ಕನ್ನಡಪ್ರಭ ವಾರ್ತೆ ಹಲಗೂರು
4 ದಿನಗಳ ಕಾಲ ನಡೆದ ಪಟ್ಟಲದಮ್ಮನ ಜಾತ್ರಾ ಮಹೋತ್ಸವಕ್ಕೆ ಶನಿವಾರ ಕೊಂಡೋತ್ಸವದೊಂದಿಗೆ ತೆರೆ ಕಂಡಿತು.ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಗಳ ಗ್ರಾಮ ದೇವತೆಯಾದ ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವ ಕಳೆದ ಏ.8 ರಂದು ಆರಂಭವಾಗಿ ನಿತ್ಯ ಪೂಜೆ ಪುನಸ್ಕಾರಗಳು ನಡೆದವು.
ಏ.10ರ ಶುಕ್ರವಾರ ದೇಗುಲದ ಆವರಣದಲ್ಲಿ ಹೋಮ ಹವನಗಳನ್ನು ನಡೆಸಿ ದೇವರಿಗೆ ಅಭಿಷೇಕ, ಅಲಂಕಾರ, ನೈವೇದ್ಯಗಳನ್ನು ಮಾಡಿ 12 ಗಂಟೆಗೆ ಅರ್ಚಕ ಪ್ರಸಾದ್ ನೇತೃತ್ವದಲ್ಲಿ ಮಹಾ ಮಂಗಳಾರತಿ ನಡೆಯಿತು. ಈ ವೇಳೆ ಹರಕೆ ಹೊತ್ತ ಮುತ್ತೈದೆಯರು ಹೆಸರುಬೇಳೆ ಕೋಸಂಬರಿ, ಪಾನಕ ಮಾಡಿಕೊಂಡು ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ಪರಸ್ಪರ ವಿನಿಮಯ ಮಾಡಿಕೊಂಡರು.ಸಂಜೆ ಕರಿ ಬೀದಿಯ ಕರಗದ ಮನೆಯಿಂದ ಓಲೆ ಬಂಡಿ ಎಳವಾರವನ್ನು ಮೆರವಣಿಗೆಯಲ್ಲಿ ಪ್ರಮುಖ ರಸ್ತೆಗಳ ಮುಖಾಂತರ ಹೊರಟಾಗ ಜೊತೆಯಲ್ಲಿ ದೇವರ ಪೂಜಾ ಕುಣಿತ, ವೀರಗಾಸೆ ಕುಣಿತ, ಬೊಂಬೆ ಕುಣಿತ ಹಾಗೂ ಕರಡಿ ಗೊರಿಲ್ಲ ವೇಷಗಳನ್ನು ಧರಸಿ ಹೊರಟು ಪ್ರೇಕ್ಷಕರ ಮನಸೆಳೆಯಿತು.
ಏ.11ರ ಬೆಳಗಿನ ಜಾವ 3 ಗಂಟೆಗೆ ನಡು ಕೇರಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ದೇವರ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಹೂವು ಹೊಂಬಾಳೆ ಮಾಡಿಕೊಂಡು ದೇವರ ಗಿಂಡಿಯನ್ನು ಪೂಜೆ ಮಾಡಿಸಿ ಅರ್ಚಕರಾದ ಕೃಷ್ಣಪ್ಪ ಹೊತ್ತು ಮಡಿವಾಳ ಹಾಸಿದ ಮಡಿ ಮೇಲೆ ಹೊರಟಾಗ ಜೊತೆಯಲ್ಲಿ ಅರ್ಚಕರಾದ ನಾಗರಾಜು, ವಿದ್ವಾನ್ ಪ್ರಸಾದ್ ಮತ್ತು ಮುಖಂಡರು ಜೊತೆಯಲ್ಲಿ ಮುತ್ತೈದೆಯರು ತಂಬಿಟ್ಟಿನ ಆರತಿ ಹಿಡಿದು ಬಸಪ್ಪ ದೇವರ ಜೊತೆ ಪಟ್ಟಲದಮ್ಮ ದೇವಸ್ಥಾನಕ್ಕೆ ಹೊರಟಾಗ ದಾರಿ ಉದ್ದಕ್ಕೂ ಪಟಾಕಿಯನ್ನು ಸಿಡಿಸಿ ಬೆಳಕಿನ ಚಿತ್ತಾರದಂತೆ ಕಂಗೊಳಿಸುತ್ತಿತ್ತು.
ಮೆರವಣಿಗೆ ನಂತರ ಅರ್ಚಕರು ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಣೆ ಹಾಕಿ ಪೂಜೆ ಪುನಸ್ಕಾರಗಳು ನಡೆದ ನಂತರ ಅರ್ಚಕರು ದೇವರ ಗಿಂಡಿಯನ್ನು ಹೊತ್ತುಕೊಂಡು ಕೊಂಡ ಆಯ್ದರು. ನಂತರ ಜಾತ್ರಾ ಮಹೋತ್ಸವಕ್ಕೆ ತೆರೆ ಕಂಡಿತು.ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವ
ಹಲಗೂರು: ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಗಳ ಗ್ರಾಮ ದೇವತೆ ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.ಗ್ರಾಮ ದೇವತೆ ಪಟ್ಟಲದಮ್ಮನ ದೇವರ ಮೂರ್ತಿಗೆ ಅರ್ಚಕ ಪ್ರಸಾದ್ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ನಂತರ ಮಹಾ ಮಂಗಳಾರತಿ, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.ನಂತರ ಅರ್ಚಕ ಪ್ರಸಾದ ಮಾತನಾಡಿ, ಪ್ರತಿ ವರ್ಷವೂ ಹಬ್ಬವನ್ನು ವಿಜೃಂಭಣೆಯಿಂದ ನಾಲ್ಕು ದಿನಗಳ ಕಾಲ ಹಬ್ಬ ಆಚರಿಸಲು ವಿಶೇಷ ಪೂಜೆ ನಡೆಸಿದ್ದೇವೆ. ಕರಿ ಬೀದಿಯ ಕರಗದ ಮನೆಯಿಂದ ನೈವೇದ್ಯ ಮಾಡಿಕೊಂಡು ಬಂದು ದೇವರಿಗೆ ನೈವೇದ್ಯ ಸಲ್ಲಿಸಿ ನಂತರ ದೇವಸ್ಥಾನದ ಮುಂದಿನ ಕೊಂಡದ ಬಾಯನ್ನು ಗ್ರಾಮಸ್ಥರು ಸೇರಿ ಸ್ವಚ್ಛಗೊಳಿಸಿದ್ದಾರೆ ಎಂದರು.ಈ ವೇಳೆ ಅರ್ಚಕರಾದ ಕೃಷ್ಣಪ್ಪ, ನಾಡಗೌಡರಾದ ಶ್ರೀಕಾಂತ, ಶಿವಮಾದು, ಶಿವಸ್ವಾಮಿ, ಕೃಷ್ಣ, ದಿಲೀಪ್, ಸತೀಶ್, ಶಿವಣ್ಣ, ದರ್ಶನ್, ಸಂತೋಷ್, ಮಹಾದೇವ, ಸಿದ್ದರಾಜು, ಅಭಿಷೇಕ, ರಮೇಶ, ಶ್ರೀನಿವಾಸ ಸೇರಿದಂತೆ ಇತರರು ಇದ್ದರು.