ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಭಾರತೀಯ ಸೇನೆ ಆಪರೇಷನ್ ಸಿಂದೂರ ಯಶಸ್ವಿ ಹಿನ್ನೆಲೆಯಲ್ಲಿ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಗುರುವಾರ ಭಾರತೀಯ ಸೇನೆ ಹೆಸರಿನಲ್ಲಿ ವಿಶೇಷ ಜಲಾಭಿಷೇಕ ನೆರವೇರಿಸಲಾಯಿತು.ಮೋಹಿನಿ ಏಕಾದಶಿ ಪ್ರಯುಕ್ತ ಮೂಲ ವಿಗ್ರಹಕ್ಕೆ ಜಲಾಭಿಷೇಕದೊಂದಿಗೆ ಮಹಾ ಮಂಗಳಾರತಿ ನೆರವೇರಿಸುವ ಮೂಲಕ ಅರ್ಚಕರು ಮತ್ತು ಭಕ್ತಾದಿಗಳು ಪಾಲ್ಗೊಂಡು ಭಾರತೀಯ ಸೇನೆಗೆ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಪ್ರಧಾನ ಅರ್ಚಕ ಪ್ರದೀಪ ಆಚಾರ್ಯ ಮಾತನಾಡಿ, ಕಾಶ್ಮೀರದ ಪೆಹಲ್ಗಾಂನಲ್ಲಿ ಭಯೋತ್ಪಾದಕರ ದಾಳಿಗೆ 26 ಭಾರತೀಯರು ಬಲಿಯಾಗಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೈನ್ಯ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಉಗ್ರರು ಅಡಗಿರುವ ಸ್ಥಳಗಳ ಮೇಲೆ ಏರ್ ಸ್ಟ್ರೈಕ್ ಮೂಲಕ, ಆಪರೇಷನ್ ಸಿಂದೂರ ಹೆಸರಿನಲ್ಲಿ ಭಾರತ ದಿಟ್ಟತನದ ಉತ್ತರ ನೀಡಿದೆ ಎಂದು ಪ್ರಶಂಶಿಸಿದರು.ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಆದೇಶದ ಮೇರೆಗೆ ಪುರಾಣ ಪ್ರಸಿದ್ಧ ಶ್ರೀಉಗ್ರ ನರಸಿಂಹಸ್ವಾಮಿ ದೇವಾಲಯ, ಚಿಕ್ಕ ಅರಸಿನಕೆರೆ ಕಾಲಭೈರವೇಶ್ವರ, ನಂದಿ ಬಸವೇಶ್ವರ ದೇವಾಲಯ ಸೇರಿದಂತೆ ಹಲವು ದೇವಾಲಯಗಳಲ್ಲಿ ಹೋಮ ಹವನಾದಿಗಳೊಂದಿಗೆ ವಿಶೇಷ ಪೂಜೆ ನೆರೆವೇರಿಸುವ ಮೂಲಕ ಭಾರತೀಯ ಸೈನಿಕರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಹೈಕೋರ್ಟ್ ನ್ಯಾಯಮೂರ್ತಿ ಇಂದ್ರೇಶ್ ಶ್ರೀಹೊಳೆ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿಕನ್ನಡಪ್ರಭ ವಾರ್ತೆ ಮದ್ದೂರು
ಹೈಕೋರ್ಟ್ ನ್ಯಾಯಮೂರ್ತಿ ಇಂದ್ರೇಶ್ ಅವರು ಗುರುವಾರ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಬೆಂಗಳೂರಿಂದ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಗಮಿಸಿದ ನ್ಯಾಯಮೂರ್ತಿಗಳನ್ನು ದೇಗುಲದ ಪ್ರಧಾನ ಅರ್ಚಕ ಪ್ರದೀಪಚಾರ್ಯ, ಸಹ ಅರ್ಚಕ ಸುರೇಶ ಆಚಾರ್ಯ ಸೇರಿದಂತೆ ಅರ್ಚಕರು
ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.ನಂತರ ನ್ಯಾಯಮೂರ್ತಿಗಳು ಶ್ರೀಹೊಳೆ ಆಂಜನೇಯಸ್ವಾಮಿ ಮೂಲ ವಿಗ್ರಹದ ದರ್ಶನ ಪಡೆದು ಮಹಾ ಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ಸ್ವೀಕರಿಸಿದರು. ನಂತರ ದೇಗುಲದ ಅರ್ಚಕರೊಂದಿಗೆ ಉಭಯ ಕುಶಲೋಪರಿ ನಡೆಸಿದ ನ್ಯಾಯಮೂರ್ತಿ ಇಂದ್ರೇಶ್ ಅವರು, ಕದಂಬ ನದಿ ತೀರದ ಶ್ರೀಹೊಳೆ ಆಂಜನೇಯ ಸ್ವಾಮಿ ದೇಗುಲ ತನ್ನದೇ ಆದ ಖ್ಯಾತಿಯನ್ನು ಹೊಂದಿದೆ. ಆಗಾಗ ಇಲ್ಲಿಗೆ ಬಂದು ದೇವರ ದರ್ಶನ ಪಡೆಯುವುದರಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.
ದೇವಾಲಯದಲ್ಲಿ ಕಾಲ ಕಳೆದ ನಂತರ ಮತ್ತೆ ಬೆಂಗಳೂರಿಗೆ ನಿರ್ಗಮಿಸಿದರು.