ಸಾರಾಂಶ
ಆಪರೇಷನ್ ಸಿಂದೂರ್ ಮೂಲಕ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಯೋಧರಿಗಾಗಿ ಕೊಡಗು ಜಿಲ್ಲಾ ಬಿಜೆಪಿಯಿಂದ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಆಪರೇಷನ್ ಸಿಂದೂರ್ ಮೂಲಕ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಯೋಧರಿಗಾಗಿ ಕೊಡಗು ಜಿಲ್ಲಾ ಬಿಜೆಪಿಯಿಂದ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.ಉಗ್ರರ ನಡುವಿನ ಈ ಕಾರ್ಯಾಚರಣೆಯಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಪೂಜೆ ನರವೇರಿಸಲಾಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಭಯೋತ್ಪಾದನೆ ನಿರ್ಮೂಲನೆಗಾಗಿ ಭಾರತೀಯ ಸೇನೆ ಹೋರಾಟ ನಡೆಸುತ್ತಿದೆ. ಪಾಕಿಸ್ತಾನದ ಡ್ರೋಣ್‌ಗಳನ್ನು ಭಾರತ ಹೊಡೆದುರುಳಿಸಿದ್ದು, ನಮಗೆ ಆರಂಭಿಕ ಜಯ ದೊರಕಿದೆ ಎಂದು ಹೇಳಿದರು.* ಅಲ್‌ಖೈದಾ ಕರೆಗೆ ಮಣೆ ಹಾಕುವವರಿಲ್ಲ:
ಇಸ್ಲಾಂ ಉಳಿವಿಗಾಗಿ ಮುಸಲ್ಮಾನರು ಒಂದಾಗಬೇಕೆಂದು ಅಲ್ ಖೈದಾ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಆ ಕರೆಗೆ ಯಾರೂ ಮಣೆ ಹಾಕುವ ಕೆಲಸ ಮಾಡಲ್ಲ. ಸಂಸದ ಅಸಾದುದ್ದಿನ್ ಓವೈಸಿ ಕೂಡ ಪಾಕಿಸ್ತಾನವನ್ನು ಪುಡಿಪುಡಿ ಮಾಡಿ ಎಂದಿದ್ದಾರೆ. ಅದಕ್ಕೆ ನಾವೆಲ್ಲರೂ ಸಹಕಾರ ನೀಡುತ್ತೇವೆ ಎಂದಿದ್ದಾರೆ. ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಎಲ್ಲರೂ ಇದನ್ನೇ ಹೇಳಿದ್ದಾರೆ. ಅವರೆಲ್ಲರೂ ಮಿಸೈಲ್ಸ್ ಬಿದ್ದಿರುವ ಜಾಗಗಳಿಗೆ ಭೇಟಿ ನೀಡಿದ್ದಾರೆ ಎಂದು ರಂಜನ್ ಹೇಳಿದರು.ಭಾರತ ಭಯೋತ್ಪಾದನೆಯನ್ನು ಮಟ್ಟ ಹಾಕುತ್ತಿದೆ. ಭಯೋತ್ಪಾದಕರ ಕೇಂದ್ರಗಳನ್ನು ಉಡೀಸ್ ಮಾಡುತ್ತಿದೆ. ಆದರೆ ಪಾಕಿಸ್ತಾನ ನಮ್ಮ ದೇಶದ ನಾಗರಿಕರ ಮೇಲೆ ದಾಳಿ ಮಾಡುತ್ತಿದೆ. ಅದನ್ನು ಪಾಕಿಸ್ತಾನ ನಿಲ್ಲಿಸಬೇಕು. ಇಲ್ಲದಿದ್ದರೆ ಪಾಕಿಸ್ತಾನವೇ ಭೂಪಟದಲ್ಲಿ ಇಲ್ಲದಂತೆ ಭಾರತ ಮಾಡಲಿದೆ ಎಂದರು.
ಪೂಜೆಯ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.