇಲ್ಲಿ ಹೆಚ್ಚಿವೆ. ಕೆಲವು ಮನೆಗಳಲ್ಲಿ ಮಾತ್ರ ಶೌಚಾಲಯ ಇಲ್ಲ. ಆದರೂ ಇಲ್ಲಿ ಬಯಲು ಶೌಚಾಲಯ ತಪ್ಪಿಲ್ಲ.

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ:

ಸ್ಮಾರ್ಟ್ ಸಿಟಿಯಾಗುತ್ತಿರುವ ವಾಣಿಜ್ಯ ನಗರಿಯ ಬಹುತೇಕ ಕೊಳಗೇರಿ ಪ್ರದೇಶಗಳಲ್ಲಿ ಬಯಲು ಶೌಚ ಇನ್ನೂ ಜೀವಂತವಾಗಿರುವುದು ವಿಪರ್ಯಾಸದ ಸಂಗತಿ.

ನಗರದ ಹೃದಯ ಭಾಗದಲ್ಲಿರುವ ಗಿರಣಿಚಾಳ ಪ್ರದೇಶದಲ್ಲಿ ಬಯಲು ಶೌಚ ಇಂದಿಗೂ ಕಂಡುಬರುತ್ತಿದೆ. ಜತೆಗೆ ಹಳೇಹುಬ್ಬಳ್ಳಿ ಭಾಗದ ಆನಂದ ನಗರ, ಹೆಗ್ಗೇರಿ, ನೇಕಾರ ನಗರ, ವೀರಮಾರುತಿ ನಗರ ಸೇರಿದಂತೆ ಅನೇಕ ಕೊಳಗೇರಿ ಪ್ರದೇಶಗಳಲ್ಲಿ ಬಯಲು ಶೌಚ ಇನ್ನೂ ಇದೆ ಎನ್ನುವುದು ಅಚ್ಚರಿಯಾದರೂ ಸತ್ಯ.

ಗಿರಣಿಚಾಳದಲ್ಲಿ 500ಕ್ಕೂ ಹೆಚ್ಚಿನ ಮನೆಗಳಿದ್ದು, ಶೇ. 95 ಮನೆಗೆ ಶೌಚಾಲಯಗಳಿವೆ. ಬಡವರು, ಕೂಲಿ ಕಾರ್ಮಿಕರ ಕುಟುಂಬಗಳೇ ಇಲ್ಲಿ ಹೆಚ್ಚಿವೆ. ಕೆಲವು ಮನೆಗಳಲ್ಲಿ ಮಾತ್ರ ಶೌಚಾಲಯ ಇಲ್ಲ. ಆದರೂ ಇಲ್ಲಿ ಬಯಲು ಶೌಚಾಲಯ ತಪ್ಪಿಲ್ಲ. ನಿತ್ಯ ಬೆಳಗಾಗುವ ಮುನ್ನವೇ ಅನೇಕ ಯುವಕರು, ವೃದ್ಧರು, ಮಹಿಳೆಯರು ಕೂಡ ಚೊಂಬು, ಬಾಟಲಿ ಹಿಡಿದು ಶೌಚಕ್ಕೆ ಬಯಲಿಗೆ ತೆರಳುತ್ತಿದ್ದಾರೆ.

ಇನ್ನು ಆನಂದ ನಗರದ ಗಡಿಭಾಗ, ಕುಷ್ಟರೋಗ ಆಸ್ಪತ್ರೆಯ ಸಮೀಪದ ವಾತಾವರಣ ಬಯಲು ಶೌಚಕ್ಕೆ ಮುಕ್ತವಾಗಿರುವುದು ದುರಂತದ ಸಂಗತಿಯಾಗಿದೆ. ಇನ್ನು ಹೆಗ್ಗೇರಿಯ ಕೆಲವೆಡೆ ಜನರು ಶೌಚಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ.

ಖಾಲಿ ನಿವೇಶನಗಳೇ ಬಯಲು ಶೌಚಾಲಯ:

ಗಿರಣಿಚಾಳ, ಹೆಗ್ಗೇರಿ, ಆನಂದ ನಗರ, ನೇಕಾರ ನಗರ ಸೇರಿದಂತೆ ಹಲವು ಸ್ಲಂ ಪ್ರದೇಶಗಳಲ್ಲಿ ಖಾಲಿ ನಿವೇಶನಗಳು ಬಯಲು ಶೌಚಾಲಯಕ್ಕೆ ಸಾಕ್ಷಿಯಾಗಿವೆ. ಸಾರ್ವಜನಿಕ ಶೌಚಾಲಯ ಇದ್ದರೂ ಇಲ್ಲದಂತಾಗಿವೆ. ಕೆಲವೆಡೆ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದರಿಂದ ಕಸ ಚೆಲ್ಲುವುದು, ಮೂತ್ರ, ಶೌಚ ಮಾಡುವುದು ಸಾಮಾನ್ಯ. ಇನ್ನು ನಗರದ ಗಡಿಭಾಗದಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ಬಡವರ ಶೌಚಕ್ಕೆ ಬಯಲೇ ಗತಿ.

ಗಿರಣಿಚಾಳದ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರ ೯ರ ಕಚೇರಿಯ ಆವರಣದಲ್ಲಿ ಬಯಲು ಶೌಚ ನಿತ್ಯ ನಿರಂತರವಾಗಿದೆ. ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವುದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.

ಸಾಂಕ್ರಾಮಿಕ ರೋಗಗಳ ತಡೆ ಹಾಗೂ ಸ್ವಚ್ಛತೆಗಾಗಿ ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳಬೇಕೆಂಬುದೇ ಸ್ವಚ್ಛ ಭಾರತ್ ಮಿಷನ್‌ನ ಉದ್ದೇಶವಾಗಿದೆ. ಯೋಜನೆಯಡಿ ಪ್ರತಿ ಮನೆ ಮನೆಗೆ ಶೌಚಾಲಯ ನಿರ್ಮಾಣ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದರೂ ಈ ಬಯಲು ಶೌಚ ಪದ್ಧತಿ ನಿಂತಿಲ್ಲ. ಇನ್ನು ಕೆಲವೆಡೆ ಜೋಪಡಿಗಳಲ್ಲಿ ನೆಲೆಸಿರುವ ಅನೇಕ ಕೊಳಗೇರಿ ನಿವಾಸಿಗಳು ಶೌಚಕ್ಕೆ ಬಯಲನ್ನೇ ನಂಬಿ ಬದುಕುತ್ತಿದ್ದಾರೆ.

ಈ ಪ್ರದೇಶಗಳಲ್ಲಿ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಭಾಗವಾಗಿ ಹೊಸಮನೆ ನಿರ್ಮಾಣ ಮಾಡಿಕೊಂಡಾಗ ಶೌಚಾಲಯವೇ ಇರುವುದಿಲ್ಲ. ಅಲ್ಲದೆ, ಕೆಲವು ಕಡೆ ಶೌಚಾಲಯ ನಿರ್ಮಾಣದ ಬಗ್ಗೆ ತಿಳಿವಳಿಕೆಯ ಕೊರತೆ ಇದೆ. ಅಲ್ಲದೆ, ಸರ್ಕಾರ ಕಟ್ಟಿಕೊಟ್ಟಿರುವ ಆಶ್ರಯ ಮನೆಗಳಿಗೆ ಶೌಚಾಲಯಗಳೇ ಇಲ್ಲ. ಈ ಕಾರಣಗಳಿಂದ ಸ್ಲಂಗಳಲ್ಲಿ ಇನ್ನೂ ಬಯಲು ಶೌಚ ಜೀವಂತವಾಗಿದೆ.

ಇನ್ನು ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನಲ್ಲಿ 4, ಅಣ್ಣಿಗೇರಿಯಲ್ಲಿ 3, ನವಲಗುಂದ ತಾಲೂಕಿನಲ್ಲಿ 5, ಕಲಘಟಗಿ ತಾಲೂಕಿನಲ್ಲಿ 4, ಕುಂದಗೋಳದಲ್ಲಿ 3 ಕೊಳಚೆ ಪ್ರದೇಶಗಳಿವೆ. ಈ ಗ್ರಾಮೀಣ ಭಾಗದಲ್ಲಿಯೂ ಇನ್ನೂ ಬಯಲು ಶೌಚ ಜೀವಂತವಾಗಿದೆ.

ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಅಲೆಮಾರಿ ಜನಾಂಗದವರೇ ಹೆಚ್ಚಾಗಿ ವಾಸಿಸುವ ಕೊಳಗೇರಿ ಪ್ರದೇಶಗಳಲ್ಲಿ ಶೌಚಾಲಯ ಬಳಕೆ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ.

ಬೇಡಿಕೆಯಂತೆ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಕೆಲವು ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಜಾಗವಿಲ್ಲದಂತಾಗಿದೆ. ಮನೆಯಲ್ಲಿ ಶೌಚಾಲಯವಿದ್ದರೂ ಹೊರಗಡೆ ಹೋಗುವುದು ಕೆಲವರಿಗೆ ಅಭ್ಯಾಸವಾಗಿದೆ. ಸ್ವಚ್ಛತೆಗೆ ಕೈಜೋಡಿಸಬೇಕಾದ ಸಾರ್ವಜನಿಕರು ಸ್ವಚ್ಛ ವಾತಾವರಣ ಅಂದಗೆಡಿಸುತ್ತಿರುವುದು ಸರಿಯಲ್ಲ ಎಂದು ಪಾಲಿಕೆಯ ಮಾಜಿ ಸದಸ್ಯ, ದಲಿತ ಮುಖಂಡ ಮೋಹನ ಹಿರೇಮನಿ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಲಂ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಸರ್ಕಾರ ಆದ್ಯತೆ ನೀಡಬೇಕು. ಜತೆಗೆ ಎಲ್ಲ ಮನೆಗಳಲ್ಲಿ ಶೌಚಾಲಯ ನಿರ್ಮಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಆಗ್ರಹಿಸುತ್ತಾರೆ ಆನಂದ ನಗರದ ನಿವಾಸಿ ರಾಜು ನದಾಫ.

ಕೊಳಗೇರಿ ಸೇರಿದಂತೆ ಇಡೀ ನಗರದಲ್ಲಿ ಬಯಲು ಶೌಚ ಪದ್ಧತಿಯ ನಿರ್ಮೂಲನೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.

ಕೆಲವು ಕಡೆ ಶೌಚಾಲಯ ನಿರ್ಮಾಣ, ಬಳಕೆ ಬಗ್ಗೆ ತಿಳಿವಳಿಕೆಯ ಕೊರತೆ ಇದೆ. ಹಾಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಹಿಂದುಳಿದ ಪ್ರದೇಶಗಳ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಪಾಲಿಕೆಯ ಮಾಜಿ ಸದಸ್ಯ ಮೋಹನ ಹಿರೇಮನಿ ಹೇಳಿದರು.