ಮದರ್ ಥೆರೇಸಾ ಸ್ಕೂಲ್ ಆಫ್ ನರ್ಸಿಂಗ್‌ನ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಗತ ಸಮಾರಂಭವನ್ನು ಎಸ್.ಸಂದೀಪ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದ ಯಾವ ಮೂಲೆಗೆ ಹೋದರು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕಂಡಾಗ ಮನಸ್ಸಿಗೆ ಖುಷಿಯೆನಿಸುತ್ತದೆ ಎಂದು ಮದಕರಿ ನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್ ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯ ಮದರ್ ಥೆರೇಸಾ ಸ್ಕೂಲ್ ಆಫ್ ನರ್ಸಿಂಗ್‌ನ ತೃತಿಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಹಾರಾಣಿ ಕಾಲೇಜಿನ ವಾಲ್ಮೀಕಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನರ್ಸಿಂಗ್ ತರಬೇತಿ ಮುಗಿಸಿದ ಮೇಲೆ ಯಾವ ಕ್ಲಿನಿಕ್ ಹೋದರೂ ನಿಮಗೆ ಉದ್ಯೋಗ ಅವಕಾಶ ಸಿಗುತ್ತದೆ. ವಿದ್ಯೆದಾನ ಮಾಡಿದರೆ ಜೀವನ ಸಾರ್ಥಕವಾಗುತ್ತದೆಂಬುದು ಡಿ.ಬೋರಪ್ಪನವರ ಕನಸಾಗಿತ್ತು. ಅಧಿಕಾರ ಎಂದರೆ ಜವಾಬ್ದಾರಿ ಎನ್ನುವುದನ್ನು ಅರಿತು ಅವರ ಆದರ್ಶದಂತೆ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ. ಶಿಕ್ಷಣ ಎಲ್ಲರಿಗೂ ಸಿಗಬೇಕು. ಪ್ರತಿ ವಿದ್ಯಾರ್ಥಿಯ ಜೀವನದಲ್ಲಿಯೂ ಸ್ವಾಗತ, ಬೀಳ್ಕೊಡುಗೆ ಸಮಾರಂಭ ಎದುರಾಗುತ್ತದೆ. ಹಿಂದುಳಿದ ವರ್ಗದ ಹಾಗೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನಮ್ಮ ಸಂಸ್ಥೆ ಸದಾ ಬಾಗಿಲು ತೆರೆದಿರುತ್ತದೆ. ನೀವುಗಳು ಉದ್ಯೋಗದಲ್ಲಿ ಕೀರ್ತಿ ಗಳಿಸಿ ಮದಕರಿ ನಾಯಕ ವಿದ್ಯಾಸಂಸ್ಥೆಗೆ ಗೌರವ ತನ್ನಿ ಎಂದು ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಎಸ್.ಸಂದೀಪ್ ಮನವಿ ಮಾಡಿದರು.

ಮದರ್ ಥೆರೇಸಾ ಸ್ಕೂಲ್ ಆಫ್ ನರ್ಸಿಂಗ್‌ನ ಹಿರಿಯ ಉಪನ್ಯಾಸಕ ವಿ.ಎಸ್.ಪೋತದಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಮಯ ಅತ್ಯಮೂಲ್ಯವಾದುದು. ಅದನ್ನು ವ್ಯರ್ಥ ಮಾಡಬೇಡಿ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ತಾರತಮ್ಯವಿಲ್ಲದೆ ರೋಗಿಗಳ ಆರೈಕೆ ಮಾಡಿ. ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದುದು. ಪರಿಶ್ರಮದಿಂದ ಓದಿ ಹೆಚ್ಚಿನ ಅಂಕಗಳನ್ನು ಪಡೆದು ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ. ಶಿಕ್ಷಣ ಪಡೆದ ಸಂಸ್ಥೆಯನ್ನು ಎಂದಿಗೂ ಮೆರಯಬೇಡಿ ಎಂದು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮದರ್ ಥೆರೇಸಾ ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಮಂಜುಳ ಮಾತನಾಡಿ, ಜೀವನ ನಿಂತ ನೀರಾಗಬಾರದು. ಎಷ್ಟೆ ಅಡೆತಡೆ, ಸಮಸ್ಯೆ, ಸವಾಲುಗಳು ಬಂದರೂ ಎದೆಗುಂದಬಾರದು. ಎಲ್ಲವನ್ನು ಧೈರ್ಯದಿಂದ ಎದುರಿಸಬೇಕು. ನರ್ಸಿಂಗ್ ವಿದ್ಯಾರ್ಥಿಗಳಿಂದ ನನಗೆ ಇದುವರೆವಿಗೂ ಯಾವ ದೂರು ಬಂದಿಲ್ಲ. ಎಲ್ಲರೂ ಶಿಸ್ತಿನಿಂದಲೆ ಇದ್ದಾರೆ. ಹಿರಿಯ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿಗಳನ್ನು ಅಷ್ಟೆ ಗೌರವದಿಂದ ನಡೆಸಿಕೊಳ್ಳುತ್ತಿರುವುದು ನನಗೆ ಹೆಮ್ಮೆಯೆನಿಸುತ್ತದೆ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ. ವಿದ್ಯಾರ್ಥಿ ಜೀವನದಲ್ಲಿ ವಿನಯದಿಂದಿರಬೇಕೆಂದರು.

ಮದರ್ ಥೆರೇಸಾ ಸ್ಕೂಲ್ ಆಫ್ ನರ್ಸಿಂಗ್ನ ಉಪನ್ಯಾಸಕರುಗಳಾದ ವಿದ್ಯಾ, ಶಮ್ಷದ್ಭಾನು, ಪೂಜಾ ಕೆ. ಇವರುಗಳು ವೇದಿಕೆಯಲ್ಲಿದ್ದರು. ನರ್ಸಿಂಗ್ ಕಾಲೇಜಿನ ಕಾರ್ಯನಿರ್ವಾಹಕ ಮಹಂತೇಶ್ ಇನ್ನು ಅನೇಕರು ಸಮಾರಂಭದಲ್ಲಿ ಹಾಜರಿದ್ದರು.

ಸೈಕಿಯಾಟ್ರಿಸ್ಟ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.