ಗುಮ್ಮಟ ನಗರಿಯಲ್ಲಿ ರಂಗಿನಾಟಕ್ಕೆ ತೆರೆ

| Published : Mar 30 2024, 12:54 AM IST

ಸಾರಾಂಶ

ರಂಗಪಂಚಮಿಯನ್ನು ಬಣ್ಣದೋಕುಳಿ ಆಡುವ ಮೂಲಕ ಗುಮ್ಮಟ ನಗರಿಯಲ್ಲಿ ಮಹಿಳೆಯರು, ಯುವಕರು, ಚಿಣ್ಣರು ಅತ್ಯಂತ ಸಂಭ್ರಮದಿಂದ ಆಚರಿಸಿದರು. ನಗರದ ಕಮಾನಖಾನ್ ಬಜಾರ್, ತೇಕಡೆ ಗಲ್ಲಿ, ಗೋಳಗುಮ್ಮಟ ಪ್ರದೇಶ, ರೈಲ್ವೆ ಸ್ಟೇಷನ್ ಪ್ರದೇಶ ಸೇರಿದಂತೆ ಹಲವಾರು ಗಲ್ಲಿಗಳಲ್ಲಿ ಬಣ್ಣದಲ್ಲಿ ಮಿಂದೆದ್ದು ರಂಗಪಂಚಮಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ರಂಗಪಂಚಮಿಯನ್ನು ಬಣ್ಣದೋಕುಳಿ ಆಡುವ ಮೂಲಕ ಗುಮ್ಮಟ ನಗರಿಯಲ್ಲಿ ಮಹಿಳೆಯರು, ಯುವಕರು, ಚಿಣ್ಣರು ಅತ್ಯಂತ ಸಂಭ್ರಮದಿಂದ ಆಚರಿಸಿದರು. ನಗರದ ಕಮಾನಖಾನ್ ಬಜಾರ್, ತೇಕಡೆ ಗಲ್ಲಿ, ಗೋಳಗುಮ್ಮಟ ಪ್ರದೇಶ, ರೈಲ್ವೆ ಸ್ಟೇಷನ್ ಪ್ರದೇಶ ಸೇರಿದಂತೆ ಹಲವಾರು ಗಲ್ಲಿಗಳಲ್ಲಿ ಬಣ್ಣದಲ್ಲಿ ಮಿಂದೆದ್ದು ರಂಗಪಂಚಮಿ ಆಚರಿಸಲಾಯಿತು. ಯುವಕರೆಲ್ಲ ಬಕೆಟ್‌ಗಳಲ್ಲಿ ಬಣ್ಣ ತುಂಬಿಸಿಕೊಂಡು ಒಬ್ಬರ ಮೇಲೋಬ್ಬರು ಎರಚಿ ಸಂಭ್ರಮಿಸಿದರೆ ಇನ್ನೊಂದೆಡೆ ನಾವೇನು ಕಡಿಮೆ ಎಂದು ಗೃಹಿಣಿಯರೆಲ್ಲ ಸೇರಿ ಗುಂಪು ಗುಂಪಾಗಿ ಬಣ್ಣದಾಟ ಆಡಿದರು. ಇನ್ನು ಮಕ್ಕಳು ಹಲಗೆ ಬಾರಿಸಿ, ಬಾಯಿ ಬಡಿದುಕೊಂಡು ವಿಶೇಷವಾಗಿ ಬಣ್ಣದಾಟ ಆಡಿದರು.

ಕೇವಲ ನಗರ ಭಾಗದಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ರಂಗಪಂಚಮಿಯ ಬಣ್ಣದ ಆಟ ಜೋರಾಗಿತ್ತು. ಹೋಳಿಹುಣ್ಣಿವೆಯ ಬಳಿಕ 5ನೇ ದಿನಕ್ಕೆ ಆಚರಿಸಲಾಗುವ ರಂಗಪಂಚಮಿಯನ್ನು ಕಡೆಯ ರಂಗಪಂಚಮಿಯೆಂತಲೂ ಕರೆಯಲಾಗುತ್ತದೆ. ಬೇಸಿಗೆ ಆರಂಭವಾಗಿದ್ದು ನೆತ್ತಿ ಸುಡುವಂತಹ ಬಿಸಿಲಿನಲ್ಲೇ ಓಣಿ ಓಣಿ ತಿರುಗಾಡಿ ಪರಸ್ಪರ ಬಣ್ಣ ಎರಚುವುದು ಜೋರಾಗಿತ್ತು. ಬೆಳಗ್ಗೆ 6ಕ್ಕೆ ಶುರು ಮಾಡಿದ ಬಣ್ಣದೋಕುಳಿಯ ಆಟ, ಮಧ್ಯಾಹ್ನದವರೆಗೂ ರಂಗಿನಾಟ ಜೋರಾಗಿತ್ತು. ಮಧ್ಯಾಹ್ನದ ಬಳಿಕ ಸ್ನಾನ ಮಾಡುವ ಮೂಲಕ ಮೈಗಂಟಿದ ಬಣ್ಣ ತೊಳೆದುಕೊಳ್ಳುವ ದೃಶ್ಯಗಳು ಮನೆ ಮನೆಯಲ್ಲಿ ಸಾಮಾನ್ಯವಾಗಿದ್ದವು.