ಸಾರಾಂಶ
ದೊಡ್ಡಬಳ್ಳಾಪುರ: ಭಾರತೀಯ ಸೇನಾಪಡೆಗಳು ಭಯೋತ್ಪಾದಕರ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ ಯಶಸ್ವಿ ಹಿನ್ನೆಲೆ ಸೇನಾ ಪಡೆಗಳ ಪರಾಕ್ರಮ ಸ್ಮರಿಸಿ ಹಾಗೂ ಉಗ್ರವಾದ ಖಂಡಿಸಿ ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಸಮೂಹ ಸಂಸ್ಥೆಗಳ ನೇತೃತ್ವದಲ್ಲಿ ಬೃಹತ್ ವಿದ್ಯಾರ್ಥಿ ಜಾಥಾ ಶನಿವಾರ ನಡೆಯಿತು.
ನೆಲದಾಂಜನೇಯಸ್ವಾಮಿ ದೇವಾಲಯ, ಬಸವ ಭವನ ವೃತ್ತ ಹಾಗೂ ಕೆಸಿಪಿ ವೃತ್ತದ ಬಳಿಯಿಂದ 3 ಪ್ರತ್ಯೇಕ ಜಾಥಾಗಳು ಹೊರಟು ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಸೇರಿದರು. ಭಗತ್‌ಸಿಂಗ್ ಕ್ರೀಡಾಂಗಣದಿಂದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು, 500 ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಜಾಥಾ ನಡೆಸಿದರು. ಶಾಂತಿನಗರದಲ್ಲಿ ಮುತ್ಯಾಲಮ್ಮ ಸಾಂಸ್ಕೃತಿಕ ಸೇವಾ ಸಮಿತಿಯಿಂದ ಜಾಥಾ ವಿದ್ಯಾರ್ಥಿಗಳ ಮೇಲೆ ಹೂ ಮಳೆಗರೆದು ಸ್ವಾಗತಿಸಲಾಯಿತು.ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ವಿಜಯೇಂದ್ರರಾವ್ ಮಾತನಾಡಿ, ದೇಶದ ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಬೇಕು. ಇಂದು ದೇಶವನ್ನು ಕಾಯುತ್ತಿರುವ ನಮ್ಮಂತಹ ಸೈನಿಕರು, ಹಗಲು ರಾತ್ರಿ, ಚಳಿ ಮಳೆ ಎನ್ನದೇ ದೇಶವನ್ನು ಕಾಯುತ್ತಿದ್ದಾರೆ. ಅವರಿಗೆ ಇಡೀ ದೇಶ ನೀಡುತ್ತಿರುವ ಬೆಂಬಲ ರೋಮಾಂಚಕವಾಗಿದೆ. ದೇಶ ಸೇವೆ ಎಂದರೆ ಯುದ್ಧ ಭೂಮಿಯಲ್ಲಿಯೇ ಹೋರಾಟ ನಡೆಸಬೇಕೆಂದೇನಿಲ್ಲ. ನೀವಿರುವ ಸ್ಥಳದಲ್ಲಿಯೇ ದೇಶ ಭಕ್ತಿ ತೋರಿಸಬಹುದು. ನಮ್ಮ ದೇಶ ಎನ್ನುವ ಅಭಿಮಾನ ಪ್ರತಿಯೊಬ್ಬರಲ್ಲಿಯೂ ಮೂಡಬೇಕು, ಇದು ಸೈನಿಕರಿಗೆ ಉತ್ಸಾಹ ತುಂಬಲಿದೆ. ದೇಶದ ಯೋಧರು ಉಗ್ರರನ್ನು ದಮನ ಮಾಡಿರುವುದು ನಾವು ಹಬ್ಬದಂತೆ ಸಂಭ್ರಮಿಸಬೇಕಿದೆ. ಯಾವುದೇ ದೇಶ ಆಕ್ರಮಣ ಮಾಡಿದರೂ ಹಿಮ್ಮೆಟ್ಟಿಸುವ ಶಕ್ತಿ ಭಾರತಕ್ಕಿದೆ ಎಂದರು.
ಕಾರ್ಯಕ್ರಮದಲ್ಲಿ ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ, ಲಯನ್ಸ್ ಕ್ಲಬ್‌ನ ವೀರಭದ್ರ ಗೌಡ, ನಾಗರತ್ನ, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಜೆ.ಆರ್.ರಾಕೇಶ್, ಉಪಾಧ್ಯಕ್ಷ ಕೆ.ಆರ್.ರವಿಕಿರಣ್, ಮಾಜಿ ಅಧ್ಯಕ್ಷ ಡಾ.ಶ್ರೀನಿವಾಸ ರೆಡ್ಡಿ, ಕಾರ್ಯದರ್ಶಿ ಕೆ.ಸಿ.ನಾಗರಾಜ್, ಎಇಇ ಐ.ಎಂ.ರಮೇಶ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿಭಾಗಗಳ ಮುಖ್ಯಸ್ಥರು, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.(ಒಂದು ಚೆಂದದ ಫೋಟೋ ಬಳಸಿ )
17ಕೆಡಿಬಿಪಿ7-ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಪರೇಷನ್ ಸಿಂದೂರ ಯಶಸ್ವಿ ಹಿನ್ನೆಲೆ 500 ಮೀಟರ್ ಉದ್ದದ ತಿರಂಗಾ ಮೆರವಣಿಗೆ, ಜಾಥಾ ನಡೆಸಲಾಯಿತು.