ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಲೋಕಸಭೆ ಸಾರ್ವತ್ರಿಕ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರ (ಏ.೨೪) ಕೊನೆಗೊಳ್ಳಲಿದೆ. ಸಮಾವೇಶ, ರೋಡ್ ಶೋ, ಸಭೆ-ಸಮಾರಂಭಗಳೆಲ್ಲವೂ ಸಂಜೆ ೬ ಗಂಟೆಗೆ ಮುಕ್ತಾಯಗೊಳ್ಳಲಿವೆ. ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಮತದಾರರಲ್ಲದವರು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಮತದಾನಕ್ಕೆ ೪೮ ತಾಸಿಗೆ ಮುನ್ನ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದಕ್ಕಷ್ಟೇ ಅವಕಾಶ ನೀಡಲಾಗುತ್ತದೆ. ರಣ ಬಿಸಿಲನ್ನೂ ಲೆಕ್ಕಿಸದೆ ತಿಂಗಳ ಕಾಲ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ಭರಾಟೆ ಬುಧವಾರ ಸಂಜೆಗೆ ಸಮಾಪ್ತಿಯಾಗಲಿದೆ.ಎಚ್‌ಡಿಕೆ ಮೈತ್ರಿ ಅಭ್ಯರ್ಥಿಯಾಗಿರುವುದು ವಿಶೇಷ:ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಸೋಲಿಸುವುದಕ್ಕಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು ಒಂದು ವಿಶೇಷವಾದರೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿರುವುದು ಮತ್ತೊಂದು ವಿಶೇಷವಾಗಿದೆ. ಕಾಂಗ್ರೆಸ್ ಪಕ್ಷ ಹೊಸ ಮುಖಕ್ಕೆ ಆದ್ಯತೆ ನೀಡಿ ಉದ್ಯಮಿ ವೆಂಕಟರಮಣೇಗೌಡರನ್ನು ಕಣಕ್ಕಿಳಿಸಿದೆ. ೨೫ ವರ್ಷಗಳಿಂದಲೂ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಸಿನಿ ಕಲಾವಿದನ್ನು ಪರಿಚಯಿಸಿಕೊಂಡು ಬಂದಿತ್ತು. ಈ ಚುನಾವಣೆಯಿಂದ ಸಂಪ್ರದಾಯಕ್ಕೆ ಕಾಂಗ್ರೆಸ್ ತಿಲಾಂಜಲಿ ಹಾಡಿರುವುದು ಇನ್ನೊಂದು ವಿಶೇಷ.
ಎಚ್‌ಡಿಕೆ ಸೋಲಿಸಲು ಕಾಂಗ್ರೆಸ್ ನಾನಾ ರೀತಿ ತಂತ್ರಗಾರಿಕೆ:ವೆಂಕಟರಮಣೇಗೌಡ ಜಿಲ್ಲೆಗೆ ಹೊಸಮುಖವಾದರೂ ಅವರನ್ನು ಗೆಲ್ಲಿಸಲೇಬೇಕೆಂಬ ಹಠ-ಜಿದ್ದಿಗೆ ಬಿದ್ದವರಂತೆ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಸಕರು, ಮುಖಂಡರು, ಕಾರ್ಯಕಕರ್ತರು ಪಣತೊಟ್ಟಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೆಲಕಚ್ಚಿರುವ ಜೆಡಿಎಸ್ ಮತ್ತೆಂದೂ ಮೇಲೇಳದಂತೆ ತಡೆಯುವುದು ಕಾಂಗ್ರೆಸ್ಸಿಗರ ಪ್ರಮುಖ ಗುರಿಯಾಗಿದೆ. ಕಳೆದ ಬಾರಿ ಎಚ್‌ಡಿಕೆ ಪುತ್ರ ನಿಖಿಲ್ ಅವರಿಗೆ ಸೋಲುಣಿಸಿದ ರೀತಿಯಲ್ಲೇ ಈ ಬಾರಿ ಕುಮಾರಸ್ವಾಮಿ ಅವರನ್ನು ಹಿಮ್ಮೆಟ್ಟಿಸಲು ನಾನಾ ರೀತಿಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಪ್ರಯೋಗಿಸಿದೆ.
ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ನಾಮಬಲಕ್ಕೆ ಶೇ.೭೦ರಷ್ಟು ಒಕ್ಕಲಿಗ ಮತಗಳು ಹರಿದುಹೋದರೂ ಒಕ್ಕಲಿಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಅಹಿಂದ ಹಾಗೂ ಇತರೆ ಸಮುದಾಯದವರ ಮತಗಳನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಕಾಂಗ್ರೆಸ್ಸಿಗರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ವೀರಶೈವ-ಲಿಂಗಾಯತ, ಕುರುಬರು, ಹಿಂದುಳಿದ ವರ್ಗಗಳ ಸಭೆ-ಸಮಾವೇಶಗಳನ್ನು ನಡೆಸಿದ್ದಾರೆ. ಚಿತ್ರನಟ ದರ್ಶನ್‌ರನ್ನು ಪ್ರಚಾರಕ್ಕೆ ಕರೆತಂದು ಅವರಿಂದ ಬರಬಹುದಾದಷ್ಟು ಮತಗಳನ್ನು ಸೆಳೆಯುವ ತಂತ್ರಗಾರಿಕೆ ರೂಪಿಸಿದ್ದರು.ಜೆಡಿಎಸ್-ಬಿಜೆಪಿ ಮೈಸೂರಿಗೆ ಮೋದಿಯನ್ನು ಕರೆತಂದರೆ, ಮಂಡ್ಯಕ್ಕೆ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿಯನ್ನು ಕರೆತಂದು ಶಕ್ತಿ ಪ್ರದರ್ಶಿಸಿದರು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮಂಡ್ಯ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಚ್.ಡಿ.ಕುಮಾರಸ್ವಾಮಿ ಮಣಿಸುವುದಕ್ಕೆ ತೀವ್ರ ಹೋರಾಟಕ್ಕಿಳಿದಿದ್ದರು.ಜಿಲ್ಲೆಯೊಳಗೆ ಅಸ್ತಿತ್ವವನ್ನೇ ಕಳೆದುಕೊಂಡಿರುವ ಜೆಡಿಎಸ್‌ಗೆ ಮರುಹುಟ್ಟು ನೀಡುವ ಸಲುವಾಗಿ ಜಿಲ್ಲೆಯ ಜೆಡಿಎಸ್ ನಾಯಕರು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಅಖಾಡಕ್ಕಿಳಿಸಿದ್ದಾರೆ. ಪುತ್ರನ ಸೋಲಿನ ಸೇಡನ್ನು ತೀರಿಸಿಕೊಳ್ಳುವುದು ಎಚ್‌ಡಿಕೆ ಸ್ಪರ್ಧೆಯ ಮತ್ತೊಂದು ಭಾಗವಾಗಿದೆ. ರೈತರ ಸಾಲ ಮನ್ನಾ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ನೀಡಿದ ಆರ್ಥಿಕ ನೆರವು, ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು, ಮಗನ ಸೋಲಿನ ಅನುಕಂಪ ಇವೆಲ್ಲವೂ ಚುನಾವಣೆಯಲ್ಲಿ ತಮ್ಮ ಪರವಾಗಿ ಕೆಲಸ ಮಾಡಲಿವೆ ಎಂದು ಕುಮಾರಸ್ವಾಮಿ ಆದಿಯಾಗಿ ಜೆಡಿಎಸ್ ನಾಯಕರು ನಂಬಿದ್ದಾರೆ.ಜೆಡಿಎಸ್ ವೋಟ್ ಬ್ಯಾಂಕ್ ಜೊತೆಗೆ ಬಿಜೆಪಿ ವೋಟ್‌ಬ್ಯಾಂಕ್ ಕೂಡ ಜೊತೆಗೂಡುವ ಭರವಸೆಯೊಂದಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಕರೆತಂದು ಜಿಲ್ಲೆಯೊಳಗೆ ಪ್ರಚಾರ ನಡೆಸಿದ್ದಾರೆ. ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಟಿ.ರವಿ ಮತ್ತಿತರರು ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದರು. ಆರೋಗ್ಯದ ದೃಷ್ಟಿಯಿಂದ ಕುಮಾರಸ್ವಾಮಿ ತಾಲೂಕು ಕೇಂದ್ರಗಳಲ್ಲಿ ಸಮಾವೇಶ ನಡೆಸುವುದಕ್ಕೆ ಸೀಮಿತವಾಗಿ ಪ್ರಚಾರ ನಡೆಸಿದರೆ ಹೋಬಳಿ, ಪಂಚಾಯಿತಿ ಮಟ್ಟದ ಪ್ರಚಾರದ ಜವಾಬ್ದಾರಿಯನ್ನು ಸ್ಥಳೀಯ ಜೆಡಿಎಸ್ ನಾಯಕರು, ಮುಖಂಡರು, ಕಾರ್ಯಕರ್ತರು ವಹಿಸಿಕೊಂಡಿದ್ದರು. ಎಚ್‌ಡಿಕೆ ಪುತ್ರ ನಿಖಿಲ್ ಕೂಡ ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಪ್ರಚಾರ ಸಭೆ ನಡೆಸಿ ತಂದೆಯ ಗೆಲುವಿಗಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ.ಎಚ್‌ಡಿಕೆ, ಸಿಆರ್‌ಎಸ್ ಸಮರದಲ್ಲಿ ಗೆಲವು ಯಾರಿಗೆ?: ಕಳೆದ ಲೋಕಸಭಾ ಚುನಾವಣೆಯಷ್ಟು ತೀವ್ರತೆಯನ್ನು ಈ ಬಾರಿಯ ಚುನಾವಣೆ ಪಡೆದುಕೊಳ್ಳದಿದ್ದರೂ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದ ಕ್ಷೇತ್ರ ಕುತೂಹಲವನ್ನು ಕಾಯ್ದುಕೊಂಡಿದೆ. ಎಚ್.ಡಿ.ಕುಮಾರಸ್ವಾಮಿ ಮತ್ತು ಎನ್.ಚಲುವರಾಯಸ್ವಾಮಿ ನಡುವಿನ ರಾಜಕೀಯ ಸಮರದಲ್ಲಿ ಗೆಲ್ಲೋರು ಯಾರು ಎನ್ನುವುದನ್ನೂ ಅಷ್ಟೇ ಕುತೂಹಲದಿಂದ ಜಿಲ್ಲೆಯ ಜನರು ಎದುರುನೋಡುತ್ತಿದ್ದಾರೆ. ಜೆಡಿಎಸ್ ಮಾಜಿ ಶಾಸಕರೆಲ್ಲರೂ ತಮ್ಮ ಅಸ್ತಿತ್ವ ಉಳಿಯಬೇಕಾದರೆ ಕುಮಾರಸ್ವಾಮಿ ಗೆಲುವಿಗೆ ಕಾದುಕುಳಿತಿದ್ದಾರೆ. ಯಾರಿಗೆ ವಿಜಯಮಾಲೆ ಹಾಕಬೇಕೆನ್ನುವುದನ್ನು ಏ.೨೬ರಂದು ಜಿಲ್ಲೆಯ ಮತದಾರರು ಅಂತಿಮ ನಿರ್ಧಾರ ಮಾಡಲಿದ್ದಾರೆ.