ಅಧಿವೇಶನಕ್ಕೆ ತೆರೆ: 39 ಬಿಲ್‌ ಒಪ್ಪಿಗೆ ದಾಖಲೆ

| Published : Aug 23 2025, 02:01 AM IST

ಸಾರಾಂಶ

ಕಳೆದ ಆ.11ರಿಂದ ಆರಂಭಗೊಂಡಿದ್ದ 16ನೇ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ವಿಧಾನಸಭೆಯಲ್ಲಿ ಈ ಬಾರಿ ಅತಿ ಹೆಚ್ಚು 39 ವಿಧೇಯಕಗಳು ಅಂಗೀಕಾರವಾಗಿ ದಾಖಲೆ ಸೃಷ್ಟಿಯಾದರೆ, ವಿಧಾನ ಪರಿಷತ್‌ನಲ್ಲಿ 37 ವಿಧೇಯಕಗಳು ಅಂಗೀಕಾರಗೊಂಡಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಆ.11ರಿಂದ ಆರಂಭಗೊಂಡಿದ್ದ 16ನೇ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ವಿಧಾನಸಭೆಯಲ್ಲಿ ಈ ಬಾರಿ ಅತಿ ಹೆಚ್ಚು 39 ವಿಧೇಯಕಗಳು ಅಂಗೀಕಾರವಾಗಿ ದಾಖಲೆ ಸೃಷ್ಟಿಯಾದರೆ, ವಿಧಾನ ಪರಿಷತ್‌ನಲ್ಲಿ 37 ವಿಧೇಯಕಗಳು ಅಂಗೀಕಾರಗೊಂಡಿವೆ.

ವಿಧಾನಸಭೆಯಲ್ಲಿ ಒಂಬತ್ತು ದಿನಗಳಲ್ಲಿ 70 ಗಂಟೆಗಳ ಕಾಲ ಅಧಿವೇಶನ ನಡೆದರೆ, ವಿಧಾನ ಪರಿಷತ್‌ನಲ್ಲಿ 54.25 ಗಂಟೆ ಕಾಲ ಕಲಾಪ ನಡೆಯಿತು. ಈ ಮೊದಲು ವಿಧಾನಸಭೆ ಅಧಿವೇಶನಗಳಲ್ಲಿ ಸುಮಾರು 20 ವಿಧೇಯಕಗಳ ಮಂಡನೆಯಾಗುತ್ತಿದ್ದವು. ಆದರೆ, ಈ ಬಾರಿ 39 ವಿಧೇಯಕ ಮಂಡಿಸಿ ಅನುಮೋದನೆ ಪಡೆದಿರುವುದು ಇತಿಹಾಸದಲ್ಲೇ ಮೊದಲು. ಇದಕ್ಕೆ ಸಹಕರಿಸಿದ ಆಡಳಿತ ಮತ್ತು ವಿಪಕ್ಷಗಳ ಎಲ್ಲ ಶಾಸಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ಒಟ್ಟು 2,306 ಪ್ರಶ್ನೆಗಳು ಸ್ವೀಕೃತವಾಗಿದ್ದು, ಈ ಪೈಕಿ 2,199 ಪ್ರಶ್ನೆಗಳನ್ನು ಅಂಗೀಕರಿಸಲಾಗಿತ್ತು.

ಇನ್ನು ಮೇಲ್ಮನೆಯಲ್ಲಿ ಸದನದಲ್ಲಿ ಮೊದಲ ದಿನ ಇತ್ತೀಚೆಗೆ ನಿಧನರಾದ 11 ಗಣ್ಯರಿಗೆ ಸಂತಾಪ ವ್ಯಕ್ತಪಡಿಸಲಾಯಿತು. ಅಧಿವೇಶನದಲ್ಲಿ 1431 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 135 ಪ್ರಶ್ನೆಗಳನ್ನು ಚುಕ್ಕೆ ಗುರುತಿನ ಪ್ರಶ್ನೆಗಳನ್ನಾಗಿ ಅಂಗೀಕರಿಸಿದ್ದು, ಅವುಗಳಲ್ಲಿ 95 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು. ಲಿಖಿತವಾಗಿ ಉತ್ತರಿಸುವ ಒಟ್ಟು 1296 ಪ್ರಶ್ನೆಗಳ ಪೈಕಿ 789ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಮಂಡಿಸಲಾಯಿತು ಎಂದು ಹೇಳಿದರು.

ಶೂನ್ಯ ವೇಳೆ ಪ್ರಸ್ತಾವನೆಯ ಒಟ್ಟು 71 ಸೂಚನೆಗಳ ಪೈಕಿ 26 ಸೂಚನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು. 19 ಸೂಚನೆಗಳಿಗೆ ಉತ್ತರ ಮಂಡಿಸಲಾಯಿತು. ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತ ರೂಪದಲ್ಲಿರುವ 4 ವಿಧೇಯಕಗಳು ಹಾಗೂ ಅಂಗೀಕೃತ ರೂಪದಲ್ಲಿರುವ 33 ವಿಧೇಯಕಗಳು ಸೇರಿ ಒಟ್ಟು 37 ವಿಧೇಯಕಗಳಿಗೆ ಪರಿಷತ್ತು ಸಹಮತಿ ನೀಡಿದೆ. ಹಾಗೆಯೇ ಮೂರು ವಿಧೇಯಕಗಳನ್ನು ಹಿಂಪಡೆಯಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಮಾಹಿತಿ ನೀಡಿದರು.