ಸಾರಾಂಶ
ಕೊಪ್ಪಳ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ತೀವ್ರ ಕುಸಿತವಾಗಿರುವುದಕ್ಕೆ ಕಾರಣ ಪತ್ತೆ ಮಾಡಲು ಫೇಲಾದ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ!
ವಿದ್ಯಾರ್ಥಿಗಳೊಂದಿಗೆ ಖುದ್ದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನರಾಜ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆ ಅವರು ಶನಿವಾರ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಂವಾದ ನಡೆಸಿದ್ದಾರೆ.ಫಲಿತಾಂಶ ಕುಸಿತಕ್ಕೆ ಅಧಿಕಾರಿಗಳಿಂದ ಕಾರಣ ಪಡೆಯುವ ಬದಲು ಇದೇ ಮೊದಲ ಬಾರಿಗೆ ಫೇಲಾದ ವಿದ್ಯಾರ್ಥಿಗಳೊಂದಿಗೆ ಕೇಳಿ ತಿಳಿಯುವ ವಿನೂತನ ಪ್ರಯತ್ನ ಮಾಡಿರುವುದು ಪ್ರಸಂಶೆಗೆ ಪಾತ್ರವಾಗಿದೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನರಾಜ ಅವರು ಮೊದಲು ತಮ್ಮ ಜೀವನ ಕತೆಯನ್ನೇ ಹೇಳಿ, ಮಕ್ಕಳಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು.ನಾನು ಸಹ ಪ್ರಾರಂಭದಲ್ಲಿ ಅಷ್ಟಾಗಿ ಜಾಣ ಇರಲಿಲ್ಲ. ನನಗೆ ಓದಿದ್ದು ನೆನಪು ಇರುತ್ತಿರಲಿಲ್ಲ. ಆದರೆ, ನಾನು ತರ್ಕ ಮಾಡುವ ಸಾರ್ವಜನಿಕ ಆಡಳಿತ ವಿಷಯವನ್ನು ತೆಗೆದುಕೊಂಡು ಆಸಕ್ತಿಯಿಂದ ಅಭ್ಯಾಸ ಮಾಡಿದೆ. ನಮ್ಮೂರಿನಲ್ಲಿ ಅನೇಕ ಶ್ರೀಮಂತರು ಇದ್ದರೂ ಅವರಿಗೆ ಪಾಸಾಗಲು ಆಗಿರಲಿಲ್ಲ. ಸಾಮಾನ್ಯ ಕುಟುಂಬದಿಂದ ಬಂದಿರುವ ನಾನು ನಮ್ಮೂರಿನಲ್ಲಿ ಮೊದಲ ಐಎಎಸ್ ಮಾಡಿದ್ದೇನೆ ಎಂದರು. ಆದರೆ, ಇದಕ್ಕೆಲ್ಲ ಕಠಿಣ ಪರಿಶ್ರಮ ಬೇಕು. ಪ್ರತಿ ವಿದ್ಯಾರ್ಥಿ ಪ್ರತಿನಿತ್ಯ 8 ಗಂಟೆಗಳ ಕಾಲ ಕಠಿಣ ಅಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ತಿಳಿ ಹೇಳಿದರು.
ನೀವು ಸಹ ಭಯವನ್ನು ಬಿಟ್ಹಾಕಿ, ಬದುಕಿನಲ್ಲಿ ಯಶಸ್ಸು ಕಂಡುಕೊಳ್ಳುವ ದಿಸೆಯಲ್ಲಿ ಪ್ರಯತ್ನ ಮಾಡಿದರೆ ಖಂಡಿತವಾಗಿ ಯಶಸ್ವಿಯಾಗುತ್ತೀರಿ, ಫೇಲಾದ ತಕ್ಷಣ ಜೀವನ ಮುಗಿದೇ ಹೋಗುವುದಿಲ್ಲ. ಫೇಲಾಗದವರು ಆನಂತರ ಸರಿಯಾಗಿ ಅಭ್ಯಾಸ ಮಾಡಿ, ಐಎಎಸ್ ಮಾಡಿದವರು ಇದ್ದಾರೆ. ಹೀಗಾಗಿ, ಯಾವುದಕ್ಕೂ ಧೃತಿಗೆಡದೆ ಅಭ್ಯಾಸ ಮಾಡಬೇಕು ಎಂದರು.ವಿದ್ಯಾರ್ಥಿಗಳಿಂದ ಅಭಿಪ್ರಾಯ ಪಡೆದ ಅವರು, ಅವರಿಗೆ ಅಲ್ಲಿಯೇ ಪರಿಹಾರವನ್ನು ಸೂಚಿಸಿದರು.
ವೀಣಾ ಎನ್ನುವ ವಿದ್ಯಾರ್ಥಿ ನನಗೆ ನೆನಪೇ ಉಳಿಯುವುದಿಲ್ಲ. ಚಿಕ್ಕವಳಿದ್ದಾಗ ಕಾಮಾಲೆ ರೋಗಕ್ಕೆ ತುತ್ತಾಗಿದ್ದೆ, ಆಗ ಸುಡಿಸಿದ್ದರಿಂದ ನನಗೆ ನೆನಪಿನ ಶಕ್ತಿ ಕಡಿಮೆ ಇದೆ ಎಂದಳು. ಇದನ್ನು ಸಹ ಧನಾತ್ಮಕವಾಗಿಯೇ ಪರಿಗಣಿಸಿದ ಮೋಹನರಾಜ್ ಅವರು, ಹೋ ಹೌದಾ, ಎಲ್ಲರಿಗೂ ಅಷ್ಟಾಗಿ ಜ್ಞಾಪಕ ಶಕ್ತಿ ಇರುವುದಿಲ್ಲ. ಆಗ ಅವರು ಅದಕ್ಕಾಗಿ ಪ್ರಯತ್ನ ಮಾಡಬೇಕು. ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಹಾಗೆಯೇ ನನಗೆ ನೆನಪಿನ ಶಕ್ತಿ ಇಲ್ಲ ಎನ್ನುವುದನ್ನು ಮೊದಲು ಮನಸ್ಸಿನಿಂದ ಕಿತ್ತುಹಾಕಿ ಎಂದರು.ನಿಮ್ಮಂಥವರನ್ನು ಗುರುತಿಸಿ, ಕೌನ್ಸೆಲಿಂಗ್ ಮಾಡಲು ನಿನ್ನ ಅಭಿಪ್ರಾಯ ಸಹಕಾರಿಯಾಗಲಿದೆ ಎಂದರು.
ಭಾಗ್ಯನಗರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಾವಣ್ಯ ಮಾತನಾಡಿ, ನಾವೆಲ್ಲ ಕೊರೋನಾ ಸಮಯದಲ್ಲಿ ಸರಿಯಾಗಿ ಕಲಿಯಲು ಆಗಿಲ್ಲ. ಹೀಗಾಗಿ ಈಗ ಎಸ್‌ಎಸ್‌ಎಲ್‌ಸಿಯಲ್ಲಿ ಸಮಸ್ಯೆಯಾಗಿದೆ ಎಂದರು. ಅಂಥವರಿಗೆ ಪರಿಹಾರ ಬೋಧನೆ ಮೂಲಕ ಪರಿಹಾರ ನೀಡಬೇಕು ಎಂದು ಮೋಹನ ರಾಜ್ ಅವರು ಹೇಳಿದರು.ಕುಷ್ಟಗಿ ತಾಲೂಕಿನ ಸಿರಗುಂಪಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿ ವೆಬ್ ಕಾಸ್ಟಿಂಗ್ ಮಾಡಿದ್ದರಿಂದ ನಾವು ಭಯದಿಂದ ಪರೀಕ್ಷೆ ಬರೆಯುವಂತೆ ಆಯಿತು. ಇದನ್ನು ಪೂರಕ ಪರೀಕ್ಷೆಗಳಿಗೂ ಅಳವಡಿಸುವ ಮೂಲಕ ಭಯ ದೂರ ಮಾಡಬೇಕು ಎಂದರು. ಸಲಹೆ ಸರಿಯಾಗಿದೆ, ಈ ರೀತಿ ಮಾಡುವ ದಿಸೆಯಲ್ಲಿ ಕ್ರಮವಹಿಸಲಾಗುವುದು ಎಂದು ಕೆ.ಪಿ. ಮೋಹನರಾಜ ಹೇಳಿದರು.
ಇನ್ನು ಕೆಲವು ವಿದ್ಯಾರ್ಥಿಗಳು ಮೂರು ಬಾರಿ ಪರೀಕ್ಷೆ ನಡೆಸುತ್ತಿರುವುದರಿಂದ ನಮಗೆ ಉದಾಸೀನವಾಗಿದೆ. ಮತ್ತೊಂದು ಅವಕಾಶ ಇದೆ ಎಂದು ಬೇಜವಾಬ್ದಾರಿ ಮಾಡುತ್ತಿದ್ದೇವೆ ಎಂದು ಹೇಳಿದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕುರಿತು ಇರುವ ಭಯ ದೂರ ಮಾಡಬೇಕಾಗಿದೆ ಎಂದರು.ವಿಜಯ ಕುಮಾರ ಎನ್ನುವ ವಿದ್ಯಾರ್ಥಿ, ಮನೆಯಲ್ಲಿ ಬಡತನ ಇರುವುದರಿಂದ ನಾವೆಲ್ಲ ದುಡಿಯಲು ಹೋಗುತ್ತೇವೆ, ಆಗ ಶಾಲೆಗೆ ಬರುವುದಿಲ್ಲ. ಹೀಗಾಗಿ, ನಮ್ಮ ಶಿಕ್ಷಣ ಕುಂಠಿತವಾಗುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಮುನ್ನ ನಮ್ಮನ್ನು ಸುಮ್ಮನೇ ಪಾಸು ಮಾಡುತ್ತಾರೆ. ಹೀಗಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾಗುತ್ತೇವೆ ಎಂದರು.
ಹೀಗೆ, ಹಲವಾರು ವಿದ್ಯಾರ್ಥಿಗಳು ಹಲವು ರೀತಿಯಲ್ಲಿ ಹೇಳಿದ ವಿಷಯಗಳನ್ನು ಚರ್ಚೆ ಮಾಡಿ, ನೋಟ್ ಮಾಡಿಕೊಂಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನರಾಜ್ ಅವರು, ಇದೆಲ್ಲಕ್ಕೂ ತಜ್ಞರೊಂದಿಗೆ ಚರ್ಚೆ ಮಾಡಿ, ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಪ್ರಯತ್ನ ಮಾಡುವುದಾಗಿ ಹೇಳಿದರು.ಅಭಿಪ್ರಾಯ ಹೇಳಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಲಾಯಿತು.
ಡಿಡಿಪಿಐ ಶ್ರೀಶೈಲ ಬಿರಾದರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.