ಸಾರಾಂಶ
ಸಿರುಗುಪ್ಪ: ತಾಲೂಕಿನಾದ್ಯಂತ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ಹೋಮ, ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ ಮತ್ತು ನೈವೇದ್ಯ ಅರ್ಪಿಸಲಾಯಿತು.
ನಗರದ 20ನೇ ವಾರ್ಡ್‌ನಲ್ಲಿ ಸ್ನೇಹ ಕಲಾ ಸಂಘದ ವತಿಯಿಂದ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದ ಪಾಂಡುರಂಗ ಸಹಿತ ಗಣೇಶ, ಅಂಬಾನಗರದಲ್ಲಿ ಗೌರಿಗಣೇಶ ಯುವಕರ ಸಂಘದಿಂದ ವೆಂಕಟೇಶ್ವರ ಗಣೇಶ, ಬಸವೇಶ್ವರ ನಗರದ ಯುವಕರ ಸಂಘದಿಂದ ಶ್ರೀಕೃಷ್ಣಗಣೇಶ, ದೇಶನೂರು ರಸ್ತೆಯ ಕೊಟ್ಟೂರು ದೇವಸ್ಥಾನದಲ್ಲಿ ಶ್ರೀಕೊಟ್ಟೂರು ಬಸವೇಶ್ವರ ಗಣೇಶೋತ್ಸವ ಸಮಿತಿಯಿಂದ ಛತ್ರಪತಿ ಶಿವಾಜಿ ಮಹಾರಾಜ ಅರಮನೆಯಲ್ಲಿ ಗಣೇಶ, ಕಂದಾಯ ಇಲಾಖೆಯ ಅಧಿಕಾರಿಗಳ ವಸತಿ ಆವರಣದಲ್ಲಿ ವಾನರ ಸೈನ್ಯ ಯುವಕರಿಂದ ವಾನರ ಅವತಾರಿ ಗಣೇಶ ಪ್ರತಿಷ್ಠಾಪಿಸಲಾಯಿತು.ಅಮೃತೇಶ್ವರ ದೇವಸ್ಥಾನದಲ್ಲಿ ಆಪರೇಷನ್ ಸಿಂದೂರ ಅವತಾರಿ ಗಣೇಶ, ನಿಟ್ಟೂರು ನರಸಿಂಹ ಮೂರ್ತಿ ಆವರಣದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ 14 ಅಡಿ ಶ್ರೀರಾಮ ಅವತಾರಿ ಗಣೇಶ, ಕುವೆಂಪು ನಗರದಲ್ಲಿ ವೆಂಕಟೇಶ್ವರ ಸಹಿತ ಗಣೇಶ, 19ನೇ ವಾರ್ಡ್‌ನ ಅಭಯಾಂಜನೇಯ ವಿನಾಯಕ ಸಂಘದಿಂದ ನವಿಲು ಗಣೇಶ, ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಹತ್ತಿರ ಶ್ರೀರಾಮಗಣೇಶ, ವಿಜಯ ವಿನಾಯಕ ಕಲಾ ಸಂಘದಿಂದ ಉಗ್ರನರಸಿಂಹ ಸ್ವಾಮಿ ಅವತಾರಿ ಗಣೇಶ, ಅಗ್ನಿ ವಿನಾಯಕ ಕಲಾ ಸಂಘದಿಂದ ಕಾಳಿಂಗ ಸರ್ಪ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿರುವುದು ವಿಶೇಷವಾಗಿತ್ತು.
ಹಿಂದೂ ಮಹಾಗಣಪತಿ ಸಮಿತಿಯಿಂದ ವಿವಿಧ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮ ನಡೆದವು.ಆಕರ್ಷಕ ಕೊಟ್ಟೂರೇಶ್ವರ ದೇವಸ್ಥಾನದ ಸ್ವರೂಪದ ಗಣೇಶ ಮೂರ್ತಿ
ಗಣೇಶ ಚತುರ್ಥಿ ಅದ್ಧೂರಿಯಾಗಿ ಕೊಟ್ಟೂರು ಪಟ್ಟಣ ಮತ್ತು ತಾಲೂಕಿನಲ್ಲಿ ನಡೆಯಿತು.ಕೊಟ್ಟೂರು ಠಾಣೆಯ ವ್ಯಾಪ್ತಿಯಲ್ಲಿ 150ಕ್ಕೂ ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಸಂಘ ಸಂಸ್ಥೆಗಳವರು ಪ್ರತಿಷ್ಠಾಪಿಸಿ ಪೂಜೆಗೈದರು. ಮಣ್ಣಿನಿಂದ ತಯಾರು ಮಾಡಿದ ಗಣೇಶ ಮೂರ್ತಿಗಳನ್ನು ಇಲ್ಲಿನ ಆರಾಧ್ಯದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮೀಯ ಹಿರೇಮಠ ಗಚ್ಚಿನಮಠ ಮತ್ತು ತೊಟ್ಟಿಲ ಮಠಗಳಲ್ಲಿ ಪ್ರತಿಷ್ಠಾಪಿಸಿ ಪೂಜಾಕರ್ತರು ಪೂಜೆಗೈದರು. ಭಕ್ತರು ಆಗಮಿಸಿ ನಮಿಸಿ, ಎಡೆ ಸಮರ್ಪಿಸಿದರು.ಪಟ್ಟಣದ ತೇರು ಬಯಲು ಬಸವೇಶ್ವರ ದೇವಸ್ಥಾನ, ಗಚ್ಚಿನ ಮಠ, ಅಕ್ಕಮಹಾದೇವಿ ಗುಡಿ, ಕೋಟೆಯ ಬಸವೇಶ್ವರ ದೇವಸ್ಥಾನ, ಪುರದ ವೀರಣ್ಣ ದೇವಸ್ಥಾನ, ಊರಮ್ಮನ ಬಯಲು, ಶಾಸ್ತ್ರಿ ಬಡಾವಣೆ, ಬನಶಂಕರಿ ದೇವಸ್ಥಾನದ ಬಳಿಯ ವಿವಿಧ ಯುವಕ ಸಂಘದವರು ಗಣೇಶನನ್ನು ಪೂಜಿಸಿದರು.
ಕೊಟ್ಟೂರೇಶ್ವರ ದೇವಸ್ಥಾನದ ಬಳಿಯಲ್ಲಿನ ಕೋಟೆ ಬಸವೇಶ್ವರ ದೇವಸ್ಥಾನದಲ್ಲಿ ಕೂರಿಸಿದ ಗಣೇಶ ಮೂರ್ತಿ ಸಂಪೂರ್ಣ ಕೊಟ್ಟೂರೇಶ್ವರ ದೇವಸ್ಥಾನದ ಸ್ವರೂಪದಂತಿದ್ದು, ಗಮನ ಸೆಳೆಯಿತು.ಪಟ್ಟಣ ಮತ್ತು ತಾಲೂಕಿನಲ್ಲಿ ಪೊಲೀಸ್ ಬಂದೋಬಸ್ತ್ ಎಲ್ಲೆಡೆ ನಿಯೋಜನೆಗೊಂಡಿತು. ಶಾಂತಿಯುತವಾಗಿ ಗಣೇಶೋತ್ಸವ ಹಬ್ಬ ನೆರವೇರಿತು.