ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪಅವರ ಪ್ರತಿಮೆಗೆ ಪುಷ್ಪ ನಮನ ಮಾಡಿ, ಯುವ ಸ್ಪಂದನವನ್ನು ಉದ್ಘಾಟಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹಾಗೂ ಗುರುತಿಸಿಕೊಳ್ಳಲು ಒಂದು ಉತ್ತಮ ಅವಕಾಶ. ಇಲ್ಲಿ ಸೇವಾ ಮನೋಭಾವ ಮಾತ್ರವಲ್ಲ ಅದರ ಆಚೆಗೂ ಸಾಕಷ್ಟು ಅವಕಾಶಗಳಿಗೆ ಇದು ಒಂದು ಉತ್ತಮ ವೇದಿಕೆಯಾಗಿದೆ. ನಾನು ಹೀಗೆ ಲೀಲಾಜಾಲವಾಗಿ ಮಾತನಾಡಲು ಅಡಿಪಾಯ ಹಾಕಿದ್ದೆ ಈ ಎನ್.ಎಸ್.ಎಸ್. ಅನುಭವ, ಅವಕಾಶಗಳ ಜೊತೆಗೆ ಜೀವನದ ಅನುಭವವನ್ನ ಎನ್.ಎಸ್.ಎಸ್. ನೀಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಸಂಯಮ, ಜೊತೆಗೆ ಸಮಾಜದಲ್ಲಿ ಹೇಗೆ ಬೆರೆಯುತ್ತಾರೆಂಬದನ್ನು ಕಲಿಸಿಕೊಡುತ್ತದೆ. ಹೆಚ್ಚಿನದಾಗಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸ್ವಚ್ಛತೆಯ ಕುರಿತು, ಕಾನೂನು ನಿಯಮದ ಬಗ್ಗೆ ಅರಿವಿಕೆ ನೀಡುವಂತ ಬೀದಿ ನಾಟಕದಂತಹ ಸಾಮಾಜಿಕ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು. ಎನ್.ಎಸ್.ಎಸ್ ವಿದ್ಯಾರ್ಥಿಗಳಿಗಳಿಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ. ಸಾಮಾಜಿಕ ಕೆಲಸಗಳ ಮುಖಾಂತರ ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮುಂದೆಯು ಮಾಡಬೇಕೆಂದು ಸಲಹೆ ನೀಡಿದರು.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್.ಪ್ರೊ. ರಾಘವ ಬಿ. ಮಾತನಾಡಿ, ಎನ್.ಎಸ್.ಎಸ್ ಒಂದು ಕಾರ್ಯಕ್ರಮವಲ್ಲ ಇದೊಂದು ವೇದಿಕೆ. ಹಲವು ಉತ್ತಮ ಸೇವೆ, ಚಟುವಟಿಕೆಗೆ ವೇದಿಕೆ. ರಾಷ್ಟ್ರೀಯ ಸೇವಾಯೋಜನೆ ನಿಂತ ನೀರಲ್ಲ, ಹರಿಯುವ ನೀರು ಸಾಕಷ್ಟು ಬದಲಾವಣೆ ಪರಿವರ್ತನೆಗೆ ಕಾರಣವಾಗುತ್ತದೆ ಅಂತಹ ಶಕ್ತಿ ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಇದೆ. ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ನಾಯಕತ್ವ ಗುಣವನ್ನ ರೂಪಿಸುವ ಮೂಲಕ ಸಮಾಜದಲ್ಲಿ ಗಣ್ಯ ವ್ಯಕ್ತಿಗಳನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಶೈಲಶ್ರೀ, ಅಲೋಕ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕ ಲೋಹಿತ್ ಮಾಗಲುಮನೆ, ಕಾಲೇಜಿನ ಪ್ರಾಧ್ಯಾಪಕರು, ಎನ್.ಎಸ್.ಎಸ್ ಹಳೆ ಸ್ವಯಂಸೇವಕ ವಿದ್ಯಾರ್ಥಿಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಹಾಜರಿದ್ದರು.