ಭೂಸ್ವಾಧೀನ ಪಡಿಸಿಕೊಂಡ ಜಾಗೆ ತೆರವಿಗೆ ಕಾರ್ಯಾಚರಣೆ

| Published : Oct 14 2023, 01:00 AM IST

ಭೂಸ್ವಾಧೀನ ಪಡಿಸಿಕೊಂಡ ಜಾಗೆ ತೆರವಿಗೆ ಕಾರ್ಯಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಅಗಲೀಕರಣಕ್ಕಾಗಿ ಭೂ ಸ್ವಾಧೀನಪಡಿಸಿಕೊಂಡ ಜಾಗದಲ್ಲಿದ್ದ ಮನೆಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ರಸ್ತೆ ಅಗಲೀಕರಣಕ್ಕಾಗಿ ಭೂ ಸ್ವಾಧೀನಪಡಿಸಿಕೊಂಡ ಜಾಗದಲ್ಲಿದ್ದ ಮನೆಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು. ಉಣಕಲ್‌ ಕ್ರಾಸ್‌ನಿಂದ ಸಾಯಿನಗರ ಸರ್ಕಲ್‌ ಮತ್ತು ಉಣಕಲ್‌ ಚರ್ಚ್‌ವರೆಗಿನ 18ಮೀ ರಸ್ತೆ ಅಗಲೀಕರಣ ಯೋಜನೆ ರೂಪಿಸಿದ್ದು, ಇದಕ್ಕಾಗಿ ಭೂ ಸ್ವಾಧೀನ ಪಡಿಸಿಕೊಂಡು ಪರಿಹಾರವನ್ನೂ ಪಾಲಿಕೆ ಮನೆ ಮಾಲೀಕರಿಗೆ ಪಾವತಿಸಿದೆ. ಈ ವರೆಗೂ ಮನೆಯವರು ತೆರವುಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆ ವಲಯ 5ರ ಸಹಾಯಕ ಆಯುಕ್ತ ಗಿರೀಶ ತಳವಾರ ನೇತೃತ್ವದ ತಂಡ, ಶುಕ್ರವಾರ ಬೆಳಗ್ಗೆ ಪೊಲೀಸ್‌ ಬಂದೋಬಸ್ತ್‌ನೊಂದಿಗೆ ತೆರಳಿ ಮನೆಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಯಿತು. ರಸ್ತೆ ಅಗಲೀಕರಣಕ್ಕಾಗಿ 160 ಆಸ್ತಿಗಳ 3985.75 ಚ.ಮೀ. ಭೂ ಸ್ವಾಧೀನ ಪಟ್ಟಿ ಮಾಡಲಾಗಿದ್ದು, ₹9.37 ಕೋಟಿ ಪರಿಹಾರ ನಿಗದಿಪಡಿಸಲಾಗಿದೆ. ಇದರಲ್ಲಿ 55 ಆಸ್ತಿಗಳ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು ₹3.20 ಕೋಟಿ ಪಾವತಿಸಲಾಗಿದೆ ಎಂದು ಸಹಾಯಕ ಆಯುಕ್ತ ಗಿರೀಶ ತಳವಾರ ತಿಳಿಸಿದ್ದಾರೆ. ಪರಿಹಾರ ಪಡೆದ ಬಳಿಕವೂ ಆಸ್ತಿ ಮಾಲೀಕರು ಕಟ್ಟಡ, ಅಂಗಡಿ, ಮುಂಗಟ್ಟು, ಕಾಂಪೌಂಡ್‌ ಇತ್ಯಾದಿಗಳನ್ನು ಈವರೆಗೂ ಯಾರು ಸಂಪೂರ್ಣವಾಗಿ ಖಾಲಿ ಮಾಡಿ ತೆರವುಗೊಳಿಸಿರಲಿಲ್ಲ. ಹಾಗಾಗಿ, ಅನಿವಾರ್ಯವಾಗಿ ಕಾರ್ಯಾಚರಣೆ ಕೈಗೊಳ್ಳಬೇಕಾಯಿತು ಎಂದು ತಿಳಿಸಿದರು. ಪಾಲಿಕೆ ವಲಯ 5ರ ಅಭಿವೃದ್ದಿ ಅಧಿಕಾರಿ ಹಾಗೂ ನೋಡಲ್‌ ಅಧಿಕಾರಿ ಶರಣ ಬಸಪ್ಪ ಕೆಂಭಾವಿ, ಅಭಿಯಂತರರು ರಾಥೋಡ್‌, ಅಭಿಷೇಕ, ಮಂಜುನಾಥ ಸೇರಿದಂತೆ ಹಲವು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.