ಸಾರಾಂಶ
ಆಪರೇಷನ್ ಸಿಂಧೂರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಗಡಿಗೆ ಹೊರಟಿರುವ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದ ಸಿಆರ್‌ಪಿಎಫ್ ಯೋಧ ಭೀಮಣ್ಣ ವೈ. ಗುರಿಕಾರ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.
ಕುಷ್ಟಗಿ: ಆಪರೇಷನ್ ಸಿಂಧೂರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಗಡಿಗೆ ಹೊರಟಿರುವ ತಾಲೂಕಿನ ಹಿರೇಮನ್ನಾಪುರ ಗ್ರಾಮದ ಸಿಆರ್‌ಪಿಎಫ್ ಯೋಧ ಭೀಮಣ್ಣ ವೈ. ಗುರಿಕಾರ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ನಮ್ಮ ದೇಶದ ರಕ್ಷಣೆಗಾಗಿ ರಜೆ ಹಾಕಿ ಬಂದ ಸೈನಿಕರೆಲ್ಲ ವಾಪಸ್ ತೆರಳಿದ್ದಾರೆ. ತಮ್ಮ ಜೀವ ಲೆಕ್ಕಿಸದೆ ಯುದ್ಧದಲ್ಲಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಂದರು.ಇಂದಿನ ಯುವಕರಲ್ಲಿ ದೇಶಾಭಿಮಾನದ ಕಿಚ್ಚು ಹೆಚ್ಚಬೇಕಿದೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿ, ಇನ್ನೊಮ್ಮೆ ಭಾರತದ ಕಡೆ ಮುಖ ಮಾಡದಂತೆ, ಮುಟ್ಟಿ ನೋಡಿಕೊಳ್ಳುವ ಹಾಗೆ ಪಾಠ ಕಲಿಸಬೇಕಿದೆ. ಭಾರತ ಮಾತೆಗೆ ಹಾಗೂ ನಮ್ಮೆಲ್ಲರ ನೆಮ್ಮದಿಯ ನಿಟ್ಟುಸಿರಿಗೆ ಕಾರಣರಾಗಿರುವ ಯೋಧರಿಗೆ, ಈ ನಾಡಿನ ರೈತರಿಗೆ ನಾವೆಲ್ಲರೂ ಗೌರವ ನೀಡೋಣ. ಪಾಪಿ ಪಾಕಿಸ್ತಾನದ ವಿರುದ್ಧ ವಿಜಯಶಾಲಿಯಾಗಿ ನಮ್ಮ ಹೆಮ್ಮೆಯ ಭರತಮಾತೆಯ ಮಗನಾಗಿ ಗೆದ್ದು ಬರಲಿ ಎಂದು ಹಾರೈಸಿದರು.
ಸಿಆರ್‌ಪಿಎಫ್ ಯೋಧ ಭೀಮಣ್ಣ ವೈ. ಗುರಿಕಾರ ಮಾತನಾಡಿ, ನನ್ನ ಕುಟುಂಬದಲ್ಲಿ ಮದುವೆ ಇದ್ದ ಕಾರಣ ನಾನು ರಜೆ ಹಾಕಿ ಬಂದಿದ್ದೆ. ಈಗ ತುರ್ತು ಆಗಮಿಸಬೇಕು ಎಂದು ಆದೇಶ ಬಂದಿರುವ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದತ್ತ ತೆರಳುತ್ತಿದ್ದೇನೆ. ಎಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಹೇಳಿದರು.ಮಾಜಿ ಸೈನಿಕರಾದ ಶಿವಾಜಿ ಹಡಪದ, ಶರಣಯ್ಯ ಹಿರೇಮಠ, ಪ್ರಭುಶಂಕರಗೌಡ ಪಾಟೀಲ, ಮಂಜುನಾಥ ನಾಲಗಾರ, ಡಾ. ಎಸ್.ವಿ. ಡಾಣಿ, ಶರಣಪ್ಪ ಚೂರಿಮ ಬಬಲೂ ಅತ್ತಾರ, ಉಮೇಶ ಯಾಧವ ಇದ್ದರು. ಯೋಧನಿಗೆ ಗೆಲುವಿನ ತಿಲಕವನ್ನು ಇಟ್ಟು ಸನ್ಮಾನಿಸಿ, ಗೌರವಿಸಿದರು.