ಬಳ್ಳಾರಿ: ಸನ್ಮಾರ್ಗ ಗೆಳೆಯರ ಬಳಗ, ಕನ್ನಡಪ್ರಭ ಪತ್ರಿಕೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಂಡೂರು ತಾಲೂಕಿನ ತೋರಣಗಲ್ಲು ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ಸಿದ್ಧತಾ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಚಾಲನೆ ನೀಡಿ ಮಾತನಾಡಿದ ಸಂಡೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಹಂತವಾಗಿದೆ. ಮುಂದಿನ ವಿದ್ಯಾಭ್ಯಾಸದ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಿದ್ದು ವಿದ್ಯಾರ್ಥಿಗಳ ಸಾಮರ್ಥ್ಯ, ಜ್ಞಾನ, ಶ್ರಮವನ್ನು ಪರೀಕ್ಷಿಸುವ ಪ್ರಮುಖ ಅವಕಾಶವೂ ಇದಾಗಿದೆ. ಜೀವನದ ಗುರಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಶ್ರಮ, ಆತ್ಮವಿಶ್ವಾಸ, ದೃಢ ಸಂಕಲ್ಪದಿಂದ ಪರೀಕ್ಷೆ ಎದುರಿಸಬೇಕು ಎಂದು ತಿಳಿಸಿದರು.

ಸನ್ಮಾರ್ಗ ಗೆಳೆಯರ ಬಳಗ, ಕನ್ನಡಪ್ರಭ ದಿನಪತ್ರಿಕೆ ಪರೀಕ್ಷಾಪೂರ್ವ ಸಿದ್ಧತಾ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಯಾವುದೇ ಫಲಾಪೇಕ್ಷೆ ಇಲ್ಲದೇ ಈ ದಿನಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವುದು ತೀರಾ ಅಪರೂಪ. ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು ಬಳ್ಳಾರಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಲ್ಲೂ ಕಾರ್ಯಾಗಾರಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ ಎಂದು ಸ್ಮರಿಸಿದರು.

ಪ್ರಾಸ್ತಾವಿಕ ಮಾತನಾಡಿದ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ ಕಪ್ಪಗಲ್ಲು, ಸನ್ಮಾರ್ಗ ಗೆಳೆಯರ ಬಳಗದ ಮುಖ್ಯ ಉದ್ದೇಶ ಹಾಗೂ ಈವರೆಗೆ ಕೈಗೊಂಡಿರುವ ಸಮಾಜಮುಖಿ ಸೇವಾ ಕಾರ್ಯಗಳ ಕುರಿತು ಪರಿಚಯಸಿದರು. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಳ್ಳಾರಿ ಜಿಲ್ಲೆ ಉತ್ತಮ ಫಲಿತಾಂಶ ಬರಬೇಕು. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಿಕೊಳ್ಳದೇ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಜಡೇಶ್ ಎಮ್ಮಿಗನೂರು ಅವರು ಕನ್ನಡಗೀತೆಗಳನ್ನು ಹಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಬಿ.ಪುರುಷೋತ್ತಮ ಇಂಗ್ಲೀಷ್ ಮತ್ತು ಗಣಿತ, ಸಿದ್ಧಲಿಂಗೇಶ ವಿಜ್ಞಾನ ಹಾಗೂ ಹರಿಪ್ರಸಾದ್ ಪಿ. ಕನ್ನಡ ವಿಷಯ ಕುರಿತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ, ಸುಲಭವಾಗಿ ಅಂಕಗಳನ್ನು ಪಡೆಯುವ ಬಗೆಯನ್ನು ತಿಳಿಸಿಕೊಟ್ಟರು. ಯಾವುದೇ ಆತಂಕವಿಲ್ಲದೇ ಖುಷಿಯಾಗಿಯೇ ಪರೀಕ್ಷಾ ಕೋಣೆಗೆ ತೆರಳಿ ಪರೀಕ್ಷೆ ಬರೆಯಲು ಶುರು ಮಾಡಿ. ಅರ್ಧಗಂಟೆ ಮುಂಚೆಯೇ ಪರೀಕ್ಷಾ ಕೇಂದ್ರಕ್ಕೆ ತೆರಳಿ. ಪ್ರಶ್ನೆಪತ್ರಿಕೆಗಳನ್ನು ಮೊದಲು ನಿಧಾನವಾಗಿ ಓದಿಕೊಂಡು ಯಾವ ಪ್ರಶ್ನೆಗೆ ಖಚಿತವಾಗಿ ಉತ್ತರ ಗೊತ್ತಿದೆಯೋ ಅದನ್ನು ಮೊದಲು ಬರೆದು ಉಳಿದವುಗಳನ್ನು ನಂತರದ ಆಯ್ಕೆಯಾಗಿಸಿಕೊಳ್ಳಿ ಎಂದು ತಿಳಿಸಿದರು.


ಶಾಲೆಯ ಮುಖ್ಯಗುರು ಅನಿಫಾ ಫಾತಿಮಾ, ಶಿಕ್ಷಣ ಇಲಾಖೆಯ ಧರಿಯಪ್ಪ ರಾಥೋಡ್, ಗುರುಪ್ರಸಾದ್, ವನಿತಾ ಕುರೇಕುಪ್ಪ, ಸಿ.ಆರ್‌.ಪಿ ಯಾಸ್ಮೀನ್, ಪ್ರೇಮಾ ಮತ್ತಿತರರಿದ್ದರು. ಶಿಕ್ಷಣ ಸಂಯೋಜಕ ಗೂಳೆಪ್ಪ ಕಾರ್ಯಕ್ರಮ ನಿರ್ವಹಿಸಿದರು.