ಸಾರಾಂಶ
ಬಲ್ಡೋಟಾ ಕಂಪನಿ ಆರಂಭದಿಂದಲೂ ಆಕ್ರಮಣಕಾರಿ ನೀತಿ ಅನುಸರಿಸಿ ರೈತರ ಮೇಲೆ ದೌರ್ಜನ್ಯದಿಂದ ಭೂಮಿ ವಶಪಡಿಸಿಕೊಂಡಿದೆ. ಹಿಂದಿನ ಕೆಲವು ಅಧಿಕಾರಿಗಳು ಸಹ ಅದಕ್ಕೆ ಸಾಥ್ ನೀಡಿದ್ದು, ಜನರ ಪ್ರಾಣ ಮತ್ತು ಬದುಕು ಮುಖ್ಯವಾಗಿರುವ ಕಾರಣ ಕೆರೆಯನ್ನು ಸಾರ್ವಜನಿಕರಿಗೆ ಬಿಟ್ಟುಕೊಡುವಂತೆ ಉಚ್ಚನ್ಯಾಯಾಲಯ ತೀರ್ಪು ನೀಡಿದ್ದರೂ ಸಹ ತೆರವುಗೊಳಿಸದೆ ಇರುವ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ.
ಕೊಪ್ಪಳ:
ತಾಲೂಕಿನ ಬಸಾಪುರದ ಸ.ನಂ. ೧೪೩ರ ೪೪.೩೫ ಎಕರೆ ವಿಸ್ತೀರ್ಣದ ಸಾರ್ವಜನಿಕ ಕೆರೆ ಅತಿಕ್ರಮಿಸಿ ಕಾಂಪೌಂಡ್ ನಿರ್ಮಿಸಿ ರಸ್ತೆ ಬಂದ್ ಮಾಡಿರುವ ಬಲ್ಡೋಟಾ ಕಂಪನಿ ವಿರುದ್ಧ ಕ್ರಮ ಜರುಗಿಸಿ ಕಾಂಪೌಂಡ್ ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಕೆರೆ ಮುಕ್ತವಾಗಿಡುವಂತೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಕಾನೂನು ರೀತಿ ಕ್ರಮಕೈಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬಲ್ಡೋಟಾ ಕಂಪನಿ ಆರಂಭದಿಂದಲೂ ಆಕ್ರಮಣಕಾರಿ ನೀತಿ ಅನುಸರಿಸಿ ರೈತರ ಮೇಲೆ ದೌರ್ಜನ್ಯದಿಂದ ಭೂಮಿ ವಶಪಡಿಸಿಕೊಂಡಿದೆ. ಹಿಂದಿನ ಕೆಲವು ಅಧಿಕಾರಿಗಳು ಸಹ ಅದಕ್ಕೆ ಸಾಥ್ ನೀಡಿದ್ದು, ಜನರ ಪ್ರಾಣ ಮತ್ತು ಬದುಕು ಮುಖ್ಯವಾಗಿರುವ ಕಾರಣ ಕೆರೆಯನ್ನು ಸಾರ್ವಜನಿಕರಿಗೆ ಬಿಟ್ಟುಕೊಡುವಂತೆ ಉಚ್ಚನ್ಯಾಯಾಲಯ ತೀರ್ಪು ನೀಡಿದ್ದರೂ ಸಹ ತೆರವುಗೊಳಿಸದೆ ಇರುವ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ. ಜು. ೨೩ರೊಳಗೆ ತೆರವುಗೊಳಿಸಬೇಕು, ಇಲ್ಲವಾದಲ್ಲಿ ರೈತರೊಂದಿಗೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಸಾರ್ವಜನಿಕರ ಬಳಕೆಗೆ ಕೆರೆ ಮುಕ್ತವಾಗಿಸುವುದು, ಸಂಪರ್ಕ ರಸ್ತೆ ಬಂದ್ ಮಾಡಿ ನಿರ್ಮಿಸಿದ ಕಾಂಪೌಂಡ್ ತೆರವುಗೊಳಿಸಬೇಕು. ಕೆರೆ ಏರಿಗೆ ನೇರವಾಗಿ ಮುಖ್ಯದ್ವಾರದ ಗೇಟ್ ಅಳವಡಿಸಿ ಕಂಪನಿಯ ಭಾರಿ ವಾಹನ ಟಿಪ್ಪರ್ ಓಡಾಟದಿಂದ ಸುಗಮವಾಗಿ ಜನ-ಜಾನುವಾರುಗಳು ಹೋಗಿ ಬರಲು ಆಗುತ್ತಿಲ್ಲ. ಆದ್ದರಿಂದ ಈ ಗೇಟ್ ಹಾಗೂ ಕೆರೆಯ ಪೂರ್ವ ಭಾಗ ಮತ್ತು ಉತ್ತರ ಭಾಗದಲ್ಲಿ ೧೦ರಿಂದ 1೫ ಎಕರೆ ಕೆರೆ ಮುಚ್ಚಿ ರಸ್ತೆ ಮಾಡಿದ್ದು ತೆರವುಗೊಳಿಸಬೇಕು. ಕೆರೆ ಸರ್ವೇ ಮಾಡಿ ಹದ್ದುಬಸ್ತ್ ಮಾಡಿ ತಾವೇ ನಿರ್ವಹಣೆ ಮಾಡಬೇಕೆಂದು ಒತ್ತಾಯಿಸಲಾಗಿದೆ.ಈ ವೇಳೆ ಜಂಟಿ ಕ್ರಿಯಾ ವೇದಿಕೆ ಮುಖಂಡರಾದ ಕೆ.ಬಿ. ಗೋನಾಳ, ಬಸವರಾಜ ಶೀಲವಂತರ, ಮಂಜುನಾತ ಜಿ. ಗೊಂಡಬಾಳ, ಮುದುಕಪ್ಪ ಹೊಸಮನಿ, ಕೇಶವ ಕಟ್ಟಿಮನಿ, ಮಹಾಂತೇಶ ಕೊತಬಾಳ, ಮಂಜುನಾಥ ಕವಲೂರ, ಯಮನೂರಪ್ಪ ಹಾಲಳ್ಳಿ, ಪ್ರಕಾಶ ಎಂ, ಭೀಮಪ್ಪ, ಸುಂಕಪ್ಪ ಮೀಸಿ, ಶಿವಪ್ಪ ಹಡಪದ ಇದ್ದರು.