ಇತ್ತೀಚಿನ ದಿನಗಳಲ್ಲಿ ಮಧುಮೇಹ ರಕ್ತದೊತ್ತಡ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿರುವುದರಿಂದ ಪ್ರತಿನಿತ್ಯ ವ್ಯಾಯಾಮ ಹಾಗೂ ಯೋಗ ಮಾಡುವುದು ಅವಶ್ಯಕ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. ಉದ್ಯಾನವನ್ನು ಮಕ್ಕಳಿಗಷ್ಟೇ ಸೀಮಿತಗೊಳಿಸಿ ಅವರಿಗೆ ಅಗತ್ಯವಿರುವ ಆಟಿಕೆ ಉಪಕರಣಗಳನ್ನು ಅಳವಡಿಸಲಾಗುವುದು, ಇನ್ನೊಂದು ಉದ್ಯಾನವನದಲ್ಲಿ ಮಕ್ಕಳಿಗೆ ಸ್ಕೇಟಿಂಗ್ ತರಬೇತಿ ನಡೆಯುತ್ತಿದ್ದು, ಪೋಷಕರ ಮನವಿ ಮೇರೆಗೆ ಸ್ಕೇಟಿಂಗ್ ರ್‍ಯಾಕ್ ಮಾಡಿಕೊಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಇತ್ತೀಚಿನ ದಿನಗಳಲ್ಲಿ ಮಧುಮೇಹ ರಕ್ತದೊತ್ತಡ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿರುವುದರಿಂದ ಪ್ರತಿನಿತ್ಯ ವ್ಯಾಯಾಮ ಹಾಗೂ ಯೋಗ ಮಾಡುವುದು ಅವಶ್ಯಕ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ಪಟ್ಟಣ ವ್ಯಾಪ್ತಿಯ ಹೇಮಾವತಿ ಉದ್ಯಾನವನ, ಹೌಸಿಂಗ್ ಬೋರ್ಡ್, ವೆಂಕಟೇಶ್ವರ ಲೇಔಟ್ ಮತ್ತು ಪುನೀತ್ ರಾಜಕುಮಾರ್ ಉದ್ಯಾನವನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪುರಸಭಾ ಎಂಟರ್‌ಪ್ರೈಸಸ್ ಅನುದಾನದಡಿ ೧.೮ ಕೋಟಿ ರು. ವೆಚ್ಚದಲ್ಲಿ ಅಳವಡಿಸಲಾಗಿರುವ ಓಪನ್ ಜಿಮ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ಉದ್ಯಾನವನಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿದಾಗ ಜನರ ಹೆಚ್ಚು ಆಕರ್ಷಿತರಾಗಿ ದೇಹವನ್ನು ದಂಡಿಸುವ ಮೂಲಕ ಆರೋಗ್ಯವನ್ನು ಸುಸ್ಥತಿಯಲ್ಲಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ದಿನನಿತ್ಯ ಉದ್ಯಾನವನಗಳಲ್ಲಿ ವಾಕೀಂಗ್ ನಡೆಸುವ ಸಾರ್ವಜನಿಕರಿಂದ ಓಪನ್ ಜಿಮ್ ಅಳವಡಿಸುವಂತೆ ಮನವಿ ಬಂದ ಹಿನ್ನೆಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮೊದಲ ಹಂತದಲ್ಲಿ ೬ ಉದ್ಯಾನವನಗಳಿಗೆ ಓಪನ್ ಜಿಮ್ ಅಳವಡಿಸಲಾಗಿದೆ, ಎರಡನೇ ಹಂತದಲ್ಲಿ ಹೇಮಾವತಿ ನಾಲೆಯ ಎಡಭಾಗದಲ್ಲಿರುವ ನಾಲ್ಕನೆ ಉದ್ಯಾನವನ್ನು ಮಕ್ಕಳಿಗಷ್ಟೇ ಸೀಮಿತಗೊಳಿಸಿ ಅವರಿಗೆ ಅಗತ್ಯವಿರುವ ಆಟಿಕೆ ಉಪಕರಣಗಳನ್ನು ಅಳವಡಿಸಲಾಗುವುದು, ಇನ್ನೊಂದು ಉದ್ಯಾನವನದಲ್ಲಿ ಮಕ್ಕಳಿಗೆ ಸ್ಕೇಟಿಂಗ್ ತರಬೇತಿ ನಡೆಯುತ್ತಿದ್ದು, ಪೋಷಕರ ಮನವಿ ಮೇರೆಗೆ ಸ್ಕೇಟಿಂಗ್ ರ್‍ಯಾಕ್ ಮಾಡಿಕೊಡಲಾಗಿದೆ ಎಂದರು.ಹೇಮಾವತಿ ಇಲಾಖೆಯಡಿಯ ನಾಲ್ಕು ಉದ್ಯಾನವಗಳ ಪೈಕಿ ಪುರುಷರಿಗೊಂದು, ಮಹಿಳೆಯರಿಗೊಂದು ಮತ್ತು ಮಕ್ಕಳಿಗೊಂದು ಉದ್ಯಾನವನವನ್ನು ಮೀಸಲಿರಿಸಲಾಗಿದೆ. ಈ ಪೈಕಿ ಎರಡು ಉದ್ಯಾನವನಗಳಲ್ಲಿ ಓಪನ್ ಜಿಮ್, ಮತ್ತೊಂದರಲ್ಲಿ ಮಕ್ಕಳಿಗೆ ಆಟಿಕೆ, ಮತ್ತೊಂದರಲ್ಲಿ ಸ್ಕೇಟಿಂಗ್‌ಗೆ ಅವಕಾಶ, ಕಲ್ಪಿಸಲಾಗಿದೆ, ಇದರೊಂದಿಗೆ ಯೋಗಾಭ್ಯಾಸ ಮಾಡುವವರಿಗೆ ಯೋಗಾ ಮಂಟಪವನ್ನು ನಿರ್ಮಿಸಲಾಗಿದೆ. ಪಟ್ಟಣದ ಜನತೆ ಇವರೆಲ್ಲವುದರ ಬಳಕೆಯೊಂದಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು. ಇದೇ ವೇಳೆ ಉದ್ಯಾನವನಗಳಲ್ಲಿ ರಾತ್ರಿ ವೇಳೆಯಲ್ಲಿಯೂ ವಿಹಾರ ಮಾಡುವ ಕಾರಣ ಉತ್ತಮ ದೀಪದ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಪುರಸಭೆಯಿಂದ ದೀಪದ ವ್ಯವಸ್ಥೆ ಮಾಡಲಾಗುವುದು, ಇವುಗಳ ನಿರ್ವಹಣೆಯನ್ನು ಹೇಮಾವತಿ ಇಲಾಖೆಗೆ ವಹಿಸಲಾಗುವುದು ಎಂದರು.ಈ ವೇಳೆ ಪುರಸಭಾ ಮುಖ್ಯಾಧಿಕಾರಿ ಆರ್‌. ಯತೀಶ್‌ ಕುಮಾರ್‌, ಪುರಸಭೆ ಮಾಜಿ ಅಧ್ಯಕ್ಷರಾದ ಮೋಹನ್‌ ಕುಮಾರ್‌, ಕೆ.ಜೆ. ಸುರೇಶ್, ನವೀನ್, ಟಿಎಪಿಸಿಎಂಎಸ್ ನಿರ್ದೇಶಕರಾದ ಅನಿಲ್‌ ಕುಮಾರ್, ಕುಂಬಾರಹಳ್ಳಿ ರಮೇಶ್, ಮುಖಂಡರಾದ ಸತ್ಯನಾರಾಯಣ್, ತಮ್ಮಯ್ಯ, ರಮೇಶ್, ರಾಮಕೃಷ್ಣ, ಪುಟ್ಟರಾಜು, ಸೇರಿ ಇತರರು ಇದ್ದರು.