ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಉದ್ವಿಗ್ನತೆಯ ತುರ್ತು ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸುವ ಕುರಿತು ನಗರದ ಚಾಮರಾಜೇಶ್ವರ ದೇವಾಲಯದ ಅವರಣದಲ್ಲಿ "ಆಪರೇಷನ್ ಅಭ್ಯಾಸ್’ ಅಡಿ ಜಿಲ್ಲಾಡಳಿತ ಆಯೋಜಿಸಿದ್ದ ಅಣುಕು ಕಾರ್ಯಾಚರಣೆಯನ್ನು (ಮಾಕ್ ಡ್ರಿಲ್) ಶುಕ್ರವಾರ ಸಂಜೆ ಯಶಸ್ವಿಯಾಗಿ ನಡೆಸಲಾಯಿತು. ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ವಾಯುದಾಳಿ, ಬಾಂಬ್ ಸ್ಫೋಟದ ಮೂಲಕ ಉಂಟಾಗುವ ಸನ್ನಿವೇಶವನ್ನು ಕಾಲ್ಪನಿಕವಾಗಿ ಸೃಷ್ಟಿಸಿ ಅದನ್ನು ಎದುರಿಸುವ ಬಗ್ಗೆ ಅಣುಕು ಕಾರ್ಯಾಚರಣೆ ಆಯೋಜಿಸಲಾಗಿತ್ತು. ಬಾಂಬ್, ಗ್ರೇನೆಡ್‌ನಂತಹ ಮಾದರಿಯ ಕೃತಕ ವಸ್ತುಗಳನ್ನು ಸ್ಫೋಟಿಸಿ ಭಕ್ತರು ಗಾಯಗೊಳ್ಳುವ ಹಾಗೂ ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಸಾರ್ವಜನಿಕರು ಗಲಿಬಿಲಿಗೊಳ್ಳುವಂತೆ ಸನ್ನಿವೇಶ ಸೃಷ್ಟಿಸಲಾಗಿತ್ತು.ಬಾಂಬ್, ಗ್ರೇನೆಡ್ ನಿಮಿಷಗಳ ಅಂತರದಲ್ಲಿ ಭಾರೀ ಶಬ್ದದೊಂದಿಗೆ ಸ್ಫೋಟಿಸಿದಾಗ ಹಲವು ಭಕ್ತರು ರಕ್ತಸಿಕ್ತವಾಗಿ ಗಾಯಗೊಂಡು ಚೀರಾಡುತ್ತಾ ದೇವಾಲಯದ ಒಳಗಿನಿಂದ ಹೊರಬಂದ ದೃಶ್ಯ ನೈಜದಂತೆ ಭಾಸವಾಯಿತು. ಬಾಂಬ್ ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅಗ್ನಿಶಾಮಕ ದಳ, ಪೊಲೀಸ್, ಇನ್ನಿತರ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಮ್‌ನಿಂದ ಅಧಿಕಾರಿಗಳಿಗೆ ಕರೆ ಮಾಡಿ ಬಾಂಬ್ ದಾಳಿ ಕುರಿತು ತಿಳಿಸಲಾಯಿತು.
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಗ್ನಿಶಾಮಕ, ಪೊಲೀಸ್, ಬಾಂಬ್ ನಿಷ್ಕ್ರಿಯ ದಳ, ಗೃಹರಕ್ಷಕ ದಳ, ವೈದ್ಯರ ತಂಡ ಸೇರಿದಂತೆ ತುರ್ತು ಸೇವೆಗಳ ಅಧಿಕಾರಿಗಳು ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಆಗಮಿಸಿದರು. ಸೈರನ್‌ಗಳು ಮೊಳಗಿದವು. ಅಗ್ನಿಶಾಮಕ ದಳ ಬಾಂಬ್ ಸ್ಫೋಟದಿಂದ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರು. ಪೊಲೀಸರು, ರಕ್ಷಣಾ ದಳ, ಗೃಹರಕ್ಷಕ ದಳ ಗಾಯಾಳುಗಳನ್ನು ಕರೆ ತರುತ್ತಿದ್ದಂತೆಯೇ ವೈದ್ಯರು, ಶುಶ್ರೂಷಕರು ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದರು.ಕೆಲವರಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಸ್ಸುಗಳು, ಆ್ಯಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯಿತು. ಸ್ಥಳದಲ್ಲಿದ್ದವರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಯಿತು. ಯಾರು ಹತ್ತಿರ ಬರದಂತೆ, ಆತಂಕಗೊಳ್ಳದಂತೆ ಧ್ವನಿವರ್ಧಕದ ಮೂಲಕ ತಿಳಿಸಲಾಯಿತು. ಕೆಲಹೊತ್ತು ಬ್ಯ್ಲಾಕ್ ಔಟ್ ಮಾಡಲಾಯಿತು. ತುರ್ತು ಸಂದರ್ಭದಲ್ಲಿ ಹೇಗೆ ಜನರನ್ನು ರಕ್ಷಿಸಲಾಗುತ್ತದೆ ಎಂಬುದರ ಬಗ್ಗೆ ಪರಿಣಾಮಕಾರಿಯಾಗಿ ಹಾಗೂ ಅತ್ಯಂತ ವ್ಯವಸ್ಥಿತವಾಗಿ ಅಣುಕು ಪ್ರದರ್ಶನದ ಮೂಲಕ ಮನವರಿಕೆ ಮಾಡಿಕೊಡಲಾಯಿತು. ಅಲ್ಲದೆ ಉದ್ವಿಗ್ನತೆಯಂತಹ ಸಂದರ್ಭದಲ್ಲಿ ಎದುರಾಗಬಹುದಾದ ಸನ್ನಿವೇಶಗಳನ್ನು ವಿವಿಧ ಅಧಿಕಾರಿಗಳ ತಂಡ ನಿಭಾಯಿಸುವ ಕುರಿತ ಕಾರ್ಯಾಚರಣೆ ಆಪರೇಷನ್ ಅಭ್ಯಾಸ್ ಪರಿಪೂರ್ಣವಾಗಿ ಮೂಡಿಬಂತು.
ಕಾರ್ಯಾಚರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಯಾವುದೇ ಅವಘಡಗಳು ಸಂಭವಿಸಿದಾಗ ಅದನ್ನು ಎದುರಿಸಲು ಸನ್ನದ್ಧರಾಗಿರಬೇಕೆಂಬ ಹಿನ್ನೆಲೆಯಲ್ಲಿ ಮಾಕ್ ಡ್ರಿಲ್ (ಅಣುಕು ಕಾರ್ಯಾಚರಣೆ) ನಡೆಸುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿತ್ತು. ಅದರಂತೆ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ದಳ, ಕಂದಾಯ, ಆರೋಗ್ಯ, ನಗರಾಡಳಿತ ಸೇರಿದಂತೆ ಹಲವು ಇಲಾಖೆಗಳು ವಹಿಸಬೇಕಿರುವ ಪಾತ್ರಗಳ ಕುರಿತು ಕಾಲ್ಪನಿಕ ವಿಪತ್ತು ಸನ್ನಿವೇಶ ಸೃಷ್ಠಿಸಿ ಕಾರ್ಯಾಚರಣೆ ನಡೆಸಲಾಗಿದೆ. ಎಷ್ಟು ಸಾಧ್ಯವೋ ಅಷ್ಟು ಸಹಜವಾಗಿ ಕಾರ್ಯಾಚರಣೆ ನಡೆಸಿದ್ದೇವೆ. ಜನಸಂದಣಿ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಇಂತಹ ಕಾರ್ಯಾಚರಣೆ ನಡೆಸಬೇಕಿತ್ತು. ಚಾಮರಾಜೇಶ್ವರ ದೇವಾಲಯ ಪ್ರಮುಖ ಜನಸಂದಣಿ ಇರುವ ಪ್ರದೇಶವಾದ್ದರಿಂದ ಇದನ್ನೇ ಆಯ್ಕೆ ಮಾಡಿಕೊಂಡು ಅಣುಕು ಕಾರ್ಯಾಚರಣೆ ನಡೆಸಲಾಗಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ದೇಶದಲ್ಲಿ ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಉದ್ದೇಶದಿಂದ ಅಣುಕು ಕಾರ್ಯಾಚರಣೆಯನ್ನು ನಡೆಸಲಾಗಿದೆ. ಎಲ್ಲಾ ಇಲಾಖೆಗಳು ಹೇಗೆ ಸಮನ್ವಯದಿಂದ ಜವಾಬ್ದಾರಿ ನಿರ್ವಹಿಸಬೇಕು ಎಂಬುದಕ್ಕೆ ಉತ್ತಮ ಕಾರ್ಯಾಚರಣೆ ಇದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್ ಮಾತನಾಡಿ, ಅಗ್ನಿಶಾಮಕದಳ ಬೆಂಕಿ ಅವಘಡಗಳ ಸಂದರ್ಭದಲ್ಲಿ ಮಾತ್ರ ಕಾರ್ಯನಿರ್ವಹಿಸದೇ ಪ್ರವಾಹ, ಯಾವುದೇ ಅನಾಹುತಗಳು ಉಂಟಾದಾಗ ತ್ವರಿತವಾಗಿ ಧಾವಿಸಿ ಜನರ ರಕ್ಷಣೆಗೆ ಮುಂದಾಗುತ್ತಿವೆ. ಸರ್ಕಾರದ ನಿರ್ದೇಶನ ಅನುಸಾರ ಇಂದು ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಿದ್ದೇವೆ. ಜನರಲ್ಲಿ ಆತ್ಮಸ್ಥೈರ್ಯ ತುಂಬಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಣುಕು ಕಾರ್ಯಾಚರಣೆ ಕೈಗೊಳ್ಳಲಾಯಿತೆಂದು ಹೇಳಿದರು.ನಗರಸಭೆ ಅಧ್ಯಕ್ಷ ಎಸ್.ಸುರೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ತಹಸೀಲ್ದಾರ್ ಗಿರಿಜ, ಅಗ್ನಿಶಾಮಕ ಅಧಿಕಾರಿ ಪ್ರಶಾಂತ್ ಪಾಟೀಲ್, ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಮಹಾಲಿಂಗಸ್ವಾಮಿ, ಆರೋಗ್ಯಾಧಿಕಾರಿ ಡಾ. ಎಸ್. ಚಿದಂಬರ, ಇನ್ನಿತರ ಇಲಾಖೆ ಅಧಿಕಾರಿಗಳು ಇದ್ದರು.