ಸಾರಾಂಶ
ಹಾವೇರಿ: ತಾಲೂಕಿನ ಹೊಸರಿತ್ತಿ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯ ೪೧ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಹಿರಿಯ ಗಾಂಧೀವಾದಿ ಗುದ್ಲೆಪ್ಪ ಹಳ್ಳಿಕೇರಿಯವರ ದರ್ಶನ ಪ್ರದರ್ಶನ ಪೊಟೋ ಗ್ಯಾಲರಿ ಉದ್ಘಾಟನಾ ಸಮಾರಂಭ ಅ. ೨ರಂದು ಬೆಳಗ್ಗೆ ೧೧ ಗಂಟೆಗೆ ಗುರುಕುಲದಲ್ಲಿ ಆಯೋಜಿಸಲಾಗಿದೆ ಎಂದು ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನ ಹಿರಿಯ ಧರ್ಮದರ್ಶಿ ವೀರಣ್ಣ ಚೆಕ್ಕಿ ಹೇಳಿದರು. ತಾಲೂಕಿನ ಹೊಸರಿತ್ತಿ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಗಾಂಧೀವಾದಿ ಕರ್ನಾಟಕದ ಉಕ್ಕಿನ ಮನುಷ್ಯ ಗುದ್ಲೆಪ್ಪ ಹಳ್ಳಿಕೇರಿಯವರು ಜೀವಮಾನದಲ್ಲಿ ನಿರ್ವಹಿಸಿದ ಸಾಧನೆಗಳು, ರಾಜಕಾರಣಿಗಳು, ದೇಶ ಪ್ರೇಮಿಗಳು, ಹಿರಿಯ ಮುತ್ಸದ್ದಿಗಳು, ರಾಷ್ಟ್ರಪತಿ, ಪ್ರಧಾನಮಂತ್ರಿಗಳ ಜೊತೆ ಇರುವ ಛಾಯಾಚಿತ್ರಗಳು ಸೇರಿದಂತೆ ಕೌಟುಂಬಿಕ ಹಿನ್ನೆಲೆ, ಸಭೆಗಳು, ಸಮಾರಂಭಗಳು ಹೀಗೆ ವಿವಿಧ ಸಂದರ್ಭದಲ್ಲಿ ತೆಗೆದಿರುವ ಸುಮಾರು ೨೦೦೦ಕ್ಕೂ ಹೆಚ್ಚು ಪೋಟೋಗಳ ಸಂಗ್ರಹ ಮಾಡಲಾಗಿದೆ. ಈ ಪೈಕಿ ೩೦೦ಕ್ಕೂ ಹೆಚ್ಚು ಛಾಯಾಚಿತ್ರಗಳ ಪೋಟೋ ಗ್ಯಾಲರಿ ನಿರ್ಮಿಸಲಾಗಿದೆ. ಅ.೨ರಂದು ಉದ್ಯಮಿ ಡಾ. ಚಿಗುರುಪಾಟಿ ಸತ್ಯವರ ಪ್ರಸಾದ ಅವರು ದರ್ಶನ ಪ್ರದರ್ಶನ ಫೋಟೋ ಗ್ಯಾಲರಿ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗುರುಕುಲದ ಅಭಿವೃದ್ಧಿಗಾಗಿ ಶ್ರಮಿಸಿದ ದಿ.ಗೋಪಣ್ಣ ಕುಲಕರ್ಣಿ ಅವರ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಪ್ರಧಾನ ಧರ್ಮದರ್ಶಿ ರಾಜೇಂದ್ರಪ್ರಸಾದ ಹಳ್ಳಿಕೇರಿ ವಹಿಸಲಿದ್ದು, ರವೀಂದ್ರ ಮುದ್ದಿ ನುಡಿ ನಮನ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗುರುಕುಲದ ನಕ್ಷತ್ರಗಳಾದ ಪ್ರಸಕ್ತ ಸಾಲಿನ ಅತ್ಯುತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕಳಕೇಶ್ವರ ಪಟ್ಟಣಶೆಟ್ಟಿ, ಉದ್ಯಮಿ ಶಿವಲಿಂಗಯ್ಯ ಗಡ್ಡದೇವರಮಠ, ಮಾಜಿ ಸೈನಿಕ ವಿಜಯಕುಮಾರ ಜಯಕರ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು. ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಪ್ರಧಾನ ಧರ್ಮದರ್ಶಿ ರಾಜೇಂದ್ರಪ್ರಸಾದ ಹಳ್ಳಿಕೇರಿ, ಪ್ರಮುಖರಾದ ದಯಾನಂದ ಕಲಕೋಟಿ, ಪ್ರಭಣ್ಣ ಗೌರಿಮನಿ, ಶಶಿಧರ ಸಾಲಿ, ಬಿ.ಎಸ್.ಯಾವಗಲ್ಲ, ಆರ್.ಎಸ್.ಪಾಟೀಲ, ಎಂ.ಪಿ.ಗೌಡಣ್ಣನವರ ಇತರರು ಇದ್ದರು. ೩೦೦ಕ್ಕೂ ಹೆಚ್ಚು ಛಾಯಾಚಿತ್ರಗಳ ಸಂಗ್ರಹ.. ಗುದ್ಲೆಪ್ಪ ಹಳ್ಳಿಕೇರಿ ಅವರ ಜೀವನದ ಮಹತ್ತರ ಘಟ್ಟಗಳ ವೃತ್ತಾಂತವನ್ನು ಬಿಂಬಿಸುವ ೩೦೦ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಸಂಗ್ರಹಿಸಿ ನಿರ್ಮಿಸಿರುವ ಫೋಟೊ ಗ್ಯಾಲರಿ ದರ್ಶನ ಪ್ರದರ್ಶನ ಗಮನ ಸೆಳೆಯುತ್ತಿವೆ.ಸುಮಾರು ೧೧.೨೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಗ್ಯಾಲರಿಯಲ್ಲಿ ಗುದ್ಲೆಪ್ಪ ಹಳ್ಳಿಕೇರಿಯವರು ಅಂದಿನ ರಾಷ್ಟ್ರಪತಿ, ಪ್ರಧಾನಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರು, ದೇಶ ಪ್ರೇಮಿಗಳ ಜೊತೆ ಇರುವ ಪೋಟೊಗಳು ಹಾಗೂ ವಿದೇಶಕ್ಕೆ ಭೇಟಿ ನೀಡಿದ ಸಂದರ್ಭ, ಮಹತ್ವದ ಸಭೆಗಳು, ಸಮಾರಂಭಗಳು, ಕೌಟುಂಬಿಕ ಹಿನ್ನೆಲೆ ಸೇರಿದಂತೆ ಸಾಂಸ್ಕೃತಿಕ ಚರಿತ್ರಾರ್ಹ ಅಪರೂಪದ ಪೋಟೊಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಗಿದೆ. ಫೋಟೋ ತೆಗೆದ ಸಂದರ್ಭ, ಸಮಯ, ದಿನಾಂಕ ಅಲ್ಲಿರುವ ವ್ಯಕ್ತಿ ವಿಶೇಷತೆಗಳ ಮಾಹಿತಿಯನ್ನು ಪ್ರತಿ ಪೋಟೋದ ಕೆಳಗೆ ದಾಖಲಿಸಿರುವುದು ವಿಶೇಷವಾಗಿದ್ದು, ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡು ಪೋಟೋಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಗ್ಯಾಲರಿಯ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿರುವ ಶಶಿಧರ ಸಾಲಿ ಹೇಳಿದರು.