ಸಾರಾಂಶ
ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದ ಎಂ.ಆರ್.ಟಿ ಕಣ್ಣಿನ ಆಸ್ಪತ್ರೆ ಆವರಣದಲ್ಲಿ ಭಾನುವಾರ ಸಂಸದ ಗೋವಿಂದ ಕಾರಜೋಳ ನೇತ್ರ ತಜ್ಞ ದಿ.ಡಾ.ಕೆ. ನಾಗರಾಜ ಮೇಲು ಮಾಳಿಗೆ ಅವರ ಪುತ್ತಳಿ ಅನಾವರಣಗೊಳಿಸಿದರು.
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಲಕ್ಷಾಂತರ ಅಂದರ ಬಾಳಿಗೆ ಬೆಳಕಾಗಿರುವ ನೇತ್ರ ತಜ್ಞ ದಿವಂಗತ ಡಾ. ಕೆ.ನಾಗರಾಜ ಅವರ ಸಮಾಜ ಸೇವೆ ಎಂದೆಂದಿಗೂ ಅವಿಸ್ಮರಣೀಯ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದ ಎಂ.ಆರ್.ಟಿ.ಕಣ್ಣಿನ ಆಸ್ಪತ್ರೆ ಆವರಣದಲ್ಲಿ ಭಾನುವಾರ ನೇತ್ರ ತಜ್ಞ ದಿ.ಡಾ.ಕೆ. ನಾಗರಾಜ ಮೇಲು ಮಾಳಿಗೆ ಇವರ ಪುತ್ತಳಿ ಅನಾವರಣ ಹಾಗೂ ಯಗ್ ಲೇಸರ್ ಮತ್ತು ಕಣ್ಣಿನ ಅಲ್ಟ್ರಾ ಸೌಂಡ್ ಮಿಷನ್ ಉಪಕರಣಗಳ ಉದ್ಘಾಟನೆ, ನೇತ್ರ, ದಂತ. ಹೃದ್ರೋಗ, ಪ್ರಸೂತಿ, ಸ್ತ್ರೀ ರೋಗಿಗಳ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೊಂಡ್ಲ ಹಳ್ಳಿಯ ಮೇಲು ಮಾಳಿಗೆ ಕುಟುಂಬ ಈ ಭಾಗದಲ್ಲಿ ತುಂಬಾ ಹೆಸರಾಗಿರುವ ಕುಟುಂಬವಾಗಿದೆ. ಅಂತಹ ಕುಟುಂಬದಲ್ಲಿ ಜನಿಸಿದ ಡಾ ಕೆ.ನಾಗರಾಜ ಸರಳ ಜೀವಿ ಎನ್ನುವುದು ಕೇಳಿದ್ದೇನೆ. ಹಳ್ಳಿಯಲ್ಲಿ ಹುಟ್ಟಿ ಕಣ್ಣಿನ ವೈದ್ಯರಾಗಿ ಅನೇಕ ಕಡೆ ಸೇವೆ ಮಾಡಿ ಬಹುದೊಡ್ಡ ಹೆಸರು ಗಳಿಸಿದ್ದರೂ ನಿಸ್ವಾರ್ಥ ಜೀವಿಯಾಗಿ ಬದುಕಿದ್ದಾರೆ. ಬಸವಣ್ಣನ ಆದರ್ಶಗಳಂತೆ ಎಲ್ಲ ವರ್ಗದವರನ್ನು ಪ್ರೀತಿಸುತ್ತಿದ್ದ ಅವರು ದೊಡ್ಡ ವೈದ್ಯರಾದರೂ ಹುಟ್ಟಿದ ಊರಿನ ನಂಟನ್ನು ಬಿಡದೆ ಹಳ್ಳಿಯಲ್ಲಿ ಕಣ್ಣಿನ ಆಸ್ಪತ್ರೆ ತೆರೆದು ಲಕ್ಷಾಂತರ ಬಡವರ ಬಾಳಿಗೆ ನೆರವಾಗಿದ್ದಾರೆ. ಸಾವಿರಾರು ಕಡೆ ಕಣ್ಣಿನ ಚಿಕಿತ್ಸಾ ಶಿಬಿರ ನಡೆಸಿ ಯಾವುದೇ ಶುಲ್ಕ ಪಡೆಯದೆ ಲಕ್ಷಾಂತರ ಬಡ ಅಂದರಿಗೆ ಚಿಕಿತ್ಸೆ ನೀಡಿರುವ ಅವರ ಸೇವೆ ಸದಾ ಸ್ಮರಣೀಯ. ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಬೇಕು ಎಂದರು.ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ ಮಾತನಾಡಿ, ಬಡವರ ಪಾಲಿಗೆ ಆಸಾಕಿರಣವಾಗಿದ್ದ ನೇತ್ರ ತಜ್ಞ ನಾಗರಾಜ್ ಬಡವರ ಬದುಕಿಗೆ ನೆರವಾಗಿದ್ದಾರೆ. ಅವರು ಸ್ವಂತ ಊರಲ್ಲಿ ಕಣ್ಣಿನ ಆಸ್ಪತ್ರೆ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ತೆರೆದು ಅನೇಕ ಬಡವರಿಗೆ ಮತ್ತು ಬಡ ಮಕ್ಕಳಿಗೆ ಆಸರೆಯಾಗಿದ್ದಾರೆ. ಅವರ ಸೇವೆ ಮತ್ತು ಆದರ್ಶಗಳು ಎಲ್ಲಾ ಕಾಲಕ್ಕೂ ಮಾದರಿ ಎಂದರು.
ಇದೇ ವೇಳೆ ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿದರು ನಿವೃತ್ತ ಪ್ರೊ.ಎಂ.ಎನ್ ನಾಗರಾಜ್. ತಾಪಂ ಮಾಜಿ ಸದಸ್ಯ ಟಿ. ರೇವಣ್ಣ ನಿವೃತ್ತ ಶಿಕ್ಷಕ, ಶಾಂತವೀರಣ್ಣ ಇದ್ದರು.