ಆಪರೇಷನ್ ಕಮಲ: ಸುಳ್ಯ ಲ್ಯಾಂಪ್‌ ಸೊಸೈಟ್‌ ಸಾರಥ್ಯ ಮತ್ತೆ ಬಿಜೆಪಿಗೆ

| Published : Mar 13 2025, 12:47 AM IST

ಆಪರೇಷನ್ ಕಮಲ: ಸುಳ್ಯ ಲ್ಯಾಂಪ್‌ ಸೊಸೈಟ್‌ ಸಾರಥ್ಯ ಮತ್ತೆ ಬಿಜೆಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಳ್ಯ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ವೇಳೆ ಆಪರೇಷನ್ ಕಮಲ ಕೆಲಸ ಮಾಡಿದ್ದು, ಎರಡು ಸ್ಥಾನಗಳೂ ಬಿಜೆಪಿ ಪಾಲಾಗಿದೆ. ಒಂದೂವರೆ ದಶಕದ ಬಳಿಕ ಲ್ಯಾಂಪ್ಸ್‌ (ಲಾರ್ಜ್‌ ಏರಿಯಾ ಮಲ್ಟಿಪರ್ಪಸ್‌ ಸೊಸೈಟಿ) ಚುಕ್ಕಾಣಿ ಹಿಡಿಯಬಹುದೆಂಬ ಕಾಂಗ್ರೆಸ್ ಕನಸು ಭಗ್ನವಾಗಿದೆ.

ಕನ್ನಡಪ್ರಭ ವಾರ್ತೆ ಸುಳ್ಯ

ಸುಳ್ಯ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ವೇಳೆ ಆಪರೇಷನ್ ಕಮಲ ಕೆಲಸ ಮಾಡಿದ್ದು, ಎರಡು ಸ್ಥಾನಗಳೂ ಬಿಜೆಪಿ ಪಾಲಾಗಿದೆ. ಒಂದೂವರೆ ದಶಕದ ಬಳಿಕ ಲ್ಯಾಂಪ್ಸ್‌ (ಲಾರ್ಜ್‌ ಏರಿಯಾ ಮಲ್ಟಿಪರ್ಪಸ್‌ ಸೊಸೈಟಿ) ಚುಕ್ಕಾಣಿ ಹಿಡಿಯಬಹುದೆಂಬ ಕಾಂಗ್ರೆಸ್ ಕನಸು ಭಗ್ನವಾಗಿದ್ದು, ಬಿಜೆಪಿ ಬೆಂಬಲಿತರು ಅಧ್ಯಕ್ಷ ಉಪಾಧ್ಯಕ್ಷರಾಗಿ ಗೆದ್ದಿದ್ದಾರೆ.

ಲ್ಯಾಂಪ್ಸ್‌ನ ೯ ಮಂದಿಯ ನಿರ್ದೇಶಕ ಸ್ಥಾನದಲ್ಲಿ ಅವಿರೋಧ ಹಾಗೂ ಚುನಾವಣೆ ನಡೆದ ಬಳಿಕ ೫ ಸ್ಥಾನ ಕಾಂಗ್ರೆಸ್ ಹಾಗೂ ೪ ಸ್ಥಾನ ಬಿಜೆಪಿ ಬೆಂಬಲಿತರಿದ್ದರು. ಹೀಗಾಗಿ ಕಾಂಗ್ರೆಸ್‌ನವರಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಸಿಗುವುದೆಂಬ ನಿರೀಕ್ಷೆ ಇತ್ತು.

ಕಾಂಗ್ರೆಸ್ ನಲ್ಲಿ ನೀಲಮ್ಮ ಅಧ್ಯಕ್ಷತೆಗೆ ಆಕಾಂಕ್ಷಿಯಾಗಿದ್ದರೆನ್ನಲಾಗಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷತೆಗೆ ಮಾಧವ ದೇವರಗದ್ದೆ ಅವರನ್ನು ನಿರ್ಧರಿಸಿತ್ತು. ಈ ಅವಕಾಶ ಬಳಸಿಕೊಂಡ ಮತ್ತು ಲ್ಯಾಂಪ್ಸ್ ಸಾರಥ್ಯ ತನ್ನಲ್ಲೇ ಉಳಿಸಬೇಕೆಂಬ ಗುರಿಯೊಂದಿಗೆ ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಮುಂದಾದರು. ಕಾಂಗ್ರೆಸ್‌ನಿಂದ ಗೆದ್ದಿದ್ದ, ಹಾಲಿ ನಿರ್ದೇಶಕರೂ ಆಗಿದ್ದ ನೀಲಮ್ಮ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿ ಅವರೇ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷತೆಗೆ ಪುಂಡರೀಕ ಕಾಪುಮಲೆ ನಾಮಪತ್ರ ಸಲ್ಲಿಸಿದರು. ನೀಲಮ್ಮ ಅವರೊಂದಿಗೆ ಜಶ್ಮಿತಾ ಅವರು ಕೂಡಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ವತಿಯಿಂದ ಮಾಧವ ದೇವರಗದ್ದೆ ಅಧ್ಯಕ್ಷತೆಗೆ ಹಾಗೂ ನಾಮನಿರ್ದೇಶಿತ ಸದಸ್ಯರಾಗಿ ನಿಯುಕ್ತಿಗೊಂಡಿದ್ದ ಭವಾನಿಶಂಕರ ಕಲ್ಮಡ್ಕ ಉಪಾಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದರು.

ಈ ಚುನಾವಣೆಯಲ್ಲಿ ನಿರ್ದೇಶಕರನ್ನು ಹೊರತುಪಡಿಸಿ ನಾಮನಿರ್ದೇಶಿತ ಸದಸ್ಯರಿಗೆ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ಲ್ಯಾಂಪ್ಸ್‌ನ ಸಹಕಾರ ಮಹಾಮಂಡಲ ನಿರ್ದೇಶಕ ಪ್ರತಿನಿಧಿಗೆ ಹಾಗೂ ಸುಳ್ಯ ವಲಯ ಅರಣ್ಯಾಧಿಕಾರಿಯವರಿಗೆ ಮತದಾನದ ಅವಕಾಶವಿತ್ತು.

ಚುನಾವಣೆ ನಡೆದು ಮತೆ ಎಣಿಕೆ ನಡೆದಾಗ ಬಿಜೆಪಿ ಅಭ್ಯರ್ಥಿಗಳಿಗೆ ತಲಾ ೭ ಮತಗಳು ಬಂದು ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಕಾಂಗ್ರೆಸ್ ಅಭ್ಯರ್ಥಿಗಳಿಗೆ ೬ ಮತಗಳು ಬಂದು ಪರಾಭವಗೊಂಡರು.